ಜನೌಷಧಿ ಕೇಂದ್ರಗಳಿಂದ ಬಡವರಿಗೆ ಅನುಕೂಲ: ಸಂಸದ ರಾಘವೇಂದ್ರ

| Published : Mar 10 2025, 12:16 AM IST

ಸಾರಾಂಶ

ಶಿವಮೊಗ್ಗ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಡವರಿಗಾಗಿಯೇ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳಿಂದ ದೇಶದ ನಾಗರಿಕರಿಗೆ ಹೆಚ್ಚಿನ ಅನುಕೂಲಕರವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಶಿವಮೊಗ್ಗ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಡವರಿಗಾಗಿಯೇ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳಿಂದ ದೇಶದ ನಾಗರಿಕರಿಗೆ ಹೆಚ್ಚಿನ ಅನುಕೂಲಕರವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ ಅಡಿಯಲ್ಲಿ 7 ವರ್ಷಗಳ ಹಿಂದೆ ಜಾರಿಗೆ ಬಂದಿರುವ ಜನೌಷಧಿ ದಿವಸ್ ಆಚರಣೆ- 2025 ಅನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಜನೌಷಧಿ ಕೇಂದ್ರಗಳ ಜಾರಿಗೂ ಮುನ್ನ ಬಡವರಿಗೆ, ಮಧ್ಯಮ ವರ್ಗದವರಿಗೆ ತಿಂಗಳಿಗೆ ಸರಾಸರಿ 3 ಸಾವಿರ ರು. ಗಳಷ್ಟು ಔಷಧಿಗೆ ವೆಚ್ಚವಾಗುತ್ತಿದ್ದು, ಜನೌಷಧಿ ಕೇಂದ್ರದಿಂದಾಗಿ ಅದು ಒಂದು ಸಾವಿರ ರು.ಗೆ ಇಳಿಕೆಯಾಗಿದೆ. ಇದರಿಂದ ಪ್ರತಿ ಕುಟುಂಬ 2 ಸಾವಿರ ರು.ನಷ್ಟು ಉಳಿತಾಯ ಮಾಡಿಕೊಳ್ಳುತ್ತಿದೆ ಎಂದರು.

ಜನೌಷಧಿ ಕೇಂದ್ರದಿಂದ ಇನ್ನೂ ಹೆಚ್ಚಿನ ಬಡವರಿಗೆ ಪ್ರಯೋಜನ ತಲುಪಬೇಕು ಎಂಬುದು ಪ್ರಧಾನಿಯವರ ಮಹಾದಾಸೆಯಾಗಿದೆ ಎಂದು ತಿಳಿಸಿದರು.

ಜನೌಷಧಿ ಕೇಂದ್ರಗಳಲ್ಲಿ ದೊರೆಯುವ ಔಷಧಿಗಳು ಯಾವುದೇ ತೆರಿಗೆ ಇಲ್ಲದೇ ಕೇವಲ ಉತ್ಪಾದನಾ ವೆಚ್ಚಕ್ಕಷ್ಟೇ ಮಾರಾಟವಾಗುತ್ತಿವೆ. ರಾಜ್ಯದಲ್ಲಿ ಇದನ್ನು ಇನ್ನೂ ಸರಳೀಕರಿಸಬೇಕಾಗಿದೆ. ಶಾಸಕರ ನೇತೃತ್ವದಲ್ಲಿ ಶಿವಮೊಗ್ಗದಲ್ಲಿ ಮೆಗ್ಗಾನ್ ಆಸ್ಪತ್ರೆ ವೈದ್ಯರ ಜೊತೆ ಚರ್ಚಿಸಿ ಸರ್ಕಾರಿ ಆಸ್ಪತ್ರೆಗಳಲ್ಲೂ ಜನೌಷಧಿ ದೊರೆಯುವಂತಾಗಬೇಕು ಎಂದರು.

ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಕುಟುಂಬ ಕಲ್ಯಾಣ ಇಲಾಖಾ ಕಚೇರಿಗಳಲ್ಲಿ ಜನೌಷಧಿ ಮಾರಾಟ ಮಾಡಲು ಸಹಕರಿಸುತ್ತಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲೂ ಜನೌಷಧಿ ದೊರಕಿದರೆ ಬಡವರಿಗೆ ಇನ್ನಷ್ಟು ಅನುಕೂಲವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಪ್ರಕೋಷ್ಠಗಳ ಅಧ್ಯಕ್ಷ ಎಸ್.ದತ್ತಾತ್ರಿ, ಶಾಸಕ ಎಸ್.ಎನ್.ಚನ್ನಬಸಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಜನೌಷಧಿ ಅಧಿಕಾರಿ ವೀರೇಶ್ ಬಾಬು, ಮುಖಂಡರಾದ ರಾಮುನಾಯ್ಕ್, ಮಲ್ಲೇಶ್, ಮೋಹನ್ ರೆಡ್ಡಿ, ಮಾಲತೇಶ್, ಕಿರಣ್ ಕುಮಾರ್, ಸುನಿಲ್ ಗಾಯಕ್ವಾಡ್ ಮತ್ತಿತರರು ಇದ್ದರು.