ಜಮ್ಮಾಬಾಣೆ, ಜಮ್ಮಾಮಲೆ ಗೊಂದಲ ನಿವಾರಣೆಗೆ ಕ್ರಮ: ಶಾಸಕ ಪೊನ್ನಣ್ಣ ಭರವಸೆ

| Published : Nov 10 2023, 01:00 AM IST

ಜಮ್ಮಾಬಾಣೆ, ಜಮ್ಮಾಮಲೆ ಗೊಂದಲ ನಿವಾರಣೆಗೆ ಕ್ರಮ: ಶಾಸಕ ಪೊನ್ನಣ್ಣ ಭರವಸೆ
Share this Article
  • FB
  • TW
  • Linkdin
  • Email

ಸಾರಾಂಶ

ಕೊಡಗಿನ ಜಮ್ಮಾಮಲೆ ಹಿಡುವಳಿದಾರರು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಸನ್ಮಾನಿಸಿ ವಿವಿಧ ಬೇಡಿಕೆಗಳ ಕುರಿತು ಚರ್ಚಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗಿನ ಜಮ್ಮಾಮಲೆ ಹಿಡುವಳಿದಾರರು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಸನ್ಮಾನಿಸಿ ವಿವಿಧ ಬೇಡಿಕೆಗಳ ಕುರಿತು ಚರ್ಚಿಸಿದರು.

ಕಕ್ಕಬ್ಬೆ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ಸಭಾಂಗಣದಲ್ಲಿ ಜಮ್ಮಾಮಲೆ ಅಸೋಸಿಯೇಷನ್ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅಭಿವೃದ್ಧಿ ಪರವಾದ ಬೇಡಿಕೆಗಳ ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿದ ಶಾಸಕರು, ಕೊಡಗಿನ ಜಮ್ಮಾಬಾಣೆ ಮತ್ತು ಜಮ್ಮಾಮಲೆ ಕುರಿತು ನ್ಯಾಯಾಂಗ ತೀರ್ಪು ಹಾಗೂ ಆಡಳಿತಾತ್ಮಕ ಪರಿಹಾರ ದೊರೆತ್ತಿದ್ದರೂ ಇಲ್ಲಿಯವರೆಗೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳ್ಳದೆ ಇರುವುದು ವಿಷಾದನೀಯ ಎಂದರು. ನನಗೆ ಕೆಲವು ದಿನಗಳ ಸಮಯಾವಕಾಶ ನೀಡಿ ಸಹಕರಿಸಿದಲ್ಲಿ ಈ ಎಲ್ಲ ಗೊಂದಲಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಬೇಡಿಕೆಗಳು: ಜಮ್ಮಾಮಲೆ ಅಸೋಸಿಯೇಷನ್ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಶಾಸಕರಿಗೆ ಸಲ್ಲಿಸಿತು. ಜೀವನದಿ ಕಾವೇರಿಯ ಉಗಮಸ್ಥಾನ ತಲಕಾವೇರಿ ಕ್ಷೇತ್ರವನ್ನು ಧಾರ್ಮಿಕ ಕ್ಷೇತ್ರವನ್ನಾಗಿಯೇ ಉಳಿಸಿಕೊಂಡು ಪಾವಿತ್ರ್ಯತೆ ಕಾಪಾಡಲು ಕ್ರಮ ಕೈಗೊಳ್ಳಬೇಕು, ಕಡಂಗದಿಂದ ಭಾಗಮಂಡಲದವರೆಗೆ ಮುಖ್ಯ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕು, ಕಕ್ಕಬ್ಬೆಯಿಂದ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯಕ್ಕೆ ಹೋಗುವ ರಸ್ತೆಯ ಶೇ.5 ರಷ್ಟು ವಿಸ್ತೀರ್ಣ ಕಾಂಕ್ರಿಟೀಕರಣಗೊಳ್ಳಬೇಕು, ಕಕ್ಕಬ್ಬೆ ಸುತ್ತಮುತ್ತ ಗ್ರಾಮಗಳಿಗೆ ಸಮರ್ಪಕವಾಗಿ ವಿದ್ಯುತ್ ಒದಗಿಸಲು ಪ್ರಸ್ತಾವನೆಯಲ್ಲಿರುವ 35 ಕೆ.ವಿ ಸಬ್‌ಸ್ಟೇಷನ್‌ ಕಾಮಗಾರಿಯನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಬೇಕು, ಕಡಂಗದಿಂದ ಭಾಗಮಂಡಲದವರೆಗೆ ಗುಡ್ಡಗಾಡು ಗ್ರಾಮೀಣ ಪ್ರದೇಶ ಇರುವುದರಿಂದ ರಸ್ತೆಗಳನ್ನು ದುರಸ್ತಿಪಡಿಸಬೇಕು, ಕರಡದಿಂದ ಮಲೆತಿರಿಕೆ ದೇವಸ್ಥಾನದ ರಸ್ತೆ ಅಭಿವೃದ್ಧಿ ಪಡಿಸಬೇಕು, ನೂತನ ರಸ್ತೆಗಳನ್ನು ನಿರ್ಮಿಸಬೇಕು, ಕೊಡಗು ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಮಿತಿ ಮೀರಿದ ಸಂಖ್ಯೆಯ ಪ್ರವಾಸಿಗರ ಆಗಮನದಿಂದ ಕೃಷಿ ಕಾರ್ಮಿಕರ ಹಾಗೂ ಕೃಷಿ ಸಂಬಂಧಿತ ಸುಗಮ ಸಂಚಾರಕ್ಕೆ ತೊಡಕಾಗಿರುವುದರಿಂದ ಮುಂದೆ ಸಂಭವಿಸಬಹುದಾದ ಅನಾಹುತಗಳನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು, ಜಿಲ್ಲೆಯಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಾಗುತ್ತಿದ್ದು, ಬೃಹತ್ ರೆಸಾರ್ಟ್ ಗಳ ನಿರ್ಮಾಣ ಮತ್ತು ಲೇಔಟ್ ಗಳಿಗಾಗಿ ಗದ್ದೆಗಳನ್ನು ಭೂಪರಿವರ್ತನೆ ಮಾಡುವುದನ್ನು ನಿರ್ಬಂಧಿಸಬೇಕು ಎಂದು ಪ್ರಮುಖರು ಒತ್ತಾಯಿಸಿದರು.ಇದಕ್ಕೆ ಸ್ಪಂದಿಸಿದ ಶಾಸಕ ಪೊನ್ನಣ್ಣ ಅವರು, ಮನವಿಯಲ್ಲಿ ಉಲ್ಲೇಖಿಸಿರುವ ಎಲ್ಲ ಬೇಡಿಕೆಗಳು ನ್ಯಾಯಯುತವಾಗಿರುವುದರಿಂದ ಈ ಬಗ್ಗೆ ಗಮನಹರಿಸುವುದಾಗಿ ಭರವಸೆ ನೀಡಿದರು.

ಜಮ್ಮಾಮಲೆ ಅಸೋಸಿಯೇಷನ್ನ ಅಧ್ಯಕ್ಷ ಎನ್.ಕೆ. ಪೊನ್ನಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಉದಿಯಂಡ ಮೋಹನ್ ಪೆಮ್ಮಯ್ಯ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ಚೋಯಮಾಡಂಡ ಶಶಿಕಲಾ ಪೂವಯ್ಯ ಪ್ರಾರ್ಥಿಸಿ, ಮಣಿಯಂಡ ಸನ್ನು ಸೋಮಣ್ಣ ನಿರೂಪಿಸಿದರು. ಮಾತೆ ಕಾವೇರಿಯ ಪ್ರತಿಮೆಯನ್ನು ನೀಡಿ ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಇದೇ ಸಂದರ್ಭ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಮನ್ ಸುಬ್ರಮಣಿ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಜಮ್ಮಾಮಲೆ ಅಸೋಸಿಯೇಷನ್ ಸಮಿತಿ ಸದಸ್ಯ ಪೊನ್ನೋಳ್ತಂಡ ಕೆ. ಚಿಣ್ಣಪ್ಪ, ಪೇರಿಯಂಡ ಸಾಬು ಪೂವಯ್ಯ, ಕರಿನೆರವಂಡ ರಮೇಶ್, ಪ್ರಮುಖರಾದ ಕೇಟೋಳಿರ ಗಣಪತಿ, ಅಪ್ಪಾರಂಡ ದೇವಯ್ಯ, ಪಾಂಡಂಡ ನರೇಶ್, ಬೊಳಿಯಾಡಿರ ಸಂತು ಸುಬ್ರಮಣಿ, ಕಾರ್ಯಪ್ಪ, ಕಲಿಯಂಡ ಸಂಪನ್ ಅಯ್ಯಪ್ಪ, ಚೋಯಮಾಡಂಡ ಹರೀಶ್, ಪಾರ್ಥ, ತೊತ್ತಿಯಂಡ ಈಶ್ವರ, ಕರ್ತಂಡ ಶೈಲ ಕುಟ್ಟಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಕಾಳಚಂಡ ರವಿ, ಬಾಚಮಂಡ ರಾಜ ಪೂವಣ್ಣ ಹಾಗೂ ಜಮ್ಮಾಮಲೆ ಹಿಡುವಳಿದಾರರು ಉಪಸ್ಥಿತರಿದ್ದರು.