ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದನ್ನು ಖಂಡಿಸಿ ಮೂರನೇ ವರ್ಷದ ಕರಾಳ ದಿನ ಆಚರಿಸುತ್ತಿದ್ದೇವೆ. ಸರ್ಕಾರ ಅಕ್ರಮ ನೇಮಕಾತಿ ಸೂಕ್ತ ತನಿಖೆ ಕೈಗೊಳ್ಳದೆ, ವಿಳಂಬ ಮಾಡಿ ಅನ್ಯಾಯ ಎಸಗುತ್ತಿದೆ ಎಂದು ಜಾನಪದ ಸ್ನಾತಕೋತ್ತರ ಹಾಗೂ ಸಂಶೋಧಕರ ಒಕ್ಕೂಟದ ಅಧ್ಯಕ್ಷ ಡಾ. ಶಿವಸೋಮಪ್ಪ ನಿಟ್ಟೂರ ಆರೋಪಿಸಿದರು.

ಹಾವೇರಿ:ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದನ್ನು ಖಂಡಿಸಿ ಮೂರನೇ ವರ್ಷದ ಕರಾಳ ದಿನ ಆಚರಿಸುತ್ತಿದ್ದೇವೆ. ಸರ್ಕಾರ ಅಕ್ರಮ ನೇಮಕಾತಿ ಸೂಕ್ತ ತನಿಖೆ ಕೈಗೊಳ್ಳದೆ, ವಿಳಂಬ ಮಾಡಿ ಅನ್ಯಾಯ ಎಸಗುತ್ತಿದೆ ಎಂದು ಜಾನಪದ ಸ್ನಾತಕೋತ್ತರ ಹಾಗೂ ಸಂಶೋಧಕರ ಒಕ್ಕೂಟದ ಅಧ್ಯಕ್ಷ ಡಾ. ಶಿವಸೋಮಪ್ಪ ನಿಟ್ಟೂರ ಆರೋಪಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಜಾನಪದ ಸ್ನಾತಕೋತ್ತರ ಹಾಗೂ ಸಂಶೋಧಕರ ಒಕ್ಕೂಟ ಮತ್ತು ಕರ್ನಾಟಕ ಜಾನಪದ ವಿವಿ ಹಿತರಕ್ಷಣಾ ಟ್ರಸ್ಟ್ ಕಳೆದ ಮೂರು ವರ್ಷಗಳಿಂದ ಜಾನಪದ ವಿವಿ ಅಕ್ರಮ ನೇಮಕಾತಿ ತನಿಖೆಗೆ ಆಗ್ರಹಿಸಿ ನಿರಂತರ ಹೋರಾಟ ನಡೆಸುತ್ತಾ ಬಂದಿದೆ. ಅಕ್ರಮ ನೇಮಕಾತಿಗೆ ಸಂಬಂಧಿಸಿದಂತೆ ಜಾನಪದ ವಿವಿ, ಬೆಳಗಾವಿ ಸುವರ್ಣಸೌಧದ ಎದುರು ಹೀಗೆ ಹಲವೆಡೆ ಪ್ರತಿಭಟನೆ ನಡೆಸಿದ್ದೇವೆ. ವಿಧಾನಸಭೆ ಅಧಿವೇಶನದಲ್ಲೂ ಧ್ವನಿ ಎತ್ತಿದಾಗ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದರು ಎಂದರು.ಅದರಂತೆ ಪ್ರಾದೇಶಿಕ ಆಯುಕ್ತರಾದ ಜಾನಕಿ ಹಾಗೂ ನಿವೃತ್ತ ನ್ಯಾ.ಅಡಿಗ ನೇತೃತ್ವದಲ್ಲಿ ಎರಡು ತಂಡಗಳನ್ನು ರಚಿಸಿ ತನಿಖೆ ನಡೆಸಲು ಸೂಚಿಸಿದ್ದರು. ಆದರೆ ಇದುವರೆಗೂ ತನಿಖೆಯ ವರದಿ ನೀಡಿಲ್ಲ. ಪ್ರಭಾವಿ ಸಚಿವರೊಬ್ಬರು ತನಿಖೆಗೆ ಅಡ್ಡಿ ಪಡಿಸುತ್ತಿದ್ದಾರೆಂಬ ಸಂಶಯ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಜಾನಪದ ವಿವಿ ಕುಲಪತಿ ಹಾಗೂ ಸಹಾಯಕ ಕುಲಸಚಿವರು ತನಿಖಾಧಿಕಾರಿಗಳು ಕೇಳುವ ಮಾಹಿತಿಯನ್ನು ಸಮರ್ಪಕವಾಗಿ ಒದಗಿಸದೆ ತನಿಖೆಯ ದಿಕ್ಕನ್ನು ತಪ್ಪಿಸುತ್ತಿದ್ದಾರೆ. ಪ್ರಭಾವಿ ಸಚಿವರು ಜಾನಪದ ವಿವಿ ಕುಲಪತಿ ಹಾಗೂ ಸಹಾಯಕ ಕುಲಸಚಿವರ ಬೆನ್ನಿಗೆ ನಿಂತಿದ್ದು, ತನಿಖೆಗೆ ಅಡ್ಡಿಪಡಿಸುತ್ತಿರುವುದು ಅಕ್ರಮ ನೇಮಕಾತಿ ಪ್ರಶ್ನಿಸುವ ಹೋರಾಟಗಾರರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಒಕ್ಕೂಟದ ಉಪಾಧ್ಯಕ್ಷ ಡಾ. ನಾಗರಾಜ ಎಸ್. ಮಾತನಾಡಿ, ಅಕ್ರಮ ನೇಮಕಾತಿ ತನಿಖಾ ಹಂತದಲ್ಲಿರುವ ಕಾರಣ ನಾವು ಹೋರಾಟಗಾರರು ಸುಮ್ಮನೆ ಇರುವುದಕ್ಕೆ ಸಹಾಯಕ ಕುಲಸಚಿವ, ಹೋರಾಟಗಾರರು ದುಡ್ಡು ತೆಗೆದುಕೊಂಡು ಸುಮ್ಮನೆ ಆಗಿದ್ದಾರೆ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ಎಸ್ಸೆಸ್ಸೆಲ್ಸಿ ಮಾತ್ರ ಪಾಸ್ ಆಗಿ, ಉಳಿದ ಅಂಕಪಟ್ಟಿಗಳು ಪದವಿಗೆ ಸಮಾನವಲ್ಲ ಹಾಗೂ ಯುಜಿಸಿ ಮಾನ್ಯತೆ ಪಡೆಯದ ಸಂಸ್ಥೆಯಿಂದ ಅಂಕಪಟ್ಟಿ ಪಡೆದು ಸಹಾಯಕ ಕುಲಸಚಿವರ ಹುದ್ದೆ ಗಿಟ್ಟಿಸಿಕೊಂಡ ವ್ಯಕ್ತಿ ತನಿಖಾ ಹಾದಿಯ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.ಆದ್ದರಿಂದ ಜಾನಪದ ವಿವಿ ಅಕ್ರಮ ನೇಮಕಾತಿಯಿಂದ ಅರ್ಹರಿಗೆ ಅನ್ಯಾಯವಾಗಿದೆ. ಸರ್ಕಾರ ಸೂಕ್ತ ತನಿಖೆ ನಡೆಸಿ, ಅನರ್ಹರನ್ನು ಹುದ್ದೆಯಿಂದ ವಜಾಗೊಳಿಸಬೇಕು. ಅರ್ಹರಿಗೆ ಅವಕಾಶ ನೀಡಬೇಕು. ತನಿಖೆ ಸರಿಯಾಗಿ ನಡೆಯದಿದ್ದರೆ, ಸರಕಾರಕ್ಕೆ ಮತ್ತೊಂದು ಕಳಂಕ ಬರುವುದರಲ್ಲಿ ಅನುಮಾನವೇ ಇಲ್ಲ ಎಂದು ಸ್ಪಷ್ಟಪಡಿಸಿದರು.ಜಾನಪದ ವಿವಿ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಬಸವರಾಜ ಗೊಬ್ಬಿ, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಸವರಾಜ ದುಗ್ಗಾಣಿ ಇದ್ದರು.