ಗಾಲಿ ಜನಾರ್ದನ ರೆಡ್ಡಿ ಜುಜುಬಿ ರಾಜಕಾರಣಿ, ನಾಚಿಕೆ, ಮಾನ, ಮರ್ಯಾದೆಗಳಿಲ್ಲ : ಸಿಎಂ ಸಿದ್ದರಾಮಯ್ಯ

| Published : Nov 10 2024, 01:46 AM IST / Updated: Nov 10 2024, 12:54 PM IST

ಗಾಲಿ ಜನಾರ್ದನ ರೆಡ್ಡಿ ಜುಜುಬಿ ರಾಜಕಾರಣಿ, ನಾಚಿಕೆ, ಮಾನ, ಮರ್ಯಾದೆಗಳಿಲ್ಲ : ಸಿಎಂ ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಗಾಲಿ ಜನಾರ್ದನ ರೆಡ್ಡಿ ಜುಜುಬಿ ರಾಜಕಾರಣಿ. ಆತನಿಗೆ ನಾಚಿಕೆ, ಮಾನ, ಮರ್ಯಾದೆಗಳಿಲ್ಲ. ನನ್ನ ವಿರುದ್ಧ ಏಕವಚನದಲ್ಲಿ ಮಾತನಾಡುವ ಯೋಗ್ಯತೆ ಆತನಿಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಬಳ್ಳಾರಿ: ಗಾಲಿ ಜನಾರ್ದನ ರೆಡ್ಡಿ ಜುಜುಬಿ ರಾಜಕಾರಣಿ. ಆತನಿಗೆ ನಾಚಿಕೆ, ಮಾನ, ಮರ್ಯಾದೆಗಳಿಲ್ಲ. ನನ್ನ ವಿರುದ್ಧ ಏಕವಚನದಲ್ಲಿ ಮಾತನಾಡುವ ಯೋಗ್ಯತೆ ಆತನಿಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸಂಡೂರು ತಾಲೂಕಿನ ವಿಠಲಾಪುರದಲ್ಲಿ ಶುಕ್ರವಾರ ರಾತ್ರಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನೀನು ಎಷ್ಟು ವರ್ಷ ಜೈಲಿಗೆ ಹೋಗಿ ಬಂದಿರುವೆ ಎಂಬುದು ಗೊತ್ತಿದೆ. ನಿನ್ನ ಅಟ್ಟಹಾಸ ಮುರಿದಿದ್ದು ನಾನೇ ಎಂಬುದು ನೆನಪಿರಲಿ. ಬಳ್ಳಾರಿ ಜನರನ್ನು ಭಯಮುಕ್ತಗೊಳಿಸಿದ್ದು ಇದೇ ಸಿದ್ದರಾಮಯ್ಯ ಎಂಬುದನ್ನು ರೆಡ್ಡಿ ನೀನು ಮರೆಯಬಾರದು ಎಂದು ಕಟುವಾಗಿ ಎಚ್ಚರಿಸಿದರು.

ಕರ್ನಾಟಕ ರಾಜಕಾರಣಕ್ಕೆ ಜನಾರ್ದನ ರೆಡ್ಡಿ ಕೊಡುಗೆ ಏನು? ನೀನು ಬಳ್ಳಾರಿ ಯಜಮಾನನಾ? ನೆನಪಿರಲಿ; ಕಳೆದ ಚುನಾವಣೆಯಲ್ಲಿ ನಾನು ಗಂಗಾವತಿಗೆ ಹೋಗಲು ಆಗಲಿಲ್ಲ. ನಮ್ಮ ಕಾಂಗ್ರೆಸ್ ಅಭ್ಯರ್ಥಿ ಸರಿಯಾಗಿ ಪ್ರಚಾರ ಮಾಡಲಿಲ್ಲ. ಹೀಗಾಗಿಯೇ ನೀವು ಗೆದ್ದಿರುವಿ ಎಂಬುದನ್ನು ಮರೆಯಬೇಡಿ. ನಿನ್ನ ಗೆಲುವು ಶಾಶ್ವತ ಅಲ್ಲ. ಯಾರ ಗೆಲುವೂ ಶಾಶ್ವತ ಅಲ್ಲ. ನನ್ನ ಬಗ್ಗೆ ಏಕವಚನದಲ್ಲಿ ಮಾತನಾಡುವ ಯೋಗ್ಯತೆ ನಿನಗೆಲ್ಲಿದೆ? ಎಂದು ಕಾರವಾಗಿ ನುಡಿದರು.

ನಿಮ್ಮ ಸರ್ಕಾರ ಇದ್ದಾಗ ಬಳ್ಳಾರಿಯಲ್ಲಿ ನಾನು ಮಾತನಾಡಲು ಜಾಗ ಕೊಟ್ಟಿರಲಿಲ್ಲ. ನನಗೆ ಕುಡಿಯಲು ನೀರು ಕೊಡಲು ಸಹ ಜನ ಹೆದರುತ್ತಿದ್ದರು. ಬಳ್ಳಾರಿ ಜನರನ್ನು ಭಯದಲ್ಲಿ ಇಟ್ಟಿದ್ದ ನೀನು, ಯಾವ ಮುಖ ಹೊತ್ತು ಇದೀಗ ಚುನಾವಣೆಯಲ್ಲಿ ಮತ ಕೇಳಲು ಬಂದಿರುವೆ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.

ಸಚಿವ ಸಂತೋಷ್‌ ಲಾಡ್ ಮಾತನಾಡಿ, ಸಿಎಂ ಸಿದ್ದರಾಮಯ್ಯ ಬಡವರ ಪಾಲಿನ ಪಾಂಡುರಂಗ ಇದ್ದಂತೆ. ಕೊಟ್ಟ ಮಾತನ್ನು ಎಂದೂ ತಪ್ಪುವುದಿಲ್ಲ. ಬಡವರ ಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸುವ ವ್ಯಕ್ತಿ. ಇಂತಹ ವ್ಯಕ್ತಿತ್ವವುಳ್ಳ ಸಿದ್ದರಾಮಯ್ಯ ಅವರನ್ನು ಏಕವಚನದಲ್ಲಿ ಟೀಕಿಸುವ ಜನಾರ್ದನ ರೆಡ್ಡಿ, ನಾಲಿಗೆ ಇದೆ ಎಂಬ ಮಾತ್ರಕ್ಕೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇದು ಸರಿಯಲ್ಲ. ಹಿರಿಯರ ಬಗ್ಗೆ ಗೌರವಯುತವಾಗಿ ಮಾತನಾಡುವುದು ಕಲಿಯಬೇಕು. ಈ ಹಿಂದೆ ಯಡಿಯೂರಪ್ಪನವರಿಗೂ ಸಹ ಇದೇ ರೀತಿ ಏಕವಚನದಲ್ಲಿ ಮಾತನಾಡಿದ್ದಿರಿ. ಅದರಿಂದ ನಿಮಗೆ ಖುಷಿ ಸಿಕ್ಕಿರಬಹುದು. ಆದರೆ, ಒಳ್ಳೆಯದಾಗಲ್ಲ ಎಂದು ಹೇಳಿದರು.

ಸಂಡೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣಾ ಅವರನ್ನು ಗೆಲ್ಲಿಸುವ ಮೂಲಕ ಸಂಡೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಸಚಿವ ಲಾಡ್ ಮನವಿ ಮಾಡಿದರು. ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣಾ, ಶಾಸಕರಾದ ಜೆ.ಎನ್. ಗಣೇಶ್, ಬಿ. ನಾಗೇಂದ್ರ, ಲತಾ ಸೇರಿದಂತೆ ಪಕ್ಷದ ಮುಖಂಡರು ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದರು.