ಕನ್ನಡಪ್ರಭ ವಾರ್ತೆ ಪಾಂಡವಪುರ
ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಕೊಟ್ಟಂತಹ ಜನಪರ, ರೈತಪರ ಯೋಜನೆಗಳು, ಬ್ಯಾಂಕ್ ಸಾಲಮನ್ನಾ ನಾಡಿನ ರೈತರ ಬದುಕಿಗೆ ನೆರವಾಗಿವೆ ಎಂದು ಜಿಪಂ ಮಾಜಿ ಸದಸ್ಯ ಸಿ.ಅಶೋಕ್ ಹೇಳಿದರು.ತಾಲೂಕಿನ ಬನ್ನಂಗಾಡಿ ಮತ್ತು ಡಿಂಕಾ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಮೇ 7ರಂದು ನಡೆಯುವ ಜನರೊಂದಿಗೆ ಜನತಾದಳ ಮತ್ತು ಜೆಡಿಎಸ್ ಪಕ್ಷದ 25ನೇ ವರ್ಷದ ಬೆಳ್ಳಿಹಬ್ಬ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿದರು.
ಎಚ್.ಡಿ.ಕುಮಾರಸ್ವಾಮಿ ಅವರದ್ದು ತಾಯಿಹೃದಯ ಹೊಂದಿರುವ ಜನನಾಯಕ. ಅವರ ಅಧಿಕಾರಕ್ಕೆ ಬಂದಾಗಲೆಲ್ಲ ಬಡವರು, ರೈತರು, ಶೋಷಿತರ ಜನಪರವಾದ ಯೋಜನೆಗಳನ್ನು ಜಾರಿಗೆ ತಂದು ಕೆಲಸ ಮಾಡಿದ್ದಾರೆ. ರೈತರು ಸಂಕಷ್ಟದಲ್ಲಿ ಇದ್ದಾಗ ರೈತರ ಸಾಲಮನ್ನಾ ಮಾಡಿ ಅವರ ಕಷ್ಟಕ್ಕೆ ನೆರವಾಗಿದ್ದಾರೆ ಎಂದರು.ಈಗ ಕೇಂದ್ರ ಸಚಿವರಾಗಿ ಕೇಂದ್ರ, ರಾಜ್ಯದಲ್ಲಿ ಉತ್ತಮಕೆಲಸ ಮಾಡುತ್ತಿದ್ದಾರೆ, ಜಿಲ್ಲೆಗೆ ಹಲವು ಕೈಗಾರಿಕೆಗಳನ್ನು ತರಲು ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಅವರನ್ನು ನಾಡಿನ ಮುಖ್ಯಮಂತ್ರಿ ಮಾಡಲು ರಾಜ್ಯದ ಜನತೆ ಕಾತುರದಿಂದ ಕಾಯುತ್ತಿದ್ದಾರೆ ಎಂದರು.
ಮೇ 7ರಂದು ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ಜನರೊಂದಿಗೆ ಜನತಾದಳ ಹಾಗೂ ಜೆಡಿಎಸ್ ಪಕ್ಷದ ಬೆಳ್ಳಿಹಬ್ಬದ ಸಮಾರಂಭ ಆಯೋಜಿಸಲಾಗಿದೆ. ಜಿಲ್ಲಾ ಎಲ್ಲಾ ತಾಲೂಕುಗಳಲ್ಲೂ ಈ ಕಾರ್ಯಕ್ರಮ ಮುಗಿದೆ. ನಿಖಿಲ್ ಕುಮಾರಸ್ವಾಮಿ ಅವರು ಪಕ್ಷ ಸಂಘಟನೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದ ಪಕ್ಷದ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಬನ್ನಂಗಾಡಿ ಹಾಗೂ ಡಿಂಕಾ ಗ್ರಾಪಂ ವ್ಯಾಪ್ತಿಯ ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.