ಸಾರಾಂಶ
ಕೊಪ್ಪಳ: ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಮತ್ತು ಮಾಜಿ ಸಚಿವ ಬಿ. ಶ್ರೀರಾಮುಲು ನಡುವಿನ ವಾಕ್ಸಮರ ಈಗ ಬೆಂಬಲಿಗರ ಮಟ್ಟದಲ್ಲಿ ಮುಂದುವರಿದಿದೆ. ವಾಲ್ಮೀಕಿ ಸಮಾಜದ ಕೆಲವರು ಶಾಸಕ ಗಾಲಿ ಜನಾರ್ದನ ರೆಡ್ಡಿ ಪರವಾಗಿ ಮತ್ತು ಮತ್ತೆ ಹಲವರು ಶ್ರೀರಾಮುಲು ಪರವಾಗಿ ಬ್ಯಾಟ್ ಬೀಸಿದ್ದಾರೆ.
ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಆತ್ಮೀಯ ಸ್ನೇಹಿತರು. ಈಗ ಮುನಿಸು ಬಂದಿರಬಹುದು. ಇದರಲ್ಲಿ ಅನಗತ್ಯವಾಗಿ ನಾಯಕ ಸಮುದಾಯವನ್ನು ಎಳೆದು ತರಬೇಡಿ, ಅಷ್ಟಕ್ಕೂ ಶಾಸಕ ರೆಡ್ಡಿ ಅವರು ಶ್ರೀರಾಮುಲು ಅವರ ಕುರಿತು ಮಾತನಾಡಿದ್ದಾರೆಯೇ ಹೊರತು ಸಮಾಜದ ಕುರಿತು ಮಾತನಾಡಿಲ್ಲ ಎಂದು ವಾಲ್ಮಿಕಿ ಸಮಾಜದ ಯುವ ಮುಖಂಡ ಯಮನೂರಪ್ಪ ಚೌಡ್ಕಿ ಹೇಳಿದ್ದಾರೆ.ಕೊಪ್ಪಳದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ನಡುವೆ ಅವಿನಾಭಾವ ಸಂಬಂಧ ಇಲ್ಲ. ಜನಾರ್ದನ ರೆಡ್ಡಿ ಇಲ್ಲದೆ ಶ್ರೀರಾಮುಲು ಬೆಳೆದಿಲ್ಲ, ಶ್ರೀರಾಮುಲು ಅವರು ಇಲ್ಲದೆ ರೆಡ್ಡಿ ಬೆಳೆದಿಲ್ಲ. ಅವರಿಬ್ಬರ ಮಧ್ಯೆ ಬಂದಿರುವ ಭಿನ್ನಾಭಿಪ್ರಾಯವನ್ನು ಪಕ್ಷದ ಹೈಕಮಾಂಡ್ ಇತ್ಯರ್ಥ ಮಾಡುತ್ತದೆ. ಇದರಲ್ಲಿ ಅನಗತ್ಯವಾಗಿ ಸಮಾಜವನ್ನು ಎಳೆದು ತರಬೇಡಿ ಎಂದು ಆಗ್ರಹಿಸಿದ್ದಾರೆ.
ಶ್ರೀರಾಮುಲು ಅವರ ಕುರಿತು ರೆಡ್ಡಿ ಅವರು ವೈಯಕ್ತಿಕವಾಗಿ ಮಾತನಾಡಿರಬಹುದು. ಅದು ಅವರಿಬ್ಬರ ನಡುವೆ ಗೊತ್ತಿರುವ ಸಂಗತಿ. ಇಬ್ಬರ ನಡುವೆಯೇ ಇತ್ಯರ್ಥಪಡಿಸಿಕೊಳ್ಳುವಂತೆ ನಾವು ಮನವಿ ಮಾಡುತ್ತೇವೆ. ಶ್ರೀರಾಮುಲು ಮತ್ತು ರೆಡ್ಡಿ ನಡುವೆ ಆಗಿರುವುದರಿಂದ ನಾಯಕ ಸಮಾಜಕ್ಕೆ ಸಂಬಂಧ ಇಲ್ಲ. ಅಲ್ಲದೆ ಈ ಹಿಂದೆ ನೂರಾರು ಕೋಟಿ ರುಪಾಯಿ ಹಗರಣದಲ್ಲಿ ಸಚಿವರಾಗಿದ್ದ ನಾಗೇಂದ್ರ ಅವರು ಸಿಕ್ಕಿಹಾಕಿಕೊಂಡಾಗ ಯಾಕೆ ಸಮಾಜ ಪ್ರತಿಭಟನೆ ಮಾಡಲಿಲ್ಲ ಎಂದು ಪ್ರಶ್ನೆ ಮಾಡಿದರು.ಮೊಣಕಾಲ್ಮೂರು ಕ್ಷೇತ್ರದಲ್ಲಿ ಶ್ರೀರಾಮುಲು ಅವರು ಗೆಲ್ಲಲು ಯಾರು ಕಾರಣ ಎನ್ನುವುದು ಜಗತ್ತಿಗೆ ಗೊತ್ತಿದೆ. ಇಡೀ ಕ್ಷೇತ್ರದ ಉಸ್ತುವಾರಿಯನ್ನು ಜನಾರ್ದನ ರೆಡ್ಡಿ ವಹಿಸಿಕೊಂಡು ಗೆಲ್ಲಿಸಿದ್ದಾರೆ. ಈಗ ಸಂಡೂರು ಉಪ ಚುನಾವಣೆಯ ಕುರಿತು ಬಿಜೆಪಿ ಹೈಕಮಾಂಡ್ ಪ್ರಸ್ತಾಪ ಮಾಡಿದ್ದರಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯ ಬಹಿರಂಗವಾಗಿದೆ. ಹೀಗಾಗಿ, ಇದನ್ನು ಪಕ್ಷದ ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದರು.
ಶ್ರೀರಾಮುಲು ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ ಎಂದು ಈಗಾಗಲೇ ಹೇಳಿದ್ದಾರೆ. ಶ್ರೀರಾಮುಲು ಸೇರಿದಂತೆ ವಾಲ್ಮೀಕಿ ಸಮಾಜದ ಅನೇಕ ನಾಯಕರನ್ನು ಜನಾರ್ದನ ರೆಡ್ಡಿ ಬೆಳೆಸಿದ್ದಾರೆ. ಇದೆಲ್ಲವೂ ಗೊತ್ತಿರುವ ಸಂಗತಿಯೇ ಆಗಿದೆ. ಹೀಗಿದ್ದಾಗ್ಯೂ ರೆಡ್ಡಿ ಅವರು ಶ್ರೀರಾಮುಲು ಅವರ ಕುರಿತು ಹೇಳಿದ್ದನ್ನೇ ಸಮಾಜದ ವಿರುದ್ಧ ಎತ್ತಿ ಕಟ್ಟುವುದು ಸರಿಯಲ್ಲ ಎಂದರು.ಇದು ಕಾಂಗ್ರೆಸ್ ಕುತಂತ್ರ ಇರಬಹುದು. ಕಾಂಗ್ರೆಸ್‌ನಲ್ಲಿ ಸತೀಶ ಜಾರಕೀಹೊಳಿ ಅವರು ಸಿಎಂ ಅಭ್ಯರ್ಥಿಯಾಗುತ್ತಾರೆ ಎನ್ನುವ ಕಾರಣಕ್ಕಾಗಿಯೇ ಈ ರೀತಿಯ ಕುತಂತ್ರ ಮಾಡಿರಬಹುದು ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಪಂಪಣ್ಣ ನಾಯಕ, ಜೋಗದ ದುರ್ಗಪ್ಪ ನಾಯಕ, ವಿರೂಪಾಕ್ಷಪ್ಪ ನಾಯಕ, ಶಿವಾನಂದ ಇದ್ದರು.ಶ್ರೀರಾಮುಲು ಅವಮಾನಿಸಿದರೆ ಸಹಿಸುವುದಿಲ್ಲ: ಹಿಂದುಳಿದ ಸಮಾಜದ ನಾಯಕ ಹಾಗೂ ವಾಲ್ಮೀಕ ಸಮಾಜ ನೇತಾರ ಶ್ರೀರಾಮುಲು ಅವರನ್ನು ಬಿಜೆಪಿ ಸೇರಿದಂತೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಅಪಮಾನ ಮಾಡಿರುವುದನ್ನು ಸಮಾಜ ಸಹಿಸುವುದಿಲ್ಲ. ರೆಡ್ಡಿ ಅವರು ಕೂಡಲೇ ಕ್ಷಮೆ ಕೇಳಬೇಕೆಂದು ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ಕೆ.ಎನ್. ಪಾಟೀಲ್ ಆಗ್ರಹಿಸಿದ್ದಾರೆ.
ಕೊಪ್ಪಳದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನದಾಸ ಅವರು ಸಂಡೂರು ಉಪಚುನಾವಣೆಯ ಕುರಿತು ಮಾತನಾಡುತ್ತಾ, ಶ್ರೀರಾಮುಲು ಅವರೇ ಸೋಲಿಗೆ ಪ್ರಮುಖ ಕಾರಣ ಎಂದು ಹೇಳಿದ್ದಾರೆ. ಇದು ಸರಿಯಲ್ಲ. ಶ್ರೀರಾಮುಲು ಅವರು ಕೇವಲ ಬಳ್ಳಾರಿ ಜಿಲ್ಲೆಯ ನಾಯಕರಲ್ಲ. ಅವರು ರಾಜ್ಯದ ನಾಯಕರು. ಮೂರು ಉಪಚುನಾವಣೆಯಲ್ಲಿ ಪಕ್ಷದ ಗೆಲುವಿಗಾಗಿ ಶ್ರಮಿಸಿದ್ದಾರೆ. ಅವರೊಬ್ಬರೇ ಹೇಗೆ ಕಾರಣವಾಗುತ್ತಾರೆ ಎಂದು ಕಿಡಿಕಾರಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸ್ಪರ್ಧೆ ಮಾಡಲು ಬಿಜೆಪಿಗೆ ಶ್ರೀರಾಮುಲು ಅವರೇ ಬೇಕಾಗಿತ್ತು. ಆಗ ಬಿಜೆಪಿಯಲ್ಲಿ ಯಾರು ಗಂಡಸರು ಇರಲಿಲ್ಲವೇ ಎಂದು ಕಿಡಿಕಾರಿದರು.
ಈಗ ಗಾಲಿ ಜನಾರ್ದನ ರೆಡ್ಡಿ ಅವರು ಶ್ರೀರಾಮುಲು ಬೆಳೆಯಲು ನಾನು ಕಾರಣ ಎಂದಿದ್ದಾರೆ. ಅಷ್ಟೇ ಅಲ್ಲ, ಕೊಲೆಗಡುಕ ಆಗುತ್ತಿದ್ದ ಶ್ರೀರಾಮುಲು ಅವರನ್ನು ನಾನು ಪರಿವರ್ತನೆ ಮಾಡಿದ್ದೇನೆ ಎಂದು ಹೇಳಿದ್ದು ಸರಿಯಲ್ಲ. ರೆಡ್ಡಿ ಬೆಳೆಯಲು ಶ್ರೀರಾಮುಲು ಕಾರಣವಾಗಿದ್ದಾರೆ ಎಂದರು.ಶ್ರೀರಾಮುಲು ಅವರೊಬ್ಬ ನಾಯಕರಾಗಿದ್ದು, ಅವರನ್ನು ಯಾರೂ ಬೆಳೆಸುವ ಅಗತ್ಯವಿಲ್ಲ. ಇದನ್ನು ರೆಡ್ಡಿ ಅರ್ಥ ಮಾಡಿಕೊಳ್ಳಬೇಕು ಮತ್ತು ಕೂಡಲೇ ಕ್ಷಮಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ನಾಯಕ, ರಾಜ್ಯ ಸಂಘಟನಾ ಕಾರ್ಯದರ್ಶಿ ಸುರೇಶ ಡೊಣ್ಣಿ, ಜೋಗದ ನಾರಾಯಣಪ್ಪ, ವೀರಭದ್ರಪ್ಪ ನಾಯಕ ಹಾಗೂ ಜೋಗದ ಹನುಮಂತಪ್ಪ ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))