ಪಾರದರ್ಶಕ ಆಡಳಿತಕ್ಕೆ ಜನತಾ ದರ್ಶನ ಪೂರಕ

| Published : Dec 31 2023, 01:30 AM IST

ಸಾರಾಂಶ

ಪಾರದರ್ಶಕ ಆಡಳಿತ ಮತ್ತು ಜನತೆಯ ಕೆಲಸಗಳನ್ನು ತ್ವರಿತವಾಗಿ ವಿಲೇವಾರಿಗೊಳಿಸಲು ಜನತಾ ದರ್ಶನ ಕಾರ್ಯಕ್ರಮ ಪೂರಕವಾಗಿದೆ.

ಮೊಳಕಾಲ್ಮುರು: ಪಾರದರ್ಶಕ ಆಡಳಿತ ಮತ್ತು ಜನತೆಯ ಕೆಲಸಗಳನ್ನು ತ್ವರಿತವಾಗಿ ವಿಲೇವಾರಿಗೊಳಿಸಲು ಜನತಾ ದರ್ಶನ ಕಾರ್ಯಕ್ರಮ ಪೂರಕವಾಗಿದ್ದು, ಸಾರ್ವಜನಿಕರು ಕಾರ್ಯಕ್ರಮದ ಸೌಲಭ್ಯ ಪಡೆದುಕೊಳ್ಳಬೇಕೆಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು.

ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಶನಿವಾರ ಜಿಲ್ಲಾಡಳಿತ, ತಾಲೂಕು ಆಡಳಿತದಿಂದ ಆಯೋಜಿಸಲಾಗಿದ್ದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾರ್ವಜನಿಕರು ವ್ಯಥಾ ಕಚೇರಿಗೆ ಅಲೆದಾಡುವುದನ್ನು ನಿಯಂತ್ರಿಸಿ ಜನತೆಯ ಕೆಲಸಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಸರ್ಕಾರದ ಜನತಾ ದರ್ಶನ ಉಪಯುಕ್ತವಾದುದಾಗಿದೆ. ಜಿಲ್ಲಾಡಳಿತವೇ ನಿಮ್ಮ ಮನೆ ಬಾಗಿಲಿಗೆ ಬಂದಿದೆ. ಸಾರ್ವಜನಿಕರು ಅಧಿಕಾರಿಗಳ ಮಟ್ಟದಲ್ಲಿ ಆಗುವಂತಹ ಕೆಲಸಗಳನ್ನು ತಿಳಿಸಿ ಸಮಸ್ಯೆ ನಿವಾರಿಸಿಕೊಳ್ಳಬೇಕು. ಇದರಿಂದ ಜನತೆಗೆ ಪಾರದರ್ಶಕ ಆಡಳಿತ ನೀಡುವಲ್ಲಿ ಸಹಕಾರಿಯಾಗಲಿದೆ ಎಂದರು.

ಹಿಂದುಳಿದ ಮೊಳಕಾಲ್ಮುರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನೀರಾವರಿ ಅಗತ್ಯವಾಗಿದೆ. ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾಮಗಾರಿ ವಿಳಂಬವಾಗಿದೆ. ಭದ್ರಾ ನೀರು ಜಿಲ್ಲೆಗೆ ಬಂದು ವರ್ಷಗಳೇ ಕಳೆದರೂ ತಾಲೂಕಿನಲ್ಲಿ ಕಾಮಗಾರಿ ಪೂರ್ಣಗೊಂಡಿಲ್ಲ. ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸದಿದ್ದರೆ ನ್ಯಾಯಾಲಯದ ಮೊರೆ ಹೋಗುತ್ತೇನೆ ಎಂದು ಖಡಕ್ ಸೂಚನೆ ನೀಡಿದ್ದೇನೆ. ಜನವರಿ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ. ಜನತೆಯ ಜವಾಬ್ದಾರಿ ಅರಿತು ಕೆಲಸ ಮಾಡುತ್ತೇನೆ. ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.

ಜಿಲ್ಲಾಧಿಕಾರಿ ದಿವ್ಯಾಪ್ರಭು ಮಾತನಾಡಿ, ಸಾರ್ವಜನಿಕ ಕೆಲಸಗಳನ್ನು ಆಯಾ ಹಂತದಲ್ಲಿಯೇ ಪರಿಹರಿಸಲು ಸರ್ಕಾರದ ಕಾರ್ಯಕ್ರಮಗಳನ್ನು ಜನತೆಗೆ ತಿಳಿಸಿ ಸಮಸ್ಯೆ ಪರಿಹರಿಸಲು ಜಿಲ್ಲಾಡಳಿತ ಜನತಾ ದರ್ಶನದ ಹೆಸರಲ್ಲಿ ಮನೆ ಬಾಗಿಲಿಗೆ ಬಂದಿದೆ. ಇದರಿಂದ ಸಮಯದ ಉಳಿತಾಯ ಮತ್ತು ಕಚೇರಿಗೆ ಅಲೆದಾಡುವುದು ತಪ್ಪುತ್ತದೆ. ಜನತೆ ನೀಡುವ ಪ್ರತಿ ಅರ್ಜಿಯೂ ವಿಲೇವಾರಿ ಮಾಡಲು ತಿಂಗಳ ಕಾಲಾವಾಶವಿದ್ದು, ಪ್ರತಿಯೊಂದು ಗಣತೀಕೃತವಾಗಲಿದ್ದು, ಇದು ಕಡತವೂ ಯಾವ ಹಂತದಲ್ಲಿದೆ ಎನ್ನುವುದು ತಿಳಿಯಲಿದೆ. ಸರ್ಕಾರದ ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳು ಉತ್ತಮವಾಗಿ ನಿರ್ವಹಣೆ ಮಾಡಿದ್ದು, ರಾಜ್ಯದಲ್ಲಿಯೇ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಯೋಜನೆಗಳಿಂದ ವಂಚಿತವಾದವರಿಗೂ ಸೌಲಭ್ಯ ಕಲ್ಪಿಸಲು ವಿಶೇಷ ತಂಡವನ್ನು ರಚಿಸಲಾಗಿದೆ. ಪ್ರತಿಯೊಬ್ಬರು ಜನತಾ ದರ್ಶನದ ಸೌಲಭ್ಯವನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.

ಈ ವೇಳೆ ಪೋಲೀಸ್ ಇಲಾಖೆಯಿಂದ ಅಪರಾಧ ಮಾಸಾಚರಣೆ ಅಂಗವಾಗಿ ಅಪರಾಧ ತಡೆ ಕುರಿತು ಜಾಗೃತಿ ಮೂಡಿಸುವಂತ ಬಿತ್ತಿ ಪತ್ರಗಳ ಪ್ರದರ್ಶನ, ಶಿಶು ಅಭಿವೃದ್ಧಿ ಯೋಜನೆಯಿಂದ ಪೋಷಣ್ ಅಭಿಯಾನ, ತೋಟಗಾರಿಕೆ, ಆರೋಗ್ಯ, ಸಮಾಜ ಕಲ್ಯಾಣ, ಕೃಷಿ, ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. 20ಕ್ಕೂ ಹೆಚ್ಚಿನ ಅಂಗವಿಕಲರಿಗೆ ವಿವಿಧ ಸಲಕರಣೆಗಳನ್ನು ವಿತರಿಸಲಾಯಿತು. ಗರ್ಭಿಣಿ ಮಹಿಳೆಯರಿಗೆ ಸೀಮಂತ ನಡೆಸಲಾಯಿತು. 151 ಅರ್ಜಿಗಳು ಸ್ವೀಕೃತಗೊಂಡವು.

ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಪ್ರಕಾಶ,ಜಂಟಿ ಕೃಷಿ ನಿರ್ಧೇಶಕ ಮಂಜುನಾಥ, ಯೋಜನಾ ನಿರ್ಧೇಶಕ ಮಹೇಶ, ಅಂಗವಿಕಲ ಕಲ್ಯಾಣಾಧಿಕಾರಿ ವೀಣಾ,ತಹಸೀಲ್ದಾರ್ ರೆಹಾನ್ ಪಾಶ,ತಾಪಂ ಇ.ಒ.ಪ್ರಕಾಶ,ಬಿಇಒ ನಿರ್ಮಲ,ಪಶು ಇಲಾಖೆಯ ರಂಗಪ್ಪ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.