ಶ್ರೀರಾಮುಲು ಅವರನ್ನು ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣದ ಬ್ಯಾನರ್ ಗಲಾಟೆ ಮತ್ತೆ ಒಂದಾಗುವಂತೆ ಮಾಡಿದೆ.

ಬಳ್ಳಾರಿ: ಪ್ರಕರಣ ಪರಸ್ಪರ ಮುನಿಸಿಕೊಂಡು ದೂರ ಉಳಿದಿದ್ದ ಶಾಸಕ ಜನಾರ್ದನ ರೆಡ್ಡಿ ಹಾಗೂ ಮಾಜಿ ಸಚಿವ ಬಿ.ಶ್ರೀರಾಮುಲು ಅವರನ್ನು ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣದ ಬ್ಯಾನರ್ ಗಲಾಟೆ ಮತ್ತೆ ಒಂದಾಗುವಂತೆ ಮಾಡಿದೆ.

ಕಳೆದ ಗುರುವಾರ ರೆಡ್ಡಿ ಮನೆಯ ಮುಂದೆ ಕಾಂಗ್ರೆಸ್ಸಿಗರು ಗಲಾಟೆ ಮಾಡುತ್ತಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆಯೇ ಮಧ್ಯಪ್ರವೇಶ ಮಾಡಿದ ಶ್ರೀರಾಮುಲು, ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರು. ಸಂಜೆ ಘಟನೆ ವಿಕೋಪಕ್ಕೆ ತಿರುಗಿ ಪರಸ್ಪರ ಕಲ್ಲು ತೂರಾಟ ನಡೆಸಿದ ಬಳಿಕ ಜನಾರ್ದನ ರೆಡ್ಡಿ ಬೆಂಬಲಕ್ಕೆ ನಿಂತ ಶ್ರೀರಾಮುಲು, ನಾವಿಬ್ಬರು ಒಂದೇ ಎನ್ನುವ ಸಂದೇಶ ರವಾನಿಸಿದರು.

ದೂರವಾಗಿದ್ದ ಆಪ್ತಮಿತ್ರರು:

ಸಂಡೂರು ಉಪ ಚುನಾವಣೆ ಬಳಿಕ ಇಬ್ಬರೂ ಪರಸ್ಪರ ಟೀಕೆ, ಪ್ರತಿ-ಟೀಕೆಗಳಲ್ಲಿ ತೊಡಗಿಸಿಕೊಂಡು ಬಹುವರ್ಷಗಳ ಆಪ್ತಮಿತ್ರರು ದೂರ ದೂರವಾಗಿದ್ದರು. ಇದು ಪಕ್ಷದ ಹಿನ್ನಡೆಗೆ ಕಾರಣವಾಗಲಿದೆ ಎಂದೇ ವ್ಯಾಖ್ಯಾನಿಸಲಾಗಿತ್ತು. ಗುರುವಾರ ರಾತ್ರಿ ಸಂಭವಿಸಿದ ಗುಂಪು ಘರ್ಷಣೆ, ಇಬ್ಬರು ನಾಯಕರ ಒಂದುಗೂಡುವಿಕೆಗೆ ಆಸ್ಪದ ಒದಗಿಸಿತು.

ನಗರ ಕಾಂಗ್ರೆಸ್‌ ಶಾಸಕ ಭರತ್ ರೆಡ್ಡಿ ವಿರುದ್ಧ ಸುದ್ದಿಗೋಷ್ಠಿಯಲ್ಲಿ ಹರಿಹಾಯುತ್ತಿರುವ ಶ್ರೀರಾಮುಲು, ಜನಾರ್ದನ ರೆಡ್ಡಿಯನ್ನು ಗುರಿಯಾಗಿಸಿಕೊಂಡೇ ದಾಳಿ ಮಾಡಲಾಗಿದೆ. ಗಲಾಟೆ ಪೂರ್ವಯೋಜಿತವಾಗಿದ್ದು, ಭರತ್ ರೆಡ್ಡಿಯಿಂದಲೇ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿದರು.

ರೆಡ್ಡಿಗೆ ಶಕ್ತಿಯಾಗಿ ಜೊತೆಯಾಗಿ ಸದಾ ನಾನಿರುತ್ತೇನೆ. ನಮ್ಮದೇನಿದ್ದರೂ ಸ್ನೇಹದ ಜಗಳ ಎಂಬ ಸಂದೇಶವನ್ನು ಕಮಲ ಪಕ್ಷದ ಕಾರ್ಯಕರ್ತರು ಹಾಗೂ ಪ್ರತಿ ಪಕ್ಷದ ನಾಯಕರಿಗೆ ಶ್ರೀರಾಮುಲು ರವಾನಿಸಿದ್ದಾರೆ.

ಕಾರ್ಯಕರ್ತರಲ್ಲಿ ಹುಮ್ಮಸ್ಸು:

ರೆಡ್ಡಿ-ರಾಮುಲು ಮತ್ತೆ ಒಂದಾಗಿರುವುದು ಪಕ್ಷದ ಕಾರ್ಯಕರ್ತರಲ್ಲಿ ಹೊಸ ಶಕ್ತಿ ಬಂದಂತಾಗಿದೆ. ಇಬ್ಬರು ಪ್ರತ್ಯೇಕವಾಗಿದ್ದರಿಂದ ಯಾರ ಜೊತೆ ಗುರುತಿಸಿಕೊಳ್ಳಬೇಕು ಎಂಬ ಮುಜುಗರ ಅನುಭವಿಸುತ್ತಿದ್ದರು. ಇದೀಗ ರೆಡ್ಡಿ-ರಾಮುಲು ಒಂದಾಗುತ್ತಿದ್ದಂತೆಯೇ ಹಿಂಬಾಲಕರು ಸೇರಿದಂತೆ ಪಕ್ಷದ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿದೆ.