ಸಾರಾಂಶ
- ಹರಪನಹಳ್ಳಿ ಅಭಿವೃದ್ಧಿಗೆ ಶಾಸಕಿ ಲತಾ, ನಾನು ಜೋಡಿ ಎತ್ತಿನಂತೆ ಕೆಲಸ ಮಾಡ್ತೇವೆ
- - - ಕನ್ನಡಪ್ರಭ ವಾರ್ತೆ ದಾವಣಗೆರೆಜನರ ಅಹವಾಲು ಆಲಿಸಿ, ಅವುಗಳನ್ನು ಪರಿಹರಿಸಲು ಹರಪನಹಳ್ಳಿ ಸೇರಿದಂತೆ ದಾವಣಗೆರೆ ಲೋಕಸಭಾ ಕ್ಷೇತ್ರದ ಪ್ರತಿ ತಾಲೂಕುಗಳಲ್ಲೂ ಶೀಘ್ರದಲ್ಲೇ ಜನಸ್ಪಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.
ಹರಪನಹಳ್ಳಿ ಪಟ್ಟಣದ ಕಾಶಿ ಬಡಾವಣೆಯಲ್ಲಿ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ನಿವಾಸದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಅಭಿನಂದನಾ ಕಾರ್ಯಕ್ರಮಗಳ ಮುಗಿದ ನಂತರ ಸೆಪ್ಟಂಬರ್ ಕೊನೆ ವಾರದಿಂದ ಜನಸ್ಪಂದನಾ ಕಾರ್ಯಕ್ರಮಗಳನ್ನು ಪ್ರತಿ ತಾಲೂಕು, ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ನಡೆಸುತ್ತೇನೆ ಎಂದರು.ಹೊಸಪೇಟೆ- ಹರಿಹರದ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲು ಈಗಾಗಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ, ಚರ್ಚಿಸಿದ್ದೇವೆ. ಬಹು ದಶಕಗಳ ಬೇಡಿಕೆಯಾದ ಹರಿಹರ- ಹರಪನಹಳ್ಳಿ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಗಮನ ಕೇಂದ್ರೀಕರಿಸಿದ್ದೇವೆ ಎಂದು ಹೇಳಿದರು.
ಸಣ್ಣ ಕೈಗಾರಿಕೆಗಳ ಸ್ಥಾಪನೆ ಸೇರಿದಂತೆ ಉದ್ಯೋಗ ಅವಕಾಶಗಳ ಹೆಚ್ಚಳಕ್ಕೆ ಪ್ರಯತ್ನಿಸುತ್ತೇವೆ. ಲೋಕಸಭಾ ಕ್ಷೇತ್ರಗಳ ಪ್ರತಿ ತಾಲೂಕುಗಳ ಬೇಡಿಕೆಗಳ ಕುರಿತು ವರದಿ ಸಂಗ್ರಹಿಸಿ, ಆಯಾ ಕ್ಷೇತ್ರಗಳ ಶಾಸಕರು, ನಮ್ಮ ಪಕ್ಷದ ಮುಖಂಡರು, ಬ್ಲಾಕ್ ಅಧ್ಯಕ್ಷರು, ಗ್ರಾಪಂ ಸದಸ್ಯರು, ಮುಖಂಡರ ಸಭೆ ಮಾಡಿ, ಅಭಿವೃದ್ಧಿ ಕಡೆಗೆ ಗಮನ ಹರಿಸುತ್ತೇವೆ ಎಂದು ತಿಳಿಸಿದರು.ಶಾಲಾ ಕಟ್ಟಡ, ರಸ್ತೆ ಅಭಿವೃದ್ಧಿ, ಆಸ್ಪತ್ರೆಗಳ ಅಭಿವೃದ್ಧಿ ಬಗ್ಗೆ ಸಂಸದರ ನಿಧಿಯಲ್ಲಿ ಅನುದಾನ ಒದಗಿಸುತ್ತೇನೆ. ಪ್ರತಿಯೊಬ್ಬರೂ ಶಿಕ್ಷಣಕ್ಕೆ ಒತ್ತು ನೀಡಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಒಳ್ಳೆಯ ಭವಿಷ್ಯ ಕಟ್ಟಿಕೊಡಬೇಕು. ಅದೇ ರೀತಿ ಆರೋಗ್ಯದ ಕಡೆಗೂ ಗಮನ ಹರಿಸಬೇಕು ಎಂದು ಸಲಹೆ ನೀಡಿದ ಅವರು, ಹರಪನಹಳ್ಳಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನವರು ಹಾಗೂ ನಾನು ಜೋಡಿ ಎತ್ತಿನಂತೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ, ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಕುಬೇರಪ್ಪ, ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ, ಮಹಿಳಾ ಅಧ್ಯಕ್ಷೆ ಜಯಲಕ್ಷ್ಮಿ, ದೇವೇಂದ್ರಗೌಡ, ಮಂಜನಾಯ್ಕ, ಕೆ.ಕಲ್ಲಹಳ್ಳಿ ಅರವಿಂದ, ಮತ್ತೂರು ಬಸವರಾಜ, ಸಾಸ್ವಿಹಳ್ಳಿ ನಾಗರಾಜ ಇತರರು ಇದ್ದರು.- - - -21ಕೆಡಿವಿಜಿ4:
ಹರಪನಹಳ್ಳಿಯಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಕಾಂಗ್ರೆಸ್ ಕಾರ್ಯಕರ್ತರನ್ನು ಭೇಟಿ ಮಾಡಿದರು. ಶಾಸಕಿ ಎಂ.ಪಿ.ಲತಾ ಇದ್ದರು.