ವ್ಯಸನಮುಕ್ತ ಗ್ರಾಮಗಳ ಸಂಕಲ್ಪದೊಂದಿಗೆ ತಾಲೂಕಿನ ಗ್ರಾಮಗಳಲ್ಲಿ ಓಲೆಮಠದ ಆಶ್ರಯದಲ್ಲಿ ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ ಜನ ಜಾಗೃತಿ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಓಲೆಮಠದ ಆನಂದ ದೇವರು ಹೇಳಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ವ್ಯಸನಮುಕ್ತ ಗ್ರಾಮಗಳ ಸಂಕಲ್ಪದೊಂದಿಗೆ ತಾಲೂಕಿನ ಗ್ರಾಮಗಳಲ್ಲಿ ಓಲೆಮಠದ ಆಶ್ರಯದಲ್ಲಿ ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ ಜನ ಜಾಗೃತಿ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಓಲೆಮಠದ ಆನಂದ ದೇವರು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಗ್ರಾಮಗಳಲ್ಲಿ 5 ದಿನಗಳ ಕಾಲ ಪ್ರತಿದಿನ ಸಂಜೆ ಪ್ರವಚನ ಕಾರ್ಯಕ್ರಮ ಆಯೋಜಿಸಲಾಗುವುದು. ದುಶ್ಚಟಗಳಿಗೆ ದಾಸರಾಗಿರುವ ಯುವಕರ ಮನೆ ಮನೆಗೆ ಜೋಳಿಗೆಯನ್ನು ಹಿಡಿದು ತೆರಳಿ ದುಶ್ಚಟಗಳ ಭಿಕ್ಷೆ ಬೇಡಿ ರುದ್ರಾಕ್ಷಿ ಧಾರಣ ಮಾಡಿಸಿ ಸದ್ಗುಣಗಳ ದೀಕ್ಷೆ ನೀಡಲಾಗುವುದು. ಯಾರಿಂದಲೂ ದವಸ, ಧಾನ್ಯ, ದುಡ್ಡು ಅಥವಾ ಚಿನ್ನ-ಬೆಳ್ಳಿ ಬೇಡುವುದಿಲ್ಲ. ಕೇವಲ ದುಶ್ಚಟಗಳ ಭಿಕ್ಷೆ ಬೇಡಲಾಗುವುದು. ಇಂದಿನ ಯುವಕರು ಗುಟ್ಕಾ, ಮಾವಾ ಮತ್ತು ಸಾರಾಯಿಗೆ ದಾಸರಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ಸರಿಯಾದ ಅರಿವು ಮೂಡಿಸಿ ದುಶ್ಚಟಗಳಿಂದ ದೂರವಿರಿಸಲು ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಸಾಧಕರಿಗೆ ‘ಸಮಾಜಸೇವಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಒಂದೊಂದು ಗ್ರಾಮಕ್ಕೆ ಒಂದೊಂದು ಕ್ಷೇತ್ರದ ಸಾಧಕರನ್ನು ಕರೆಸಿ ಸನ್ಮಾನಿಸಲಾಗುವುದು. ಈಗಾಗಲೇ ಪ್ರತಿ ಗ್ರಾಮಗಳಿಗೆ ತೆರಳಿ ಪೂರ್ವಭಾವಿ ಸಭೆ ಮಾಡಿ ಕಾರ್ಯಕ್ರಮದ ಕುರಿತು ಸಮಗ್ರ ಮಾಹಿತಿ ನೀಡಲಾಗಿದೆ. ಎಲ್ಲ ಗ್ರಾಮಗಳ ಗ್ರಾಮಸ್ಥರು ಹೃದಯತುಂಬಿ ವಿನೂತನ ಕಾರ್ಯಕ್ರಮ ಸ್ವಾಗತಿಸಿದ್ದಾರೆ.

ಸೋಮವಾರ ಕುಂಬಾರಹಳ್ಳ ಗ್ರಾಮದಿಂದ ಯಾತ್ರೆ ಆರಂಭವಾಗಲಿದೆ. ನಂತರ 20 ರಿಂದ ಸನಾಳ ಗ್ರಾಮದಲ್ಲಿ ಮುಂದುವರಿಯಲಿದೆ. ಹೀಗೆ ತಾಲೂಕಿನ ಪ್ರತಿ ಗ್ರಾಮಕ್ಕೂ ತೆರಳಿ ಜನಜಾಗೃತಿ ಮೂಡಿಸಲಾಗುವುದು ಎಂದರು. ಓಲೆಮಠದ ಕಾರ್ಯಕಾರಿ ಮಂಡಳಿ ಸದಸ್ಯ ಡಾ.ಟಿ.ಪಿ. ಗಿರಡ್ಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.