ಜಾಣಗೆರೆ ವೆಂಕಟರಾಮಯ್ಯ, ಪರಿಷತ್ತಿನ ಘನತೆ ಹಾಗೂ ಸ್ವಾಯತ್ತತೆಯನ್ನು ಕಾಪಾಡುವ ಉದ್ದೇಶದಿಂದ ಚುನಾವಣಾ ಕಣಕ್ಕಿಳಿಯಲು ಸಿದ್ಧನಾಗಿದ್ದೇನೆ ಎಂದು ತಿಳಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಕೇವಲ ಆಡಳಿತಾತ್ಮಕ ಸಂಸ್ಥೆಯಾಗದೆ ಕನ್ನಡ ನಾಡು, ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಮಗ್ರ ಪ್ರತಿನಿಧಿ ಸಂಸ್ಥೆಯಾಗಿ ಬೆಳೆಯಬೇಕು ಎಂಬುದು ತಮ್ಮ ಆಶಯ ಎಂದು ಅವರು ಹೇಳಿದ್ದಾರೆ. ಪರಿಷತ್ತಿನ ಬಾಗಿಲುಗಳು ಸಾಹಿತಿಗಳು ಮತ್ತು ಪದಾಧಿಕಾರಿಗಳಿಗೆ ಮಾತ್ರ ಸೀಮಿತವಾಗದೆ, ಓದುಗರು, ಯುವ ಬರಹಗಾರರು, ಕಲಾವಿದರು ಹಾಗೂ ಸಾಮಾನ್ಯ ಕನ್ನಡಾಭಿಮಾನಿಗಳಿಗೂ ತೆರೆದಿರಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಹಾಸನ
ಶತಮಾನಕ್ಕೂ ಹೆಚ್ಚು ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತನ್ನು ಮತ್ತೆ ಕನ್ನಡಿಗರ ಜೀವಂತ ಸಾಂಸ್ಕೃತಿಕ ವೇದಿಕೆಯನ್ನಾಗಿ ರೂಪಿಸುವ ಚರ್ಚೆ ತೀವ್ರಗೊಂಡಿರುವ ನಡುವೆಯೇ, ಹಿರಿಯ ಪತ್ರಕರ್ತ, ಸಾಹಿತಿ ಹಾಗೂ ಕನ್ನಡಪರ ಹೋರಾಟಗಾರ ಜಾಣಗೆರೆ ವೆಂಕಟರಾಮಯ್ಯ ಅವರ ಹೆಸರು ಮುಂಬರುವ ಕೇಂದ್ರ ಅಧ್ಯಕ್ಷರ ಚುನಾವಣೆಗೆ ಮುನ್ನೆಲೆಗೆ ಬಂದಿದೆ ಎಂದು ಹಿರಿಯ ಸಾಹಿತಿಗಳು, ಕನ್ನಡಪರ ಹೋರಾಟಗಾರರು ಹಾಗೂ ಚಿಂತಕರು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತ, ಸ್ವಾಯತ್ತತೆ ಹಾಗೂ ಸಂಸ್ಥೆಯ ಮೂಲ ಆಶಯಗಳ ಕುರಿತು ಕಳೆದ ಕೆಲವು ವರ್ಷಗಳಿಂದ ಸಾಹಿತ್ಯಿಕ ಮತ್ತು ಕನ್ನಡಪರ ವಲಯಗಳಲ್ಲಿ ಚರ್ಚೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ‘ಕಸಾಪ ಉಳಿಸಿ’ ಚಳವಳಿಯಲ್ಲಿ ಭಾಗವಹಿಸಿದ್ದ ಸಾಹಿತಿಗಳು, ಕಲಾವಿದರು ಹಾಗೂ ನಾಡಪರ ಹೋರಾಟಗಾರರು ಜಾಣಗೆರೆ ವೆಂಕಟರಾಮಯ್ಯ ಅವರನ್ನು ಕೇಂದ್ರ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವಂತೆ ಒಮ್ಮತದಿಂದ ಆಹ್ವಾನಿಸಿದ್ದಾರೆ. ಆಹ್ವಾನವನ್ನು ಸ್ವೀಕರಿಸಿರುವ ಜಾಣಗೆರೆ ವೆಂಕಟರಾಮಯ್ಯ, ಪರಿಷತ್ತಿನ ಘನತೆ ಹಾಗೂ ಸ್ವಾಯತ್ತತೆಯನ್ನು ಕಾಪಾಡುವ ಉದ್ದೇಶದಿಂದ ಚುನಾವಣಾ ಕಣಕ್ಕಿಳಿಯಲು ಸಿದ್ಧನಾಗಿದ್ದೇನೆ ಎಂದು ತಿಳಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಕೇವಲ ಆಡಳಿತಾತ್ಮಕ ಸಂಸ್ಥೆಯಾಗದೆ ಕನ್ನಡ ನಾಡು, ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಮಗ್ರ ಪ್ರತಿನಿಧಿ ಸಂಸ್ಥೆಯಾಗಿ ಬೆಳೆಯಬೇಕು ಎಂಬುದು ತಮ್ಮ ಆಶಯ ಎಂದು ಅವರು ಹೇಳಿದ್ದಾರೆ. ಪರಿಷತ್ತಿನ ಬಾಗಿಲುಗಳು ಸಾಹಿತಿಗಳು ಮತ್ತು ಪದಾಧಿಕಾರಿಗಳಿಗೆ ಮಾತ್ರ ಸೀಮಿತವಾಗದೆ, ಓದುಗರು, ಯುವ ಬರಹಗಾರರು, ಕಲಾವಿದರು ಹಾಗೂ ಸಾಮಾನ್ಯ ಕನ್ನಡಾಭಿಮಾನಿಗಳಿಗೂ ತೆರೆದಿರಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ. ಸುಮಾರು ೧೧೨ ವರ್ಷಗಳ ಇತಿಹಾಸ ಹೊಂದಿರುವ ಪರಿಷತ್ತಿನ ಸ್ಥಾಪನೆಯ ಹಿಂದಿನ ಆಶಯ ಸಾಮಾಜಿಕ ನ್ಯಾಯ, ಸಮಾನ ಅವಕಾಶ ಮತ್ತು ಕನ್ನಡದ ಸಾಂಸ್ಕೃತಿಕ ಬೆಳವಣಿಗೆಯಾಗಿತ್ತು. ಮೈಸೂರು ಸಂಸ್ಥಾನದ ಕಾಲಘಟ್ಟದಲ್ಲಿ ಬಲವಾದ ಅಡಿಪಾಯ ಪಡೆದ ಈ ಸಂಸ್ಥೆ, ಕಾಲಕ್ಕೆ ತಕ್ಕಂತೆ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದರೂ, ಅದರ ಮೂಲ ಮೌಲ್ಯಗಳನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ಸಾಹಿತ್ಯಿಕ ವಲಯಗಳಲ್ಲಿ ವ್ಯಕ್ತವಾಗುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ಪರಿಷತ್ತಿನ ಆಡಳಿತಕ್ಕೆ ಸಂಬಂಧಿಸಿದಂತೆ ಕೇಳಿಬಂದ ವಿವಾದಗಳು ಹಾಗೂ ಆರೋಪಗಳ ಹಿನ್ನೆಲೆಯಲ್ಲಿ ‘ಕಸಾಪ ಉಳಿಸಿ, ದುರಾಡಳಿತ ತಪ್ಪಿಸಿ’ ಎಂಬ ಘೋಷಣೆಯೊಂದಿಗೆ ಹೋರಾಟವೂ ನಡೆದಿತ್ತು. ನಂತರ ಸರ್ಕಾರ ಆಡಳಿತಾತ್ಮಕ ಕ್ರಮಗಳನ್ನು ಕೈಗೊಂಡು ಪರಿಷತ್ತಿನ ನಿರ್ವಹಣೆಗೆ ಆಡಳಿತಾಧಿಕಾರಿಯನ್ನು ನೇಮಿಸಿದ್ದು, ಮುಂದಿನ ಚುನಾವಣಾ ಪ್ರಕ್ರಿಯೆಗೆ ಚುನಾವಣಾಧಿಕಾರಿಯನ್ನೂ ನೇಮಿಸಲಾಗಿದೆ ಎಂದು ಜಾಣಗೆರೆ ವೆಂಕಟರಾಮಯ್ಯ ತಿಳಿಸಿದ್ದಾರೆ.
ಪರಿಷತ್ತಿನ ಅಧ್ಯಕ್ಷ ಸ್ಥಾನವು ಅಧಿಕಾರದ ಕೇಂದ್ರವಾಗದೆ ಸೇವೆಯ ಜವಾಬ್ದಾರಿಯ ಕೇಂದ್ರವಾಗಬೇಕು ಎಂಬುದು ತಮ್ಮ ನಿಲುವು ಎಂದು ಅವರು ಹೇಳಿದ್ದಾರೆ. ಸಾಹಿತ್ಯ ಕ್ಷೇತ್ರದ ಬೆಳವಣಿಗೆ, ಯುವ ಬರಹಗಾರರಿಗೆ ಪ್ರೋತ್ಸಾಹ, ಪುಸ್ತಕ ಸಂಸ್ಕೃತಿಯ ವಿಸ್ತರಣೆ ಹಾಗೂ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಸಾಹಿತ್ಯಿಕ ಚಟುವಟಿಕೆಗಳಿಗೆ ಹೊಸ ಚೈತನ್ಯ ನೀಡುವುದು ಪರಿಷತ್ತಿನ ಪ್ರಮುಖ ಆದ್ಯತೆಗಳಾಗಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಪರಿಷತ್ತಿನ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಆರ್ಥಿಕ ಶಿಸ್ತು ಅತ್ಯಗತ್ಯ. ಯಾವುದೇ ವ್ಯಕ್ತಿ ಅಥವಾ ಗುಂಪಿನ ಹಿತಾಸಕ್ತಿಗಿಂತ ಸಂಸ್ಥೆಯ ಹಿತಾಸಕ್ತಿ ಮೇಲುಗೈ ಸಾಧಿಸುವಂತಹ ಆಡಳಿತ ವ್ಯವಸ್ಥೆ ರೂಪುಗೊಳ್ಳಬೇಕು. ಬೈಲಾ ಮತ್ತು ನಿಯಮಗಳಲ್ಲಿ ಬದಲಾವಣೆ ಮಾಡುವ ಸಂದರ್ಭದಲ್ಲಿಯೂ ಸಂಸ್ಥೆಯ ದೀರ್ಘಕಾಲೀನ ಹಿತಾಸಕ್ತಿಗೆ ಆದ್ಯತೆ ನೀಡಬೇಕು ಎಂಬುದು ಕನ್ನಡಪರ ವಲಯದ ಒತ್ತಾಯವಾಗಿದೆ. ಜಾಣಗೆರೆ ವೆಂಕಟರಾಮಯ್ಯ ಅವರು ಚುನಾವಣೆಯಲ್ಲಿ ಗೆದ್ದರೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸದಸ್ಯರು, ಸಾಹಿತಿಗಳು, ಕಲಾವಿದರು ಹಾಗೂ ಕನ್ನಡ ಸಂಘಟನೆಗಳೊಂದಿಗೆ ನೇರ ಸಂವಾದ ನಡೆಸುವ ಮೂಲಕ ಪರಿಷತ್ತಿನ ಮುಂದಿನ ದಿಕ್ಕಿನ ಕುರಿತು ಸಮಾಲೋಚನೆ ನಡೆಸುವ ಉದ್ದೇಶ ಹೊಂದಿದ್ದಾರೆ ಎಂದು ಬೆಂಬಲಿಗರು ತಿಳಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಕೆಲವೇ ವ್ಯಕ್ತಿಗಳ ಸಂಸ್ಥೆಯಾಗದೆ, ಸಮಸ್ತ ಕನ್ನಡಿಗರ ಸಾಂಸ್ಕೃತಿಕ ವೇದಿಕೆಯಾಗಬೇಕು. ಸಾಹಿತ್ಯ, ಸಂಸ್ಕೃತಿ ಮತ್ತು ಕನ್ನಡದ ಅಸ್ಮಿತೆಯನ್ನು ಒಟ್ಟುಗೂಡಿಸುವ ಜನಮುಖಿ ಸಂಸ್ಥೆಯಾಗಿ ಪರಿಷತ್ತನ್ನು ಪುನಶ್ಚೇತನಗೊಳಿಸಬೇಕೆಂಬ ಆಶಯದೊಂದಿಗೆ ಜಾಣಗೆರೆ ವೆಂಕಟರಾಮಯ್ಯ ಅವರ ಅಭ್ಯರ್ಥಿತ್ವಕ್ಕೆ ಬೆಂಬಲ ವ್ಯಕ್ತವಾಗುತ್ತಿದೆ.ಪತ್ರಿಕಾಗೋಷ್ಠಿಯಲ್ಲಿ ಕನ್ನಡಪರ ಹೋರಾಟಗಾರ ಬಾಳ್ಳು ಗೋಪಾಲ್, ಸಿ. ಕೆ. ರಾಮೇಗೌಡ, ನಂಜುಂಡೇಗೌಡ, ಆರ್. ಜೆ. ಹಳ್ಳಿ ನಾಗರಾಜ್, ಜಯಪ್ರಕಾಶ್ ಗೌಡ, ಧರ್ಮರಾಜ್ ಇತರರು ಉಪಸ್ಥಿತರಿದ್ದರು.
======ಫೊಟೋ:
ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಸಾಹಿತಿಗಳು, ಕನ್ನಡಪರ ಹೋರಾಟಗಾರರು ಹಾಗೂ ಚಿಂತಕರು ಮಾತನಾಡಿದರು.