ರೈತರಿಗಾಗಿ ಹತ್ತು ಕೇಸ್ ಬಿದ್ದರೂ ಹೆದರಲ್ಲ: ಜನಾರ್ದನ ರೆಡ್ಡಿ

| Published : Jan 12 2024, 01:45 AM IST

ರೈತರಿಗಾಗಿ ಹತ್ತು ಕೇಸ್ ಬಿದ್ದರೂ ಹೆದರಲ್ಲ: ಜನಾರ್ದನ ರೆಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಹುಲಗಿ ತುಂಗಭದ್ರಾ ನೀರು ಬಳಕೆಗಾರರ ಸಂಘದ ವತಿಯಿಂದ ವಿಜಯನಗರ ಕಾಲುವೆಗಳಿಗೆ ನೀರು ಬಿಡುಗಡೆಗೆ ಆಗ್ರಹಿಸಿ ಹೋರಾಟ ನಡೆಯುತ್ತಿದ್ದು, ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ಸೂಚಿಸಿದರು.

ಕೊಪ್ಪಳ: ವಿಜಯನಗರ ಕಾಲುವೆಗೆ ನೀರು ಬಿಡುವಂತೆ ಆಗ್ರಹಿಸಿ ನಡೆಸುತ್ತಿರುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ. ರೈತರ ಪರವಾಗಿ ನಾನು ಎಂಥ ಹೋರಾಟಕ್ಕೂ ಸಿದ್ಧನಿದ್ದೇನೆ. ಈಗಾಗಲೇ ನನ್ನ ಮೇಲೆ ಹಲವಾರು ಕೇಸುಗಳಿವೆ. ಈಗ ರೈತರಿಗಾಗಿ ಹತ್ತಾರು ಕೇಸ್ ಆದರೂ ನಾನು ಕೇರ್ ಮಾಡುವುದಿಲ್ಲ ಎಂದು ಗಂಗಾವತಿ ಶಾಸಕ ಮತ್ತು ಕೆಆರ್‌ಪಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.ಇಲ್ಲಿನ ಡಿಸಿ ಕಚೇರಿ ಎದುರು ಹುಲಗಿ ತುಂಗಭದ್ರಾ ನೀರು ಬಳಕೆಗಾರರ ಸಂಘದ ವತಿಯಿಂದ ವಿಜಯನಗರ ಕಾಲುವೆಗಳಿಗೆ ನೀರು ಬಿಡುಗಡೆಗೆ ಆಗ್ರಹಿಸಿ ನಡೆಸುತ್ತಿರುವ ಧರಣಿ ಸ್ಥಳಕ್ಕೆ ಭೇಟಿ ನೀಡಿ, ಬೆಂಬಲ ಸೂಚಿಸಿ, ಅವರು ಮಾತನಾಡಿದರು. ನಾನು ಈಗಾಗಲೇ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಅವರೊಂದಿಗೆ ಮಾತನಾಡಿದ್ದೇನೆ. ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರೊಂದಿಗೂ ಮಾತನಾಡುತ್ತೇನೆ. ಎರಡು ದಿನಗಳಲ್ಲಿ ನೀರು ಬಿಡುವಂತೆ ಗಡುವು ನೀಡುತ್ತೇನೆ. ಹಾಗೊಂದು ವೇಳೆ ಬಿಡದೆ ಇದ್ದರೆ ಹೆದರುವ ಪ್ರಶ್ನೆಯೇ ಇಲ್ಲ. ನಾವೆಲ್ಲರೂ ಸೇರಿ ತುಂಗಭದ್ರಾ ಜಲಾಶಯಕ್ಕೆ ನುಗ್ಗಿ, ನೀರು ಬಿಡಿಸಿಕೊಳ್ಳೋಣ. ಇದಕ್ಕಾಗಿ ನಮ್ಮ ಮೇಲೆ ಎಂಥ ಕೇಸ್ ಹಾಕಿದರೂ ಪರವಾಗಿಲ್ಲ, ಹೆದರೋದೋ ಬೇಡ ಎಂದರು.

ರೈತರಿಗಾಗಿ ನಾನು ಎಂಥ ಹೋರಾಟಕ್ಕೂ ಸಿದ್ಧನಿದ್ದೇನೆ. ಕೇವಲ ಬೆಂಬಲ ಸೂಚಿಸಿ ಹೋಗುವುದಕ್ಕೆ ನಾನು ಇಲ್ಲಿಗೆ ಬಂದಿಲ್ಲ, ಇದು ನ್ಯಾಯಯುತ ಹೋರಾಟವಾಗಿದ್ದು, ಇದಕ್ಕಾಗಿ ನಾನು ನಿಮ್ಮ ಜತೆಯಲ್ಲಿ ಇರುತ್ತೇನೆ ಎಂದರು.