ಚನ್ನಪಟ್ಟಣದಲ್ಲಿ ಜಮೀರ್ ಅಹ್ಮದ್ ಪ್ರಚಾರ

| Published : Nov 10 2024, 01:43 AM IST

ಸಾರಾಂಶ

ಚನ್ನಪಟ್ಟಣ: ತೀವ್ರ ಜಿದ್ದಾಜಿದ್ದಿನ ಕ್ಷೇತ್ರವೆನಿಸಿರುವ ಚನ್ನಪಟ್ಟಣ ಉಪ ಚುನಾವಣೆ ಪ್ರಚಾರಕ್ಕೆ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಪ್ರವೇಶ ಮಾಡಿದ್ದಾರೆ.

ಚನ್ನಪಟ್ಟಣ: ತೀವ್ರ ಜಿದ್ದಾಜಿದ್ದಿನ ಕ್ಷೇತ್ರವೆನಿಸಿರುವ ಚನ್ನಪಟ್ಟಣ ಉಪ ಚುನಾವಣೆ ಪ್ರಚಾರಕ್ಕೆ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಪ್ರವೇಶ ಮಾಡಿದ್ದಾರೆ. ಸಂಡೂರು, ಶಿಗ್ಗಾವಿಯಲ್ಲಿ ಒಂದು ವಾರ ಪ್ರಚಾರ ಮುಗಿಸಿ ಶನಿವಾರ ಸಂಜೆ ಚನ್ನಪಟ್ಟಣಕ್ಕೆ ಆಗಮಿಸಿದ ಅವರು, ಕೆಎಂಡಿಸಿ ಅಧ್ಯಕ್ಷ ಬಿ.ಕೆ. ಅಲ್ತಾಫ್ ಖಾನ್ ಜತೆಗೂಡಿ ಸಂಜೆಯಿಂದಲೇ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಪರ ಪ್ರಚಾರ ಆರಂಭಿಸಿದರು. ಇನ್ನು ಮೂರು ದಿನಗಳ ಕಾಲ ಕ್ಷೇತ್ರದಲ್ಲೇ ಠಿಕಾಣಿ ಹೂಡಲಿದ್ದಾರೆ.

ನಗರದಲ್ಲಿ ಅಲ್ಪಸಂಖ್ಯಾತ ಸಮುದಾಯದವರೇ ಹೆಚ್ಚಾಗಿ ವಾಸಿಸುವ ಬಿಸ್ಮಿಲ್ಲಾ ನಗರ, ಬಡಾ ಮಖಾನ್, ಯಾರಬ್ ನಗರದಲ್ಲಿ ಮುಖಂಡರ ಸಭೆ ನಡೆಸಿ ಮಾತನಾಡಿದ ಜಮೀರ್‌, ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆವ ಸರ್ಕಾರವಾಗದೆ. ಐದು ಗ್ಯಾರಂಟಿ ಅನುಷ್ಠಾನ ಮಾಡಿದ್ದೇವೆ ಎಂದು ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ನೀರಾವರಿ ಯೋಜನೆ ಜಾರಿ ಮಾಡುವ ಮೂಲಕ ತಾಲೂಕಿನ ರೈತರ ಆಶಾ ಕಿರಣವಾಗಿದ್ದಾರೆ. ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿಗೆ ದೊಡ್ಡ ಮಟ್ಟದ ಕೊಡುಗೆ ನೀಡಿರುವ ಅವರನ್ನು ಮತ್ತೊಮ್ಮೆ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಮುಸ್ಲಿಂ ಮುಖಂಡರ ಸಭೆ: ಇದೇ ವೇಳೆ ಪ್ರಮುಖ ಮುಸ್ಲಿಂ ಮುಖಂಡರ ಸಭೆ ನಡೆಸಿದ ಜಮೀರ್ ಅಹಮದ್ ಖಾನ್, ಚುನಾವಣೆ ಕಾರ್ಯತಂತ್ರ ಕುರಿತು ಸಮಾಲೋಚನೆ ನಡೆಸಿದರು. ಮುಸ್ಲಿಂ ಸಮುದಾಯದ ಮತಗಳು ಬೇರೆ ಕಡೆ ಚದುರಬಾರದು. ಜತೆಗೆ ಮತದಾನ ಪ್ರಮಾಣ ಹೆಚ್ಚಾಗುವಂತೆ ನೋಡಿಕೊಳ್ಳಬೇಕು. ಇದು ನಮಗೆ ಪ್ರತಿಷ್ಠೆಯ ಚುನಾವಣೆಯಾಗಿದೆ. ಹೀಗಾಗಿ ಸಮುದಾಯ ಪೂರ್ಣ ಪ್ರಮಾಣದಲ್ಲಿ ಕಾಂಗ್ರೆಸ್ ಪರ ನಿಂತು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರಿಗೆ ಬಲ ತುಂಬಬೇಕು ಎಂದು ಮನವಿ ಮಾಡಿದರು.

ಪ್ರಚಾರಕ್ಕೆ ಆಗಮಿಸಿದ ಜಮೀರ್ ಅಹಮದ್ ಖಾನ್ ಅವರೊಂದಿಗೆ ಸಚಿವ ರಹೀಮ್ ಖಾನ್, ಮಾಜಿ ಸಂಸದ ಡಿ.ಕೆ.ಸುರೇಶ್, ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಚರ್ಚೆ ನಡೆಸಿದರು. ಇದೇ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಅಫ್ರೋಜ್ ಅವರು ಜಮೀರ್ ಅಹಮದ್ ಖಾನ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.

ಪೊಟೋ೯ಸಿಪಿಟಿ೭: ಚನ್ನಪಟ್ಟಣದಲ್ಲಿ ಜಮೀರ್ ಅಹ್ಮದ್ ಖಾನ್ ಕಾಂಗ್ರೆಸ್‌ ಅಭ್ಯರ್ಥಿ ಯೋಗೇಶ್ವರ್‌ ಪರ ಪ್ರಚಾರ ನಡೆಸಿದರು.