ಸಾರಾಂಶ
ಜಿ.ಡಿ. ಹೆಗಡೆ
ಕಾರವಾರ: ಪ್ರತಿ ಜಿಲ್ಲೆಯಲ್ಲಿ ಜನರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಜನ ಸ್ಪಂದನ ಕಾರ್ಯಕ್ರಮ ಮಾಡುವಂತೆ ರಾಜ್ಯ ಸರ್ಕಾರದಿಂದ ಆದೇಶವಾಗಿತ್ತು. ಅದರಂತೆ ಉತ್ತರ ಕನ್ನಡದಲ್ಲಿ ವರ್ಷಗಳ ಕಾಲ ನಡೆದಿದ್ದು, ಕೆಲ ತಿಂಗಳಿನಿಂದ ಈ ಕಾರ್ಯಕ್ರಮ ನಡೆಯದೇ ಸಾರ್ವಜನಿಕರಿಗೆ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ.ಕುಮಟಾದ ಹಾಲಕ್ಕಿ ಒಕ್ಕಲಿಗರ ಸಭಾಭವನದಲ್ಲಿ ಆಗಸ್ಟ್ ೨೦೨೪ರಲ್ಲಿ ನಡೆದ ಜಿಲ್ಲಾಮಟ್ಟದ ಕಾರ್ಯಕ್ರಮವೇ ಕೊನೆಯದು. ಆ ಬಳಿಕ ಜಿಲ್ಲೆಯಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು ಒಟ್ಟಾಗಿ ಸಿಗುವ ಜನ ಸ್ಪಂದನ ನಡೆದಿಲ್ಲ. ಇದರಿಂದ ಸಾರ್ವಜನಿಕರಿಗೆ ಸಮಸ್ಯೆಗಳನ್ನು ಹೇಳಿಕೊಳ್ಳಲು ಹಾಗೂ ಪರಿಹಾರ ಕಂಡುಕೊಳ್ಳಲು ತೊಂದರೆ ಆಗುತ್ತಿದೆ.
ಈ ಕಾರ್ಯಕ್ರಮದಲ್ಲಿ ಬಂದ ಮನವಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಲು ಅಧಿಕಾರಿಗಳು ಕ್ರಮವಹಿಸುತ್ತಿದ್ದರು. ಒಂದು ಕೆಲಸಕ್ಕೆ ಹತ್ತಾರು ಬಾರಿ ಜನರಿಗೆ ಕಚೇರಿಯಿಂದ ಕಚೇರಿಗೆ ಅಲೆದಾಡುವ ಪ್ರಮೇಯವೇ ಇರಲಿಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಿತ್ತು. ಅದರಂತೆ ಜಿಲ್ಲಾಧಿಕಾರಿ ಹಾಗೂ ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ತಿಂಗಳಲ್ಲಿ ಒಂದು ಗ್ರಾಮಕ್ಕೆ ತೆರಳಿ ಅಲ್ಲಿನ ಸಮಸ್ಯೆಗಳನ್ನು ಆಲಿಸುತ್ತಿದ್ದರು. ಆಯಾ ಉಪ ವಿಭಾಗಾಧಿಕಾರಿ, ತಹಸೀಲ್ದಾರರೂ ಬೇರೆ ಬೇರೆ ಹಳ್ಳಿಗಳಿಗೆ ಕಡೆ ತೆರಳಿ ಅಹವಾಲು ಸ್ವೀಕರಿಸುತ್ತಿದ್ದರು.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅದರಲ್ಲಿ ತುಸು ಬದಲಾವಣೆ ಮಾಡಿ ಜನ ಸ್ಪಂದನವೆಂದು ಕರೆದು ತಿಂಗಳಲ್ಲಿ ಒಂದು ದಿನ ಒಂದು ತಾಲೂಕನ್ನು ನಿಗದಿ ಪಡಿಸಿ, ಅಲ್ಲಿಗೆ ಜಿಲ್ಲಾಧಿಕಾರಿ ಒಳಗೊಂಡು ಎಲ್ಲ ಇಲಾಖೆಯ ಅಧಿಕಾರಿಗಳು ತೆರಳಿ ದಿನವಿಡಿ ಜನರ ಅಹವಾಲುಗಳನ್ನು ಸ್ವೀಕರಿಸಿ ಪರಿಹಾರ ಒದಗಿಸುತ್ತಿದ್ದರು. ಆಯಾ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರೂ ಕೂಡಾ ಪಾಲ್ಗೊಳ್ಳುತ್ತಿದ್ದರು. ಪ್ರತಿ ಕಾರ್ಯಕ್ರಮದಲ್ಲಿ ನೂರಾರು ಜನರು ಸಮಸ್ಯೆಗಳನ್ನು ಹೇಳಿಕೊಂಡು ಬಂದು ಪರಿಹಾವನ್ನು ಕಂಡುಕೊಳ್ಳುತ್ತಿದ್ದರು.
ಜಿಲ್ಲಾ ಕೇಂದ್ರದಿಂದ ಬಹುತೇಕ ತಾಲೂಕುಗಳು ಸಾಕಷ್ಟು ದೂರದಲ್ಲಿದ್ದು, ಪ್ರಯಾಣದಲ್ಲೇ ಸಮಯ ಹೋಗುತ್ತದೆ. ಹಳ್ಳಿಗಳು ಹೆಚ್ಚಿರುವ ಕಾರಣ ತಾಲೂಕು ಕೇಂದ್ರಕ್ಕೆ ಬರಲೂ ತೊಂದರೆ ಉಂಟಾಗುತ್ತದೆ. ಜಿಲ್ಲಾ ಅಥವಾ ತಾಲೂಕು ಕೇಂದ್ರಕ್ಕೆ ಅಧಿಕಾರಿಗಳನ್ನು ಹುಡುಕಿಕೊಂಡು ಬಂದರೆ ಅವರು ಸಿಗುತ್ತಾರೆ ಎನ್ನುವ ನಂಬಿಕೆಯೂ ಇಲ್ಲ. ಹೀಗಾಗಿ, ಉತ್ತರ ಕನ್ನಡದ ಜನರಿಗೆ ಜನಸ್ಪಂದನ ವರದಾನವಾಗಿತ್ತು. ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಇದು ಉತ್ತಮ ವೇದಿಕೆಯಾಗಿತ್ತು. ಆದರೆ, ಕಳೆದ ೪ ತಿಂಗಳಿನಿಂದ ಜನತಾ ದರ್ಶನ ಜಿಲ್ಲೆಯಲ್ಲಿ ನಡೆದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಮುತುವರ್ಜಿ ವಹಿಸಿ ಪುನಃ ಜನ ಸ್ಪಂದನ ಕಾರ್ಯಕ್ರಮ ಆಯೋಜನೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸುವ ಅಗತ್ಯವಿದೆ. ಈ ಮೂಲಕ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಮುಂದಾಗಬೇಕಿದೆ.ಅರ್ಜಿ ವಿಲೇವಾರಿ
ಜನರ ಸಮಸ್ಯೆಗಳನ್ನು ಇತ್ಯರ್ಥ ಪಡಿಸಲು, ಅರ್ಜಿಗಳನ್ನು ಬೇಗ ವಿಲೇವಾರಿ ಮಾಡುವ ಉದ್ದೇಶದಿಂದ ಜನ ಸ್ಪಂದನ ಆಯೋಜಿಸಿತ್ತು. ಈಗ ಸಭೆಯನ್ನೇ ಮಾಡದೇ ಇರುವುದು ಜನರ ಸಮಸ್ಯೆ ಬಗೆಹರಿಸುವ ಬದ್ಧತೆ ಸರ್ಕಾರಕ್ಕೆ ಇಲ್ಲವೆಂದಾಗುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಹೇಳುತ್ತಾರೆ, ಸರ್ಕಾರ ಬಡವರ ಪರಗಾಂಧಿ ಭಾರತ ಕಾರ್ಯಕ್ರಮದ ತಯಾರಿ ಹಿನ್ನೆಲೆಯಲ್ಲಿ ಜನಸ್ಪಂದನ ಕಾರ್ಯಕ್ರಮ ಆಯೋಜನೆ ಮಾಡುವಲ್ಲಿ ವ್ಯತ್ಯಾಸವಾಗಿರಬಹುದು. ನಮ್ಮ ಸರ್ಕಾರ ಬಡವರ ಪರವಾಗಿದೆ. ಬೆಳಗಾವಿ ಕಾರ್ಯಕ್ರಮದ ನಂತರ ಆಯೋಜನೆ ಮಾಡಲಾಗುತ್ತದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವಕರ ಹೇಳಿದ್ದಾರೆ.