ಸಮಸ್ಯೆಗಳ ಪರಿಹಾರಕ್ಕೆ ಜನತಾ ದರ್ಶನ ಆಯೋಜನೆ: ಸಚಿವ ಚಲುವರಾಯಸ್ವಾಮಿ

| Published : Mar 06 2024, 02:17 AM IST

ಸಮಸ್ಯೆಗಳ ಪರಿಹಾರಕ್ಕೆ ಜನತಾ ದರ್ಶನ ಆಯೋಜನೆ: ಸಚಿವ ಚಲುವರಾಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರದಿಂದ ಬರ ಪರಿಹಾರ ಬಾರದಿರುವ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ಮೊದಲ ಹಂತದಲ್ಲಿ 35 ಲಕ್ಷ ರೈತರಿಗೆ ರು. 2000 ದಂತೆ 600 ಕೋಟಿ ರು. ಅನುದಾನ ವೆಚ್ಚ ಮಾಡಲಾಗಿದೆ. ಬೆಳೆ ವಿಮೆ 1400 ಕೋಟಿ ರು. ಒದಗಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲು ಗ್ರಾಮಮಟ್ಟದಲ್ಲಿ ಜನತಾದರ್ಶನ ಆಯೋಜಿಸಲಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.

ನಾಗಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೌಡ್ಲೆ, ಹೊಸಗಾವಿ, ಆಬಲವಾಡಿ, ಬಿದರಕೋಟೆ ಗ್ರಾಮಗಳಲ್ಲಿ ನಡೆದ ಜನತಾ ದರ್ಶನದಲ್ಲಿ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳನ್ನು ವಿತರಿಸಿ ‌ಮಾತನಾಡಿದ ಅವರು, ಜಿಲ್ಲೆಯಲ್ಲಿ‌ ಶಕ್ತಿ ಯೋಜನೆಯಡಿ 4 ಕೋಟಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಸಾರಿಗೆ ಬಸ್ ಗಳಲ್ಲಿ ಸಂಚರಿಸಿದ್ದಾರೆ. 116 ಕೋಟಿ ರು. ಹಣವನ್ನು ಸರ್ಕಾರ ಭರಿಸಲಿದೆ ಎಂದರು.

ಗೃಹ ಜ್ಯೋತಿ, ಗೃಹ ಲಕ್ಷ್ಮೀ, ಅನ್ನ ಭಾಗ್ಯ, ಶಕ್ತಿ ಹಾಗೂ ಯುವನಿಧಿ ಯೋಜನೆಗೆ ಸರ್ಕಾರ 36,000 ಕೋಟಿ ರು. ವೆಚ್ಚ ಮಾಡಿದೆ. ಈ ಯೋಜನೆಗಳಡಿ ಹಣವನ್ನು ಸರ್ಕಾರ ಭರಿಸುತ್ತಿದೆ. ಡಿಸಿಸಿ ಬ್ಯಾಂಕ್ ವತಿಯಿಂದ 136 ಕೋಟಿ ರು. ಹಣವನ್ನು ಬಡ್ಡಿರಹಿತವಾಗಿ ನೀಡಲಾಗಿದೆ ಎಂದರು‌.

ಕೌಡ್ಲೆ ಪಂಚಾಯಿತಿ ಒಂದರಲ್ಲೇ ರೈತರಿಗೆ ಬಡ್ಡಿ ರಹಿತವಾಗಿ 3 ಕೋಟಿ ಹಾಗೂ ಸ್ವಸಹಾಯ ಮಹಿಳಾ ಸಂಘಗಳಿಗೆ 1.5 ಕೋಟಿ ರು. ಸಾಲ ನೀಡಲಾಗಿದೆ. ವ್ಯಾಪ್ತಿಯಲ್ಲಿ 4000 ಕುಟುಂಬಗಳಿಗೆ ಗ್ಯಾರಂಟಿ ಯೋಜನೆಗಳ ಸೌಲಭ್ಯ ದೊರೆಯುತ್ತಿದೆ‌ ಎಂದು ತಿಳಿಸಿದರು.

ಕೇಂದ್ರ ಸರ್ಕಾರದಿಂದ ಬರ ಪರಿಹಾರ ಬಾರದಿರುವ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ಮೊದಲ ಹಂತದಲ್ಲಿ 35 ಲಕ್ಷ ರೈತರಿಗೆ ರು. 2000 ದಂತೆ 600 ಕೋಟಿ ರು. ಅನುದಾನ ವೆಚ್ಚ ಮಾಡಲಾಗಿದೆ. ಬೆಳೆ ವಿಮೆ 1400 ಕೋಟಿ ರು. ಒದಗಿಸಲಾಗಿದೆ ಎಂದರು.

ಕಂದಾಯ ಇಲಾಖೆಯಲ್ಲಿ 9000 ಪ್ರಕರಣಗಳು ಬಾಕಿ ಇದ್ದವು. 8000 ಪ್ರಕರಣಗಳನ್ನು ಇತ್ಯರ್ಥಗೊಳಿಸಿದೆ. ಇನ್ನೂ ಹೆಚ್ಚಿನ ಕೆಲಸ ಮಾಡಲು ಶ್ರಮಿಸಲಾಗುತ್ತಿದೆ. ಜನತಾ ದರ್ಶನದಲ್ಲಿ ಸ್ವೀಕರಿಸುವ ಅರ್ಜಿಗಳನ್ನು ಒಂದು ತಿಂಗಳೊಳಗೆ ಇತ್ಯರ್ಥಪಡಿಸಲಾಗುವುದು. ದಾಖಲೆ ಕೊರತೆ ಅಥವಾ ಕಾನೂನು ಬಾಹಿರವಾಗಿದ್ದರೆ ಪರಿಹರಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವಿವಿಧ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಲೋಕಸಭಾ ಸಂಭಾವನೀಯ ಅಭ್ಯರ್ಥಿ ಸ್ಟಾರ್ ಚಂದ್ರು, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗಿಗೌಡ, ಎಸಿ ಮಹೇಶ್ , ತಹಸೀಲ್ದಾರ್ ಸೋಮಶೇಖರ್ , ಗ್ರೇಟ್ 2 ತಹಸೀಲ್ದಾರ್ ಸೋಮಶೇಖರ್ , ಜಿಲ್ಲಾ ಕೃಷಿ ಅಧಿಕಾರಿ ಮಾಲತಿ ಸೇರಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.