ಸಾರಾಂಶ
ಕನ್ನಡಪ್ರಭ ವಾರ್ತೆ ಧಾರವಾಡ
ಸಾರ್ವಜನಿಕರಿಗೆ ಉತ್ತಮ ಆಡಳಿತ ವ್ಯವಸ್ಥೆ ಮತ್ತು ಅವರಲ್ಲಿ ರಾಜ್ಯ ಸರ್ಕಾರದ ಸೌಲಭ್ಯಗಳ ಅರಿವು ಮೂಡಿಸಿ, ಯೋಜನೆಗಳನ್ನು ತಲುಪಿಸಲು ಜನತಾ ದರ್ಶನ ಅತ್ಯಂತ ಮಹತ್ವದ ಮಾಧ್ಯಮ. ಇದರಿಂದ ಸರ್ಕಾರ ಹೆಚ್ಚು ಹೆಚ್ಚು ಜನಪರವಾಗಿ ಕೆಲಸ ಮಾಡಲು ಅನುಕೂಲವಾಗುತ್ತಿದೆ ಎಂದು ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.ಇಲ್ಲಿಯ ಸೃಜನಾ ರಂಗಮಂದಿರದಲ್ಲಿ ಸೋಮವಾರ ಜಿಲ್ಲಾಡಳಿತ ಆಯೋಜಿಸಿದ್ದ ಜನತಾ ದರ್ಶನ ಕಾರ್ಯಕ್ರಮ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮುಖ್ಯಮಂತ್ರಿಗಳ ಸೂಚನೆಯಂತೆ ಜರುಗುತ್ತಿರುವ ಜನತಾ ದರ್ಶನವು ಜಿಲ್ಲೆಯೂ ಸೇರಿದಂತೆ ಎಲ್ಲ ಜಿಲ್ಲೆಗಳಲ್ಲಿಯೂ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ.ಕಳೆದ ತಿಂಗಳ ಜಿಲ್ಲಾಮಟ್ಟದ ಜನತಾ ದರ್ಶನದಲ್ಲಿ ಸ್ವೀಕರಿಸಿದ್ದ ಸಾರ್ವಜನಿಕರ ಅಹವಾಲುಗಳಲ್ಲಿ ಶೇ. 90 ರಷ್ಟು ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ, ವಿಲೇವಾರಿ ಮಾಡಲಾಗಿದೆ. ಸಂಬಂಧಿಸಿದ ಅರ್ಜಿದಾರರಿಗೆ ಎಸ್.ಎಂ.ಎಸ್. ಮೂಲಕ ಮಾಹಿತಿ ಹಾಗೂ ಅರ್ಜಿಗಳಿಗೆ ಹಿಂಬರಹ ನೀಡಲಾಗಿದೆ. ಉಳಿದ ಅರ್ಜಿಗಳನ್ನು ಇಲಾಖೆ ಹಿರಿಯ ಅಧಿಕಾರಿಗಳು ಪರಿಶೀಲಿಸುತ್ತಿದ್ದು, ಅವುಗಳನ್ನು ಸಹ ಕಾಲಮಿತಿಯಲ್ಲಿ ವಿಲೇವಾರಿ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಜನತಾ ದರ್ಶನ ಕಾರ್ಯಕ್ರಮದಿಂದ ಬಡವರ ಸಮಸ್ಯೆ, ನೋವುಗಳನ್ನು ಹತ್ತಿರದಿಂದ ತಿಳಿಯಲು ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಅವಕಾಶವಾಗುತ್ತದೆ. ಸಮಸ್ಯೆ ಆಲಿಸಿದ ಅಧಿಕಾರಿಗಳು ಸಂಯಮದಿಂದ ಪರಿಶೀಲಿಸಿ, ಪರಿಹಾರ ಕ್ರಮ ಕೈಗೊಳ್ಳುತ್ತಾರೆ ಎಂದು ಸಚಿವರು ಹೇಳಿದರು.ಜನತಾ ದರ್ಶನದಲ್ಲಿ ಸ್ವೀಕರಿಸಿರುವ ಅರ್ಜಿಗಳನ್ನು ಕಾಲಮಿತಿಯಲ್ಲಿ ಪರಿಹರಿಸುತ್ತೇವೆ. ಅರ್ಜಿದಾರರು ಅವಸರ ಮಾಡದೇ, ತಾಳ್ಮೆಯಿಂದ ಇರಬೇಕು. ಅರ್ಜಿಗಳ ಕಾನೂನಾತ್ಮಕತೆಯನ್ನು ಪರಿಶೀಲನೆ ಮಾಡಲಾಗುತ್ತದೆ. ಎಲ್ಲ ಸ್ವೀಕೃತ ಅಹವಾಲುಗಳನ್ನು ನಿಯಮಾನುಸಾರ ಇತ್ಯರ್ಥ ಪಡಿಸಲಾಗುತ್ತದೆ ಎಂದು ಸಚಿವ ಸಂತೋಷ ಲಾಡ್ ತಿಳಿಸಿದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಅವರು ಸ್ವಾಗತಿಸಿದರು. ವೇದಿಕೆಯಲ್ಲಿ ವಿಧಾನಪರಿಷತ್ತ ಸದಸ್ಯ ಪ್ರದೀಪ ಶೆಟ್ಟರ, ಮಹಾನಗರ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ, ಜಿಪಂ ಸಿಇಒ ಸ್ವರೂಪಾ ಟಿ.ಕೆ., ಉಪಕಾರ್ಯದರ್ಶಿ ಬಿ.ಎಸ್. ಊಗನೂರಮಠ, ಎಸ್ಪಿ ಡಾ. ಗೋಪಾಲ್ ಬ್ಯಾಕೋಡ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಬಿ.ಎಸ್. ಮುಗನೂರಮಠ ಇದ್ದರು. ತಹಸೀಲ್ದಾರ ದೊಡ್ಡಪ್ಪ ಹೂಗಾರ ಜನತಾ ದರ್ಶನದ ಅಹವಾಲುಗಳನ್ನು ನಿರ್ವಹಿಸಿದರು.ಜನತಾ ದರ್ಶನ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ವಸತಿ, ಕಾರ್ಮಿಕ ಇಲಾಖೆ, ಕೃಷಿ, ತೋಟಗಾರಿಕೆ, ಪಶುಪಾಲನೆ ಮತ್ತು ಪಶು ವೈಧ್ಯಕೀಯ ಇಲಾಖೆಗಳಿಂದ ಆಯ್ಕೆಯಾಗಿದ್ದ ಪಲಾನುಭವಿಗಳಿಗೆ ಹಕ್ಕು ಪತ್ರಗಳನ್ನು, ವಿವಿಧ ಸೌಲಭ್ಯಗಳನ್ನು ವಿತರಿಸಿದರು. ಮತ್ತು ಶಾಲಾ ಶಿಕ್ಷಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ನೀಡಲಾಯಿತು.
ಶಾಲಾ ಶಿಕ್ಷಣ ಇಲಾಖೆಯ ಜಯಲಕ್ಷ್ಮೀ ನಿರೂಪಿಸಿದರು.