ಸಾರಾಂಶ
ಗಾಂಧಿ ಸ್ಮರಣೆ, ಜನಜಾಗೃತಿ ಸಮಾವೇಶ ಉದ್ಘಾಟಿಸಿದ ಶಾಸಕಕನ್ನಡಪ್ರಭ ವಾರ್ತೆ ಯಲ್ಲಾಪುರ
ಕೋಟ್ಯಂತರ ಭಕ್ತರನ್ನು ಹೊಂದಿದ ಧರ್ಮಸ್ಥಳ ಕಳೆದ ೨೦ ವರ್ಷಗಳಿಂದ ಹಲವರ ಅಪಪ್ರಚಾರ, ಆಪಾದನೆಗಳಿಗೆ ಎಸ್‌ಐಟಿ ತನಿಖೆಯಿಂದ ಸಂಪೂರ್ಣವಾಗಿ ಮುಕ್ತವಾಗಿದೆ. ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆಸಿದವರಿಗೆ ಮಂಜುನಾಥ ಸ್ವಾಮಿಯ ಮತ್ತು ಹೆಗ್ಗಡೆಯವರ ಸತ್ಸಂಕಲ್ಪ, ಸತ್ಕಾರ್ಯದಿಂದಾಗಿ ದೇವರು ತಕ್ಕ ಪ್ರಾಯಶ್ಚಿತ ನೀಡಿದ್ದಾನೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.ಶನಿವಾರ ಪಟ್ಟಣದ ರೈತ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಯಲ್ಲಾಪುರ, ಮುಂಡಗೋಡು, ಶಿರಸಿ ಜಿಲ್ಲೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡ ಗಾಂಧಿ ಸ್ಮರಣೆ ಮತ್ತು ಬೃಹತ್ ಜನಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ದುಶ್ಚಟಗಳಿಂದ ಕುಟುಂಬ ವ್ಯವಸ್ಥೆ ನಾಶ ಮಾಡಿಕೊಂಡ ಅನೇಕ ಕುಟುಂಬಗಳಿಗೆ ಪರಿವರ್ತನೆಯ ದಾರಿ ತೋರಿಸಿ, ಗಾಂಧೀಜಿ ಕನಸನ್ನು ಜನಜಾಗೃತಿ ವೇದಿಕೆ ಮಾಡುತ್ತಿರುವುದು ಮಾದರಿಯಾಗಿದೆ. ಸುಸಂಸ್ಕೃತ ಸಮಾಜ ನಿರ್ಮಿಸುವಲ್ಲಿ ಈ ಸಂಘಟನೆ ಶ್ರಮಿಸುತ್ತಿದೆ. ಬದುಕಿನಲ್ಲಿ ತೀರಾ ಕಷ್ಟದಲ್ಲಿರುವವರಿಗೆ ಬದುಕನ್ನು ನೀಡಿದೆ. ಬ್ಯಾಂಕುಗಳು ಜನಸಾಮಾನ್ಯರಿಗೆ ಸಾಲ ನೀಡದ ಕಾಲಘಟ್ಟದಲ್ಲಿ ಈ ಸಂಸ್ಥೆ ಹಳ್ಳಿಹಳ್ಳಿಗೆ ಹೋಗಿ ಆರ್ಥಿಕ, ಶೈಕ್ಷಣಿಕ, ಆರೋಗ್ಯ ಸೇರಿದಂತೆ ಅನೇಕ ರೀತಿಯ ನೆರವು ನೀಡಿ, ಸ್ತ್ರೀಶಕ್ತಿಯನ್ನು ಸಬಲೀಕರಣಗೊಳಿಸುವಲ್ಲಿ ಹೆಗ್ಗಡೆಯವರ ಸಂಕಲ್ಪಶಕ್ತಿಯಂತೆ ರಾಜ್ಯದಲ್ಲಿ ಬಡತನ ನಿರ್ಮೂಲನೆಗೆ ಮಹತ್ವದ ಪಾತ್ರ ವಹಿಸುತ್ತಿದೆ. ನೆಮ್ಮದಿಯ ಬದುಕನ್ನು ರೂಪಿಸುವಲ್ಲಿ ಸಂಘಟನೆ, ಶಿಸ್ತು ಅನುಕರಣೀಯವಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಶಿರಸಿ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಕಾಳಿಂಗರಾಜ್ ಎಂ.ಎಸ್. ಮಾತನಾಡಿ, ಒಂದು ಕುಟುಂಬ ಸುವ್ಯವಸ್ಥಿತವಾಗಿ ಬದುಕಬೇಕಾದರೆ ಮಹಿಳೆಯರ ಪಾತ್ರ ಮಹತ್ವದ್ದು, ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಜನಜಾಗೃತಿ ವೇದಿಕೆ ಮಹತ್ವದ ಪಾತ್ರ ವಹಿಸುತ್ತಿದೆ. ೨೦೦೦ದ ಮದ್ಯವರ್ಜನ ಶಿಬಿರವನ್ನು ಸದ್ಯದಲ್ಲಿಯೇ ನಡೆಸಲಾಗುತ್ತಿದೆ. ಪೂಜ್ಯ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಗಾಂಧೀಜಿಯವರ ಕನಸನ್ನು ನನಸಾಗಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
ವಿಶ್ವದರ್ಶನ ಪಿಯು ಕಾಲೇಜು ಪ್ರಾಚಾರ್ಯ ಡಾ. ಡಿ.ಕೆ. ಗಾಂವ್ಕರ ಮಾತನಾಡಿ, ಮಕ್ಕಳಿಗೆ ವಿದ್ಯೆ ಮತ್ತು ಕೌಶಲ್ಯವನ್ನು ನೀಡುವ ಮೂಲಕ ರಾಷ್ಟ್ರದ ಸಂಪತ್ತನ್ನಾಗಿಸಬೇಕು. ಆ ನೆಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಉತ್ತಮ ಕಾರ್ಯ ಮಾಡುತ್ತಿದೆ ಎಂದರು.ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ ಎಂ. ಆಶಯ ಮಾತನಾಡಿ, ಸಮಾಜವನ್ನು ದುಶ್ಚಟದಿಂದ ಮುಕ್ತವಾಗಿಸುವ ಉದ್ದೇಶದಿಂದ ರಾಜ್ಯದೆಲ್ಲೆಡೆ ಜನಜಾಗೃತಿ ವೇದಿಕೆ ಕಾರ್ಯ ಮಾಡುತ್ತಿದೆ. ಈಗಾಗಲೇ ೧೯೯೫ ಮದ್ಯವರ್ಜನ ಶಿಬಿರ ಮಾಡಲಾಗಿದೆ. ಅಲ್ಲದೇ ೧.೫೦ ಕೋಟಿ ಸಾಲ ನೀಡಲಾಗಿದೆ. ೧.೩೩ ಲಕ್ಷ ಜನರನ್ನು ಕುಡಿತದಿಂದ ರಕ್ಷಣೆ ಮಾಡಲಾಗಿದೆ. ೧೦೭೪ ಶಿಕ್ಷಕರನ್ನು ನೇಮಿಸಿ ಅವರ ಸಂಬಳಕ್ಕಾಗಿ ೨೯ ಕೋಟಿ ಖರ್ಚು ಮಾಡಲಾಗಿದೆ ಎಂದು ಸಂಸ್ಥೆಯ ವಿವರವಾದ ಮಾಹಿತಿ ನೀಡಿದರು.
ಪಪಂ ಅಧ್ಯಕ್ಷೆ ನರ್ಮದಾ ನಾಯ್ಕ, ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಡಿ.ಎನ್. ಗಾಂವ್ಕಾರ, ಜಿಲ್ಲಾ ಸದಸ್ಯರಾದ ಎಂ.ಪಿ. ಕುಸೂರು, ಸುಭಾಸ್ ನಾಯ್ಕ, ಲಕ್ಷ್ಮೀರಾಜು, ಗಣಪತಿ ಗೌಡ, ಶಂಕರ ಭಟ್ಟ, ಗುರುರಾಜ ಶಾನಭಾಗ, ಗೌರಿ ನಾಯ್ಕ, ವಿವೇಕ ರಾಯ್ಕರ್, ರಾಮು ಕಿಣಿ, ಸಂಧ್ಯಾ ಕುರ್ಡೆಕರ್, ಕುಮದಾ ಸಾಣೆ, ಪ್ರತಿನಿಧಿ ಮಾಲತೇಶ ಭಾಗವಹಿಸಿದ್ದರು. ನವಜೀವನ ಸಮಿತಿಯ ಐದು ಜನರನ್ನು ಗೌರವಿಸಲಾಯಿತು.ಯಲ್ಲಾಪುರ ಸೇವಾ ಪ್ರತಿನಿಧಿ ಬಳಗ ದೇವಗೀತೆ ಪ್ರಸ್ತುತಪಡಿಸಿದರು. ಜಿಲ್ಲಾ ನಿರ್ದೇಶಕ ರವಿ ಭಟ್ಟ ಬರಗದ್ದೆ ಸ್ವಾಗತಿಸಿದರು. ಯೋಜನಾಧಿಕಾರಿ ಸಂತೋಷ ಎಂ. ನಿರ್ವಹಿಸಿದರು. ಜಿಲ್ಲಾ ಸದಸ್ಯ ಬಸವರಾಜ ನಡುವಿನಮನೆ ವಂದಿಸಿದರು.