ಸಾರಾಂಶ
ಬಾಬುರಾಯನ ಕೊಪ್ಪಲು ಗ್ರಾಮದ ರಾಮಕೃಷ್ಣ ಪ್ಲೋರ್ ಮಿಲ್ ಮುಂಭಾಗದ ಪರಿಶಿಷ್ಟ ಜಾತಿ ಕಾಲೋನಿಗೆ ಇತ್ತೀಚೆಗೆ ರಸ್ತೆ ನಿರ್ಮಿಸುವ ಕಾಮಗಾರಿ ಆರಂಭಿಸಿದ್ದರು. ಆ ಕಾಮಗಾರಿ ಬಹಳ ಅವೈಜ್ಞಾನಿಕವಾಗಿದೆ. ರಸ್ತೆ ಇಕ್ಕೆಲಗಳಲ್ಲಿ ಚರಂಡಿ ನಿರ್ಮಿಸದೆ ರಸ್ತೆ ಮಾಡಲು ಹೊರಟಿರುವುದು ಸ್ಥಳಿಯ ಆಡಳಿತದ ಬೇಜವಾಬ್ದರಿ ಎದ್ದು ತೋರಿಸುತ್ತದೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ಕಿರಂಗೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಾಬುರಾಯನ ಕೊಪ್ಪಲು ಗ್ರಾಮದಲ್ಲಿ ಒತ್ತುವರಿಯಾಗಿರುವ ರಸ್ತೆಯನ್ನು ತೆರವು ಮಾಡಿ ನೂತನ ಚರಂಡಿ ಸಹಿತ ರಸ್ತೆ ನಿರ್ಮಿಸುವಂತೆ ಒತ್ತಾಯಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಕಾರ್ಯಕರ್ತರು ಪಟ್ಟಣದ ತಾಲೂಕು ಪಂಚಾಯ್ತಿ ಕಚೇರಿಗೆ ಮನವಿ ಸಲ್ಲಿಸಿದರು.ಪಟ್ಟಣದ ಬಸ್ ನಿಲ್ದಾಣದ ಬಳಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಜಿಲ್ಲಾಧ್ಯಕ್ಷೆ ಲತಾ ನೇತೃತ್ವದಲ್ಲಿ ಸೇರಿದ ಕಾರ್ಯಕರ್ತರು ತಾಪಂ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಕೆಲಕಾಲ ಧರಣಿ ಕುಳಿತರು.
ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 77 ವರ್ಷಗಳು ಕಳೆದರೂ ದೇಶದ ನಾಗರೀಕರಿಗೆ ಕನಿಷ್ಠ ಮೂಲ ಸೌಕರ್ಯ ಒದಗಿಸಲು ನಮ್ಮನ್ನಾಳಿದ ಸರ್ಕಾರಗಳಿಂದ ಸಾಧ್ಯವಾಗಿಲ್ಲ. ಇದು ನಾಚಿಗೇಡಿನ ಸಂಗತಿ ಎಂದು ಕಿಡಿಕಾರಿದರು.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆಂದೇ ಮೀಸಲಿರಿಸಿರುವ ವಿಶೇಷ ಅನುದಾನಗಳು ಅಧಿಕಾರಿ ಹಾಗೂ ರಾಜಕಾರಣಿಗಳ ಜೇಬು ತುಂಬಿಸುತ್ತಿವೆಯೋ ಹೊರತು ದಲಿತರ ಸಮಗ್ರ ಅಭಿವೃದ್ಧಿಗೆ ಬಳಕೆಯಾಗುತ್ತಿಲ್ಲ ಎಂದು ಜಿಲ್ಲಾಧ್ಯಕ್ಷೆ ಲತಾ ಆರೋಪಿಸಿದರು.
ಬಾಬುರಾಯನ ಕೊಪ್ಪಲು ಗ್ರಾಮದ ರಾಮಕೃಷ್ಣ ಪ್ಲೋರ್ ಮಿಲ್ ಮುಂಭಾಗದ ಪರಿಶಿಷ್ಟ ಜಾತಿ ಕಾಲೋನಿಗೆ ಇತ್ತೀಚೆಗೆ ರಸ್ತೆ ನಿರ್ಮಿಸುವ ಕಾಮಗಾರಿ ಆರಂಭಿಸಿದ್ದರು. ಆ ಕಾಮಗಾರಿ ಬಹಳ ಅವೈಜ್ಞಾನಿಕವಾಗಿದೆ. ರಸ್ತೆ ಇಕ್ಕೆಲಗಳಲ್ಲಿ ಚರಂಡಿ ನಿರ್ಮಿಸದೆ ರಸ್ತೆ ಮಾಡಲು ಹೊರಟಿರುವುದು ಸ್ಥಳಿಯ ಆಡಳಿತದ ಬೇಜವಾಬ್ದರಿ ಎದ್ದು ತೋರಿಸುತ್ತದೆ ಎಂದು ದೂರಿದರು.ಚರಂಡಿ ನಿರ್ಮಿಸದಿದ್ದರೆ ಕೊಳಚೆ ನೀರು ರಸ್ತೆಯಲ್ಲಿಯೇ ಹರಿಯುವುದಲ್ಲದೆ ರಸ್ತೆ ಗುಣಮಟ್ಟಕ್ಕೂ ತೊಂದರೆಯಾಗಲಿದೆ. ಕೂಡಲೇ ಒತ್ತುವರಿಯಾಗಿರುವ ರಸ್ತೆ ತೆರವು ಮಾಡಿ ಚರಂಡಿ ಸಹಿತ ರಸ್ತೆ ನಿರ್ಮಿಸಬೇಕು. ಜೊತೆಗೆ ಇತರ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ತಾಪಂ ಇಒ ವೇಣು ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಸುಶೀಲ, ಉಪಾಧ್ಯಕ್ಷೆ ಶೋಭಾ, ಸಂಘಟನೆಯ ತಾಲೂಕು ಅಧ್ಯಕ್ಷೆ ಜಯಮ್ಮ, ಕಾರ್ಯದಶಿ ವಿ.ಕಲಾವತಿ, ಕರ್ನಾಟಕ ಪ್ರಾಂತ ರೈತ ಸಂಘದ ಅಬ್ದುಲ್ ಶಕುರ್ ಸೇರಿದಂತೆ ಇತರರು ಇದ್ದರು.