ಜನತಾ ಪರಿವಾರಕ್ಕೆ ತೃತೀಯರಂಗದ ರಾಜಕೀಯ ಪ್ರಜ್ಞೆ ಬೇಕಿತ್ತು: ಮಾಜಿ ಸಭಾಪತಿ ಸುದರ್ಶನ್‌

| Published : Mar 24 2024, 01:33 AM IST / Updated: Mar 24 2024, 08:56 AM IST

ಜನತಾ ಪರಿವಾರಕ್ಕೆ ತೃತೀಯರಂಗದ ರಾಜಕೀಯ ಪ್ರಜ್ಞೆ ಬೇಕಿತ್ತು: ಮಾಜಿ ಸಭಾಪತಿ ಸುದರ್ಶನ್‌
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ದಿಕ್ಕು ಸರಿಯಾದ ದಾರಿಯಲ್ಲಿ ಸಾಗಬೇಕೆಂದಿದ್ದರೆ ಜನತಾ ಪರಿವಾರದ ಮುಖಂಡರಿಗೆ ತೃತೀಯ ರಂಗದ ಕುರಿತಂತೆ ರಾಜಕೀಯ ಪ್ರಜ್ಞೆ ಇರಬೇಕಿತ್ತು ಎಂದು ವಿಧಾನಪರಿಷತ್‌ ಮಾಜಿ ಸಭಾಪತಿ ವಿ.ಆರ್‌. ಸುದರ್ಶನ್‌ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ದೇಶದ ದಿಕ್ಕು ಸರಿಯಾದ ದಾರಿಯಲ್ಲಿ ಸಾಗಬೇಕೆಂದಿದ್ದರೆ ಜನತಾ ಪರಿವಾರದ ಮುಖಂಡರಿಗೆ ತೃತೀಯ ರಂಗದ ಕುರಿತಂತೆ ರಾಜಕೀಯ ಪ್ರಜ್ಞೆ ಇರಬೇಕಿತ್ತು ಎಂದು ವಿಧಾನಪರಿಷತ್‌ ಮಾಜಿ ಸಭಾಪತಿ ವಿ.ಆರ್‌. ಸುದರ್ಶನ್‌ ಅಭಿಪ್ರಾಯಪಟ್ಟರು.

ಭಾರತ ಯಾತ್ರಾ ಕೇಂದ್ರ, ಎಂ.ಪಿ. ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಮತ್ತು ಲೋಕನಾಯಕ ಜಯಪ್ರಕಾಶ್ ನಾರಾಯಣ್ ವಿಚಾರ ವೇದಿಕೆ ಸಹಯೋಗದಲ್ಲಿ ಚಿತ್ರಕಲಾ ಪರಿಷತ್ತಿನಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಮಾಜಿಕ ಹೋರಾಟಗಾರ್ತಿ ಇಂದಿರಾ ಕೃಷ್ಣಪ್ಪ ಅವರಿಗೆ ‘ಡಾ.ರಾಮಮನೋಹರ ಲೋಹಿಯಾ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.

ಸದ್ಯದ ಪರಿಸ್ಥಿತಿಯಲ್ಲಿ ದೇಶ ಮತ್ತು ರಾಜ್ಯಕ್ಕೆ ತೃತೀಯ ರಂಗದ ಅವಶ್ಯಕತೆಯಿತ್ತು. ತೃತೀಯ ರಂಗದ ಕುರಿತಂತೆ ಜನತಾ ಪರಿವಾರದ ಮುಖಂಡರಿಗೆ ರಾಜಕೀಯ ಪ್ರಜ್ಞೆ ಇದ್ದಿದ್ದರೆ ದೇಶದ ದಿಕ್ಕು-ದೆಸೆ ಸರಿದಾರಿಯಲ್ಲಿ ಸಾಗಲು ಸಾಧ್ಯವಿತ್ತು. 

ಹಾಗೆಂದು ನಾನು ಕಾಂಗ್ರೆಸ್‌ನಲ್ಲಿ ಲೋಪಗಳಿವೆ ಎಂದು ಹೇಳುತ್ತಿಲ್ಲ. ಸಂವಿಧಾನ ರಕ್ಷಣೆ ಮತ್ತು ಅದನ್ನು ಬಲಪಡಿಸುವಲ್ಲಿ ಕಾಂಗ್ರೆಸ್‌ ಕೊಡುಗೆ ಅಪಾರ ಎಂದರು.

ಇಂದಿರಾ ಕೃಷ್ಣಪ್ಪ ಅವರಿಗೆ ಲೋಹಿಯಾ ಪ್ರಶಸ್ತಿ ನೀಡಿರುವುದು ಸಂತಸದ ವಿಚಾರ. ನಾಡಿನ ದಲಿತ ಚಳವಳಿಗೆ ಕೃಷ್ಣಪ್ಪ ಅವರ ಕೊಡುಗೆ ದೊಡ್ಡದಿದೆ. 

ಈ ಹಿಂದೆ ನಾನು ಮತ್ತು ರಮೇಶ್ ಕುಮಾರ್ ಅವರು ಕೃಷ್ಣಪ್ಪ ಅವರನ್ನು ಕೋಲಾರ ಕ್ಷೇತ್ರದಿಂದ ಕಣಕ್ಕಿಳಿಸುವ ಪ್ರಯತ್ನ ಮಾಡಿದ್ದೆವು. ಆದರೆ, ರಾಜೀವ್‌ಗಾಂಧಿ ಅವರ ಸಾವಿನಿಂದಾಗಿ ಅದು ಅಪೂರ್ಣವಾಯಿತು ಎಂದು ಸ್ಮರಿಸಿದರು.

ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ಬಿ.ಆರ್.ಪಾಟೀಲ್, ಸಮಾಜವಾದಿ ಚಿಂತಕಿ ಡಾ.ವಿಜಯಾ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ, ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂ.ಪಿ.ಪ್ರಕಾಶ್ ಅವರ ಪುತ್ರಿ ಸುಮಾ ವಿಜಯ್ ಇತರರಿದ್ದರು.‘ಬಿ.ಆರ್‌.ಪಾಟೀಲ್‌ ಸಚಿವರಾಗಬೇಕಿತ್ತು’

ಹಿರಿಯ ಶಾಸಕ ಬಿ.ಆರ್‌.ಪಾಟೀಲ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಪ್ರವೇಶದ ದಿನಗಳಿಂದಲೂ ರಾಜ್ಯ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದಾರೆ. 

ಸಭಾಪತಿಗಳಾಗಿಯೂ ಕೆಲಸ ಮಾಡಿದ್ದಾರೆ. ಬಿ.ಆರ್‌. ಪಾಟೀಲ್‌ ಅವರು ಲೋಹಿಯಾ ಅವರ ಒಡನಾಡಿಯಾಗಿದ್ದು, ಸಮಾಜವಾದಿ ಪರಂಪರೆಯನ್ನು ಪೋಷಿಸುತ್ತಾ ಬಂದವರು. 

ಅಂತಹವರು ಮುಖ್ಯಮಂತ್ರಿಯವರ ರಾಜಕೀಯ ಸಲಹೆಗಾರ ಹುದ್ದೆ ಪಡೆದು ಕಾರಿಗೆ, ಕಚೇರಿಗೆ ಮಾತ್ರ ಸೀಮಿತವಾಗಬಾರದಿತ್ತು. ಅವರು ಸಚಿವರಾಗಬೇಕಿತ್ತು ಎಂದು ಸುದರ್ಶನ್‌ ಹೇಳಿದರು.