ಸಾರಾಂಶ
ಮದ್ದೂರು ಕಂದಾಯ ಇಲಾಖೆಯ ವಿಎ ಹಾಗೂ ಆರ್ ಐಗಳು ಕೇಂದ್ರ ಸ್ಥಾನದಲ್ಲಿದ್ದು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ ಹೇಳಿದರು.
ತಾಲೂಕಿನ ಕೊಪ್ಪ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಜನತಾ ದರ್ಶನವನ್ನು ಉದ್ಘಾಟಿಸಿ ಮಾತನಾಡಿ, ಸಾರ್ವಜನಿಕರು ತಮ್ಮ ಕುಂದು ಕೊರತೆಗೆ ಬಗ್ಗೆ ನೀಡುವ ಅರ್ಜಿಗಳಿಗೆ ಸ್ಪಂದಿಸಿ ಆದಷ್ಟು ಬೇಗ ವಿಲೇವಾರಿ ಮಾಡಬೇಕು ಎಂದರು.ಜನತಾ ದರ್ಶನದಲ್ಲಿ ಸ್ವೀಕೃತವಾದ ಕುಂದು ಕೊರತೆ ಅರ್ಜಿಗಳನ್ನು 15 ದಿನದೊಳಗಾಗಿ ವಿಲೇವಾರಿ ಮಾಡಬೇಕು. ತಮ್ಮ ವ್ಯಾಪ್ತಿಯಲ್ಲಿ ಆಗದಿದ್ದರೆ ಮೇಲಾಧಿಕಾರಿಗಳನ್ನು ಸಂಪರ್ಕಿಸಬೇಕು. ಅಲ್ಲಿಯೂ ಆಗದಿದ್ದರೆ ತಹಸೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳ ಗಮನಕ್ಕೆ ತರಬೇಕು. ಈ ಹಂತದಲ್ಲೂ ಕೆಲಸವಾಗದಿದ್ದಲ್ಲಿ ನನ್ನ ಕಚೇರಿಗೆ ಸಲ್ಲಿಸುವಂತೆ ಸೂಚಿಸಿದರು.
ಕೊಪ್ಪ ಹೋಬಳಿಗೆ ಸಂಬಂಧಿಸಿದಂತೆ 8 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯ ಜನರ ಕುಂದು ಕೊರತೆಗಳನ್ನು ಪರಿಹರಿಸಲು ಇಂದು ಜನತಾ ದರ್ಶನ ಆಯೋಜಿಸಿ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಜನರ ಸಮಸ್ಯೆಗಳನ್ನು ನಿವಾರಿಸಲು ಹಂತ ಹಂತವಾಗಿ ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದರು.ಕೊಪ್ಪ ಭಾಗದ ಜನರು ಆಧಾರ್ ತಿದ್ದುಪಡಿ ಹಾಗೂ ನೊಂದಣಿಗಾಗಿ ಜಿಲ್ಲಾ ಕೇಂದ್ರಕ್ಕೆ ತೆರಳಬೇಕಿತ್ತು. ಇದನ್ನು ತಪ್ಪಿಸಲು ಕೊಪ್ಪದಲ್ಲಿ ಹೊಸ ಆಧಾರ್ ಕೇಂದ್ರವನ್ನು ತೆರೆಯಲಾಗಿದೆ. ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಚುನಾವಣಾ ಪೂರ್ವದಲ್ಲಿ ನೀಡಲಾಗಿದ್ದ ಭರವಸೆಗಳನ್ನು ಸರ್ಕಾರ ಅಸ್ತಿತ್ವಕ್ಕೆ ಬಂದ 100 ದಿನದೊಳಗಾಗಿ 4 ಗ್ಯಾರಂಟಿಗಳನ್ನು ಈಡೇರಿಸಿದೆ. ಜನಪ್ರತಿನಿಧಿಗಳು ಸಾರ್ವಜನಿಕರಿಗೆ ನೀಡುವ ಭರವಸೆಗಳನ್ನು ಪೂರ್ಣಗೊಳಿಸಿದರೆ ಮಾತ್ರ ಸಾರ್ವಜನಿಕರ ನಂಬಿಕೆ ಹಾಗೂ ವಿಶ್ವಾಸ ಗಳಿಸಲು ಸಾಧ್ಯ ಎಂದರು.ಕೊಪ್ಪ ಹೋಬಳಿಯಲ್ಲಿ ಪೌತಿ ಖಾತೆ ಆಂದೋಲನ ಯೋಜನೆ ಸಂಬಂಧ ಮೃತರ ಪಟ್ಟಿಯೊಂದಿಗೆ ಮನೆ ಮನೆಗೆ ಭೇಟಿ ನೀಡಿ ವಾರಸುದಾರರಿಂದ 658 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಇವರಿಗೆ ಪೌತಿ ಖಾತೆ ಮಾಡಿಕೊಡಲಾಗುವುದು ಎಂದರು.
ಅತಿವೃಷ್ಠಿ ಹಾಗೂ ಅನಾವೃಷ್ಠಿ ಉಂಟಾದ ವೇಳೆ ಕೇಂದ್ರ ಸರ್ಕಾರ ಪರಿಹಾರ ಒದಗಿಸಲಿದೆ. ರಾಜ್ಯದಲ್ಲಿ ಬರ ಪರಿಹಾರ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಬರದ ಹಿನ್ನೆಲೆಯಲ್ಲಿ ಜನರಿಗೆ ರಾಜ್ಯ ಸರ್ಕಾರ ಸ್ಪಂದಿಸಲು ಗ್ಯಾರಂಟಿ ಯೋಜನೆಗಳು ಸೇರಿದಂತೆ ವಿವಿಧ ಸಬ್ಸಿಡಿ, ಸಹಾಯಧನ, ಸಾಮಾಜಿಕ ಪಿಂಚಣಿ ಮೂಲಕ 75 ಸಾವಿರ ಕೋಟಿ ವೆಚ್ಚ ಮಾಡಿದೆ ಎಂದರು.ಬೆಳೆ ವಿಮೆ ಯೋಜನೆಯಡಿ 53,000 ರೈತರ ಹೆಸರು ನೊಂದಾಯಿಸಿದ್ದು, ಸರ್ಕಾರ 1500 ಕೋಟಿ ಹಾಗೂ ರೈತರು 50 ಕೋಟಿ ವಿಮೆ ಕಂಪನಿಗೆ ಪಾವತಿಸಿದೆ. ಮಳೆಕೊರತೆ ಹಿನ್ನೆಲೆಯಲ್ಲಿ ಬಿತ್ತನೆ ಮಾಡಿ ಬೆಳೆ ನಾಶವಾಗಿದ್ದು, ಪ್ರತಿ ಎಕರೆಗೆ 9,438ರು ಗಳಂತೆ ಮದ್ದೂರು ತಾಲೂಕಿನಲ್ಲಿ 103 ಲಕ್ಷ ಹಾಗೂ ರಾಜ್ಯಾದ್ಯಂತ 230 ಕೋಟಿ ರು. ಗಳನ್ನು ಪಾವತಿಸಿದೆ ಎಂದು ಹೇಳಿದರು.
ಸಾಮಾಜಿಕ ಭದ್ರತಾ ಯೋಜನೆ ಅಡಿ 100 ಫಲಾನುಭವಿಗಳಿಗೆ ಪಿಂಚಣಿ ಮಾಸಾಸನ ವಿತರಣೆ ಮಾಡಲಾಯಿತು. 11ಇ ಮತ್ತು ಆರ್. ಆರ್.ಟಿ 180 ಅರ್ಜಿಗಳನ್ನು ವಿಲೇವಾರಿ ಮಾಡಲಾಯಿತು. ಇತರೆ ಇಲಾಖೆಗಳಿಂದ ಒಟ್ಟು 119 ಫಲಾನುಭವಿಗಳಿಗೆ ಸರ್ಕಾರದ ವಿವಿಧ ಸವಲತ್ತುಗಳನ್ನು ವಿತರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ, ಗ್ರಾಪಂ ಅಧ್ಯಕ್ಷ ನವೀನ್, ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ಮದ್ದೂರು ತಹಸೀಲ್ದಾರ್ ನರಸಿಂಹಮೂರ್ತಿ, ಜಿಪಂ ಉಪ ಕಾರ್ಯದರ್ಶಿ ಕೆ. ಆನಂದ್ ಕುಮಾರ್, ಜಂಟಿ ಕೃಷಿ ನಿರ್ದೇಶಕ ಎಸ್ .ವಿ.ಅಶೋಕ್ , ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸಿದ್ದಲಿಂಗೇಶ್ ಸೇರಿದಂತೆ ಇನ್ನಿತರರಿದ್ದರು.
--ಬಾಕ್ಸ್ಒಟ್ಟು 84 ಅರ್ಜಿ ಸ್ವೀಕಾರಜನತಾ ದರ್ಶನದಲ್ಲಿ ಒಟ್ಟು 84 ಅರ್ಜಿಗಳನ್ನು ಸ್ವೀಕರಿಸಲಾಯಿತು. ಕಂದಾಯ 48, ಗ್ರಾಮೀಣಾಭಿವೃದ್ಧಿ 9, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ - 1, ಕೆಎಸ್ ಆರ್ ಟಿಸಿ 2, ಭೂ ಸ್ವಾಧೀನ ಇಲಾಖೆ 11, ಆರೋಗ್ಯ ಇಲಾಖೆ 2, ಲೋಕೋಪಯೋಗಿ ಇಲಾಖೆ 5, ಕೆಇಬಿ 2, ಆಹಾರ ಮತ್ತು ನಾಗರಿಕ ಸರಬರಾಜು 1, ಕೃಷಿ 2, ಹಿಂದುಳಿದ ವರ್ಗಗಳ ಇಲಾಖೆ 1 ಅರ್ಜಿಯನ್ನು ಸ್ವೀಕರಿಸಲಾಯಿತು.-----------
18ಕೆಎಂಎನ್ ಡಿ19,20