ಸಾರಾಂಶ
ಸಿಂಧನೂರಿನ ಪ್ರವಾಸಿ ಮಂದಿರದಲ್ಲಿ ಜನತಾ ಗಣರಾಜ್ಯೋತ್ಸವ ಟ್ರ್ಯಾಕ್ಟರ್‌ಗಳ ಪರೇಡ್ ಚಳವಳಿಯ ಕರಪತ್ರ ಬಿಡುಗಡೆಗೊಳಿಸಿ ಪ್ರಚಾರಾಂದೋಲನಕ್ಕೆ ಚಾಲನೆ ನೀಡಲಾಯಿತು. ಸುದ್ದಿಗೋಷ್ಠಿಯಲ್ಲಿ ರೈತ ವಿರೋಧಿ ಕೃಷಿ ಕಾನೂನುಗಳ ರದ್ದತಿ ಹೋರಾಟ ಸಮಿತಿ ಸಂಚಾಲಕ ಶರಣಪ್ಪ ಮರಳಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಸಿಂಧನೂರು
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ-ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಎಸ್‌ಕೆಎಂ ಮತ್ತು ಜೆಸಿಟಿಯು ರಾಷ್ಟ್ರೀಯ ಘಟಕದ ಕರೆಯ ಮೇರೆಗೆ ಜ.26 ರಂದು ಸಿಂಧನೂರಿನ ಯಲ್ಲಮ್ಮ ದೇವಿ ದೇವಸ್ಥಾನದಿಂದ ಗಾಂಧಿ ವೃತ್ತದ ಮೂಲಕ ಎಪಿಎಂಸಿ ಗಣೇಶ ದೇವಸ್ಥಾನವರೆಗೆ ಜನತಾ ಗಣರಾಜ್ಯೋತ್ಸವ ಟ್ರ್ಯಾಕ್ಟರ್‌ಗಳ ಪರೇಡ್ ಚಳವಳಿ ನಡೆಸಲಾಗುವುದು ಎಂದು ರೈತ ವಿರೋಧಿ ಕೃಷಿ ಕಾನೂನುಗಳ ರದ್ದತಿ ಹೋರಾಟ ಸಮಿತಿ ಸಂಚಾಲಕ ಶರಣಪ್ಪ ಮರಳಿ ತಿಳಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಜಾರಿ ಮಾಡಬೇಕು. ರಾಜ್ಯದಲ್ಲಿ ಜಾರಿಗೊಳಿಸಿರುವ ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ಖಾಸಗೀಕರಣ ಹಾಗೂ ಕೃಷಿ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ರದ್ದುಪಡಿಸುವ ವಿದ್ಯುತ್ ತಿದ್ದುಪಡಿ ಮಸೂದೆ ಹಿಂಪಡೆಯಬೇಕು. ಕೃಷಿ ಸಬ್ಸಿಡಿ ಕಡಿತಗೊಳಿಸಿರುವುದನ್ನು ವಾಪಸ್ ಪಡೆಯಬೇಕು. ಸಾಲ ನೀಡಿದ ಬ್ಯಾಂಕ್‌ಗಳು ರೈತರ ಆಸ್ತಿಗಳನ್ನು ಜಪ್ತಿ ಮಾಡುವುದನ್ನು ತಕ್ಷಣ ನಿಲ್ಲಿಸಬೇಕು. ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ದೆಹಲಿ ಹೋರಾಟದಲ್ಲಿ ರೈತರ ಮೇಲೆ ಹಾಕಿರುವ ಸುಳ್ಳು ಕೇಸ್ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ಜ.26 ರಂದು ಟ್ರ್ಯಾಕ್ಟರ್ ಪರೇಡ್ ಚಳವಳಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಸಂಚಾಲಕ ಅಮೀನ್ ಪಾಷಾ ದಿದ್ದಿಗಿ ಮುಖಂಡರಾದ ಬಸವಂತರಾಯಗೌಡ ಕಲ್ಲೂರು, ಡಿ.ಎಚ್.ಕಂಬಳಿ, ರಮೇಶ ಪಾಟೀಲ್ ಬೇರಿಗಿ, ಚಿಟ್ಟಿಬಾಬು ಬೂದಿವಾಳ ಕ್ಯಾಂಪ್, ರಾಮಯ್ಯ ಜವಳಗೇರಾ, ಎಸ್.ದೇವೇಂದ್ರಗೌಡ, ನಾಗರಾಜ್ ಪೂಜಾರ್ ಇದ್ದರು.