ಸಾರಾಂಶ
ಚನ್ನಪಟ್ಟಣ: ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಜನ ರಾಜ್ಯದ ಸಂಪನ್ಮೂಲಗಳನ್ನು ಲೂಟಿ ಮಾಡುವ ದಂಧೆಕೋರರನ್ನು ಆರಿಸುತ್ತಾರೆಯೇ ಹೊರತು ಉತ್ತಮ ಆಡಳಿತ ನೀಡಲು ಕಂಕಣಬದ್ಧರಾಗಿರುವ ನನ್ನಂತಹ ರಾಜಕಾರಣಿಗೆ ಅವಕಾಶ ನೀಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾರ್ಮಿಕವಾಗಿ ನುಡಿದರು.
ತಾಲೂಕಿನ ಬೇವೂರು ಮಂಡ್ಯದ ಯೋಗಾ ನರಸಿಂಹಸ್ವಾಮಿ ಪ್ರೌಢಶಾಲೆಯ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ, ಆರೋಗ್ಯ, ಕೃಷಿ, ಯುವಜನ ಸೇವೆಗೆ ನಾನು ಆದ್ಯತೆ ನೀಡಿದ್ದೆ. ಇವುಗಳನ್ನೇ ಇಟ್ಟುಕೊಂಡು ಪಂಚರತ್ನ ಯಾತ್ರೆ ನಡೆಸಿ ಜನರ ಮುಂದೆ ಹೋದೆ. ಆದರೆ, ಅವುಗಳನ್ನು ಅನುಷ್ಠಾನಗೊಳಿಸಲು ರಾಜ್ಯದ ಜನತೆ ನಮಗೆ ಅವಕಾಶ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಮುಂದಿನ ದಿನಗಳಲ್ಲಾದರೂ ನನ್ನ ಯೋಜನೆಗಳನ್ನು ಜಾರಿಗೊಳಿಸಲು ಜನ ಸದವಕಾಶ ನೀಡುತ್ತಾರೆ ಎಂಬ ಆಶಾಭಾವನೆ ಇನ್ನೂ ಉಳಿದಿದೆ. ನಾನು ಸಿಎಂ ಆಗಿದ್ದ ಅವಧಿಯಲ್ಲಿ ಕನ್ನಡ ಮಾಧ್ಯಮ ಶಾಲೆಗಳ ಸಮಗ್ರ ಅಭಿವೃದ್ಧಿ ಜೊತೆಗೆ, ಇಂಗ್ಲಿಷ್ ಮಾಧ್ಯಮದ ಕೆಪಿಎಸ್ ಶಾಲೆಗಳನ್ನು ತೆರೆದು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟ ಸಂತೃಪ್ತಿ ನನಗಿದೆ ಎಂದರು.
ಅಭಿವೃದ್ಧಿಗೆ ಬದ್ಧ:ಕೆಲಸಗಳ ಒತ್ತಡದ ಕಾರಣದಿಂದ ನಾನು ಕ್ಷೇತ್ರಕ್ಕೆ ನಿರಂತರವಾಗಿ ಬರಲು ಆಗದಿದ್ದರೂ ಕ್ಷೇತ್ರದ ಅಧಿಕಾರಿಗಳ ಜತೆಗೆ ನಿರಂತರ ಸಂಪರ್ಕದಲ್ಲಿದ್ದು, ಕ್ಷೇತ್ರಕ್ಕೆ ಆಗಬೇಕಾದ ಕೆಲಸ ಕಾರ್ಯಗಳನ್ನು ಮಾಡಿಕೊಡುತ್ತಿದ್ದೇನೆ. ಬರ ನಿರ್ವಹಣೆ, ರಸ್ತೆ ನಿರ್ಮಾಣ ಸೇರಿದಂತೆ ಮೂಲ ಸವಲತ್ತುಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ವಹಿಸುತ್ತಿದ್ದು, ನನ್ನ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಾನು ಸದಾ ಬದ್ಧವಾಗಿದ್ದೇನೆ ಎಂದು ತಿಳಿಸಿದರು.
ಪಟ್ಟನಾಯಕನಹಳ್ಳಿ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಆಶೀರ್ವಚನ ನೀಡಿ, ಮಾನವೀಯ ಮೌಲ್ಯಗಳನ್ನು ವೃದ್ಧಿಸುವಂತಹ ಶಿಕ್ಷಣ ನೀಡುವ ಹೊಣೆಗಾರಿಕೆ ಶಿಕ್ಷಣ ಸಂಸ್ಥೆಗಳ ಮೇಲಿದೆ. ಸರ್ಕಾರದ ನಿಯಮಾನುಸಾರ ಗುಣಮಟ್ಟ ಹಾಗೂ ಮೌಲ್ಯಯುತ ಶಿಕ್ಷಣ ನೀಡುವುದು ಶಿಕ್ಷಣ ಸಂಸ್ಥೆಗಳ ಪ್ರಥಮ ಆದ್ಯತೆ ಆಗಬೇಕು ಎಂದು ಹೇಳಿದರು.ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಗೋಪಾಲಗೌಡ ಮಾತನಾಡಿ, ಗ್ರಾಮೀಣ ಮಕ್ಕಳು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತಹ ಶಿಕ್ಷಣ ನೀಡಬೇಕಾದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕರ್ತವ್ಯ. ಎಲ್ಲ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರಕಿಸಲು ಸರ್ಕಾರಗಳು ಮುಂದಾಬೇಕು. ನಾಡಿನ ಮಣ್ಣಿನ ಮಕ್ಕಳ ಪ್ರತಿನಿಧಿಯಾಗಿ ದೇಶದ ಪ್ರಧಾನ ಮಂತ್ರಿಯಂತಹ ಅತ್ಯುನ್ನತ ಸ್ಥಾನ ಅಲಂಕರಿಸಿ ಉತ್ತಮ ಆಡಳಿತ ನೀಡಿದ ಎಚ್.ಡಿ.ದೇವೇಗೌಡರಿಗೆ ಕೇಂದ್ರ ಸರ್ಕಾರ ಭಾರತ ರತ್ನ ನೀಡಬೇಕು ಎಂದು ಆಗ್ರಹಿಸಿದರು.
ಯೋಗಾ ನರಸಿಂಹಸ್ವಾಮಿ ಪ್ರೌಢಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಹಾಪ್ ಕಾಮ್ಸ್ ಸಿ.ದೇವರಾಜು ಅಧ್ಯಕ್ಷತೆ ವಹಿಸಿದ್ದರು. ಮಾಗಡಿ ಮಾಜಿ ಶಾಸಕ ಎ.ಮಂಜುನಾಥ್, ಒಕ್ಕಲಿಗರ ಸಂಘದ ನಿರ್ದೇಶಕ ತೌಟನಹಳ್ಳಿ ಪುಟ್ಟಸ್ವಾಮಿ, ಬಮೂಲ್ ನಿರ್ದೇಶಕ ಎಚ್.ಸಿ.ಜಯಮುತ್ತು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಕ್ಕೂರುದೊಡ್ಡಿ ಜಯರಾಮು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಯೋಗಾ ನರಸಿಂಹಸ್ವಾಮಿ ಪ್ರೌಢಶಾಲೆ ಆಡಳಿತ ಮಂಡಳಿ ಉಪಾಧ್ಯಕ್ಷ ನಂಜೇಗೌಡ, ಕಾರ್ಯದರ್ಶಿ ತಿಮ್ಮರಾಯಿಗೌಡ, ಖಜಾಂಚಿ ಮರಿಮಲ್ಲಯ್ಯ, ಸಹ ಕಾರ್ಯದರ್ಶಿ ಮಾಗನೂರು ಗಂಗರಾಜು, ನಿರ್ದೇಶಕರಾದ ಕೆ.ಮಹೇಶ್, ಬಿ.ಮಹೇಶ್, ಜಿ.ಪುಟ್ಟಲಿಂಗೇಗೌಡ, ಶೈಲಾ ನಟರಾಜ್ ಇತರರು ಉಪಸ್ಥಿತರಿದ್ದರು.ಬಾಕ್ಸ್................ದೇವೇಗೌಡರಿಗೆ ಭಾರತ ರತ್ನ ನೀಡಿ
ಸರ್ವೋಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾ.ಗೋಪಾಲಗೌಡರು ಮಾಜಿ ಪ್ರಧಾನಿ ದೇವೇಗೌಡ ಅವರಿಗೆ ಭಾರತ ರತ್ನ ನೀಡಬೇಕು ಎಂದು ಹೇಳಿದ್ದನ್ನು ಪಟ್ಟನಾಯಕನಹಳ್ಳಿ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಅನುಮೋದಿಸಿದರು. ದೇವೇಗೌಡರು ಇಡೀ ದೇಶವನ್ನು ಒಗ್ಗೂಡಿಸಬೇಕು ಎಂದು ಬಯಸುವವರು. ಎಲ್ಲಾ ಸಮುದಾಯದ ಜನರನ್ನು ಅತ್ಯಂತ ಪ್ರೀತಿಯಿಂದ ಕಾಣುವ, ದೇಶವನ್ನು ಉತ್ಕಟವಾಗಿ ಪ್ರೇಮಿಸುವ, ಕನ್ನಡ ನಾಡಿನ ಮಣ್ಣಿನ ಮಕ್ಕಳ ಪ್ರತಿನಿಧಿಯಾದ ಅವರಿಗೆ ಕೇಂದ್ರ ಸರ್ಕಾರ ಭಾರತ ರತ್ನ ನೀಡುವ ಮೂಲಕ ದೇಶದ ರೈತ ಸಮುದಾಯವನ್ನು ಗೌರವಿಸಿದ ಕೀರ್ತಿಗೆ ಪಾತ್ರವಾಗಬೇಕು ಎಂದರು. ಬಾಕ್ಸ್..........ಹಿಜಾಬ್ ಪ್ರಕರಣ ಈ ಹಿಂದೆಯೇ ಮುಗಿದಿತ್ತು
ಚನ್ನಪಟ್ಟಣ: ಹಿಜಾಬ್ ಪ್ರಕರಣ ಈ ಹಿಂದೆಯೇ ಮುಗಿದಿತ್ತು. ರಾಜ್ಯದಲ್ಲಿ ಹಲವಾರು ಸಮಸ್ಯೆಗಳಿವೆ. ಅದಕ್ಕೆ ಸೂಕ್ತ ಪರಿಹಾರ ಹುಡುಕಬೇಕಿದೆ. ಆದರೆ ಮರೆತುಹೋಗಿದ್ದನ್ನ ನೆನಪಿಸಿ, ಶಾಲಾ ಮಕ್ಕಳಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯಗೆ ಮಾಜಿ ಸಿಎಂ ಕುಮಾರಸ್ವಾಮಿ ಪರೋಕ್ಷ ಟಾಂಗ್ ನೀಡಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಮತ ಪಡೆಯಲು ಈ ರೀತಿ ಮಾತನಾಡುತ್ತಿದ್ದಾರೆ. ಇದು ರಾಜ್ಯದ ಜನರಿಗೂ ಗೊತ್ತಾಗುತ್ತಿದೆ. ಹಾಗಾಗಿ ಈಗ ನಾನು ಆ ರೀತಿ ಹೇಳಿಲ್ಲ ಎನ್ನುತ್ತಿದ್ದಾರೆ ಎಂದು ಕಿಡಿಕಾರಿದರು. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸೂಕ್ತ ಸಂದರ್ಭದಲ್ಲಿ ಆ ವಿಚಾರದ ಕುರಿತು ಮಾತನಾಡುತ್ತೇನೆ ಎಂದರು.ಪೊಟೋ೨೪ಸಿಪಿಟಿ4,5:
ಚನ್ನಪಟ್ಟಣ ತಾಲೂಕಿನ ಬೇವೂರು ಮಂಡ್ಯದ ಯೋಗಾ ನರಸಿಂಹಸ್ವಾಮಿ ಪ್ರೌಢಶಾಲೆಯ ರಜತ ಮಹೋತ್ಸವ ಸಂಭ್ರಮ ಕಾರ್ಯಕ್ರಮವನ್ನು ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಅತಿಥಿಗಳು ಉದ್ಘಾಟಿಸಿದರು.