ಕೇಂದ್ರದ ಮಾರ್ಗಸೂಚಿ ಆಧಾರದಲ್ಲಿಯೇ ಬರಪೀಡಿತ ತಾಲೂಕುಗಳನ್ನು ಘೋಷಿಸಲಾಗುತ್ತದೆ. ಇದರಲ್ಲಿ ರಾಜಕಾರಣ ಅಥವಾ ತಾರತಮ್ಯವಿಲ್ಲ. ಮೂರನೇ ಪಟ್ಟಿಯಲ್ಲಿ ಜಿಲ್ಲೆಯ ಉಳಿದ ತಾಲೂಕುಗಳನ್ನೂ ಸೇರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಕೊಪ್ಪಳ: ಶಾಸಕರು ಹಾಗೂ ಜನಪ್ರತಿನಿಧಿಗಳು ಯಾರೊಬ್ಬರ ವೈಯಕ್ತಿಕ ಬೆಂಬಲದಿಂದ ಗೆಲ್ಲುವುದಿಲ್ಲ. ಕ್ಷೇತ್ರದ ಜನರ ಆಶೀರ್ವಾದದಿಂದ ಗೆಲ್ಲುತ್ತಾರೆ. ಹೀಗಾಗಿ ಜನಾರ್ದನ ರೆಡ್ಡಿ ಅವರು ಎಚ್ಚರಿಕೆಯಿಂದ ಮಾತನಾಡುವುದನ್ನು ಕಲಿಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಅವರನ್ನು ತಾವು ಏಕವಚನದಲ್ಲಿ ಸಂಬೋಧಿಸಿಲ್ಲ. ಅವರೇ ತಮ್ಮನ್ನು ‘ಲೇ ತಮ್ಮ’ ಎಂದು ಕರೆದಿದ್ದರಿಂದ ಪ್ರತಿಯಾಗಿ ‘ಅಣ್ಣ-ತಮ್ಮ’ ಎಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.

ತಾವು ಅವರನ್ನು ಹೊಗಳಿರುವ ವಿಡಿಯೋ ಬಿಡುಗಡೆ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಸಚಿವ ತಂಗಡಗಿ, ಅವರು ತಮ್ಮನ್ನು ಹೊಗಳಿರುವ ಹಾಗೂ ಆನೆಗೊಂದಿ ಉತ್ಸವದಲ್ಲಿ ಮಾತನಾಡಿರುವ ವಿಡಿಯೋಗಳನ್ನೂ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.

ಜಮೀನು ಮಾರಾಟದ ಸಂದರ್ಭದಲ್ಲಿ ರೆಡ್ಡಿ ಅವರ ಆಪ್ತರೊಬ್ಬರು ಖರೀದಿಸಿ ಹಣ ನೀಡಿದ್ದರಿಂದ ಸಹಾಯ ಮಾಡಿದ್ದಕ್ಕಾಗಿ ಅವರನ್ನು ಹೊಗಳಿದ್ದೇನೆ. ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ತಾವು ರೆಡ್ಡಿ ಅವರಿಗೆ ಮಾಡಿದ ಸಹಾಯದ ಬಗ್ಗೆಯೂ ಅವರಿಗೆ ತಿಳಿದಿದೆ. ‘ನಾನು ಯಾರ ಮೇಲೂ ಬೀಳುವುದಿಲ್ಲ. ನನ್ನ ಮೇಲೆ ಬಿದ್ದಾಗ ಯಾರನ್ನೂ ಬಿಡುವುದಿಲ್ಲ’ ಎಂದು ಹೇಳಿದರು.

ಕೇಂದ್ರದ ಮಾರ್ಗಸೂಚಿ ಆಧಾರದಲ್ಲಿಯೇ ಬರಪೀಡಿತ ತಾಲೂಕುಗಳನ್ನು ಘೋಷಿಸಲಾಗುತ್ತದೆ. ಇದರಲ್ಲಿ ರಾಜಕಾರಣ ಅಥವಾ ತಾರತಮ್ಯವಿಲ್ಲ. ಮೂರನೇ ಪಟ್ಟಿಯಲ್ಲಿ ಜಿಲ್ಲೆಯ ಉಳಿದ ತಾಲೂಕುಗಳನ್ನೂ ಸೇರಿಸಲಾಗುವುದು ಎಂದರು.

ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ವಿತರಣೆಯಲ್ಲಿ ಸಮಸ್ಯೆ ಕಂಡುಬಂದಿರುವ ಕುರಿತು ಪರಿಶೀಲಿಸುವುದಾಗಿ ತಿಳಿಸಿದರು. ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಕ್ರಮ ಪ್ರಕರಣದ ತನಿಖೆ ನಡೆಯುತ್ತಿದ್ದು, ಅಗತ್ಯವಿದ್ದರೆ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದರು.

ನಟ ಅನಂತನಾಗ್ ಅವರಿಗೆ 2024ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆಯಾಗಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ. ಎಕ್ಸ್‌ ಮೂಲಕ ಅವರನ್ನು ಅಭಿನಂದಿಸಿದ್ದೇನೆ. ಸಚಿವ ಸಂಪುಟ ಸಭೆಯ ಬಳಿಕ ಅವರನ್ನು ಭೇಟಿಯಾಗಿ ಸನ್ಮಾನಿಸುವುದಾಗಿ ಹೇಳಿದರು.

ಬಿ.ವೈ. ವಿಜಯೇಂದ್ರ ಅವರ ಪಾದಯಾತ್ರೆ, ರೈತರೊಂದಿಗಿನ ಸಂವಾದದ ಬಗ್ಗೆಯೂ ತಂಗಡಗಿ ಪ್ರತಿಕ್ರಿಯಿಸಿ, ಅಲ್ಲಿ ಕೆಲವರು ಮಾತ್ರ ರೈತರಿದ್ದರು, ಕೆಲವರು ಇಸ್ಪೀಟ್ ಆಡುವವರು ಇದ್ದರು ಎಂದು ಟೀಕಿಸಿದ್ದಾರೆ.

‘ನಾನು ರಾಜೀನಾಮೆ ಕೊಡಲು ಸಿದ್ಧ. ಗಂಗಾವತಿಗೆ ನಿಲ್ಲುವ ಪರಿಸ್ಥಿತಿ ಬರಲಿ; ಆಗ ನೋಡೋಣ. ಒಬ್ಬ ಕಾರ್ಯಕರ್ತನನ್ನು ನಿಲ್ಲಿಸಿ ಜನಾರ್ದನ ರೆಡ್ಡಿ ಅವರನ್ನು ಸೋಲಿಸುತ್ತೇನೆ’ ಎಂದು ಸವಾಲು ಹಾಕಿದರು.