ಸಾರಾಂಶ
ಕನ್ನಡಪ್ರಭ ವಾರ್ತೆ ಬಳ್ಳಾರಿ
ವೀರಶೈವ ಲಿಂಗಾಯತ ಸಮುದಾಯದ ಐಕ್ಯತೆಗೆ ಶ್ರಮಿಸುವ ಉದ್ದೇಶದಿಂದ ಭಾರತೀಯ ವೀರಶೈವ ಲಿಂಗಾಯತ ಜಂಗಮ ಪರಿಷತ್ ಅಸ್ವಿತ್ವಕ್ಕೆ ತರಲಾಗಿದ್ದು, ಸೆ.18ರಂದು ಬೆಳಗ್ಗೆ 11 ಗಂಟೆಗೆ ನಗರದ ರಾಘವ ಕಲಾ ಮಂದಿರದಲ್ಲಿ ಪರಿಷತ್ ಉದ್ಘಾಟನೆ ಸಮಾರಂಭ ಹಾಗೂ ಜಂಗಮರ ಜಾಗೃತ ಸಮಾವೇಶ ನಡೆಯಲಿದೆ ಎಂದು ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ಕೆ.ಎಂ. ಮಹೇಶ್ವರಸ್ವಾಮಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಜನಗಣತಿಯಲ್ಲಿ ಅತ್ಯಂತ ಗೊಂದಲ ಸೃಷ್ಟಿಸಲಾಗಿದೆ. ಜನಗಣತಿಯಲ್ಲಿ ವೀರಶೈವ ಜಂಗಮ ಹೆಸರು ಕೈ ಬಿಡಲಾಗಿತ್ತು. ಈ ಹಿನ್ನೆಲೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ಆರ್.ನಾಯ್ಕ ಅವರಿಗೆ 150 ಜನರು ತಕರಾರು ಅರ್ಜಿ ಸಲ್ಲಿಸಿ, ಜಂಗಮರು, ವೀರಶೈವ ಜಂಗಮ, ವೀರಶೈವ ಲಿಂಗಾಯತ ಜಂಗಮರು ಹೆಸರನ್ನು ಸೇರ್ಪಡೆ ಮಾಡುವಂತೆ ಮನವಿ ಮಾಡಲಾಯಿತು. ಎಲ್ಲರ ಶ್ರಮದ ಫಲವಾಗಿ ಸಾಮಾಜಿಕ ಜನಗಣತಿಯಲ್ಲಿ ವೀರಶೈವ ಜಂಗಮರ ಹೆಸರು ಸೇರ್ಪಡೆಗೊಂಡಿದೆ. ಹಿಂದುಳಿದ ವರ್ಗಗಳ ಆಯೋಗದ ಜಾತಿ ಪಟ್ಟಿಯ ಕ್ರಮ ಸಂಖ್ಯೆ 556-ಜಂಗಮ, 1523 ವೀರಶೈವ ಜಂಗಮ/ಜಂಗಮರು, 1525-ವೀರಶೈವ ಲಿಂಗಾಯತ ಜಂಗಮ ಎಂದು ಹಿಂದುಳಿದ ವರ್ಗಗಳ ಆಯೋಗ ಜಾತಿ ಪಟ್ಟಿಯಲ್ಲಿ ಪ್ರಕಟಗೊಂಡಿರುವುದು ಸಮುದಾಯದ ಎಲ್ಲರ ಶ್ರಮದ ಫಲವಾಗಿದೆ. ಈ ಹಿಂದೆ ಜಂಗಮ ಜಾತಿ ಯಾವುದೇ ಗಣತಿಯಲ್ಲಿ ದಾಖಲೆಯಲ್ಲಿ ನಮೂದಾಗಿರಲಿಲ್ಲ. ಈಗ ಗಣತಿಯಲ್ಲಿ ಜಂಗಮ ಹೆಸರು ಸೇರ್ಪಡೆಗೊಂಡಿರುವುದು ಸಮುದಾಯಕ್ಕೆ ಹೆಚ್ಚು ಸಂತಸ ತಂದಿದೆ. ಕೇಂದ್ರ ಸರ್ಕಾರ ಜನಗಣತಿ ಮಾಡುವ ಸಾಧ್ಯತೆಯಿದ್ದು, ಮುಂದಿನ ದಿನಗಳಲ್ಲಿ ಸಮುದಾಯದ ಒಟ್ಟು ಜನಸಂಖ್ಯೆ ತಿಳಿಯಲು ಇದು ಅನುಕೂಲವಾಗಲಿದೆ. ಹಿಂದುಳಿದ ವರ್ಗಗಳ ಆಯೋಗದಲ್ಲಿ ವೀರಶೈವ ಜಂಗಮ ಎಂದು ನಾವು ದಾಖಲಿಸಿ, ಸೂಕ್ತ ಮಾಹಿತಿ ನೀಡಿದ ನಂತರ ಆಯೋಗದ ವರದಿ ಆಧಾರವಾಗಿಟ್ಟುಕೊಂಡು 2026ರಲ್ಲಿ ಕೇಂದ್ರ ಸರ್ಕಾರದ ಜಾತಿ ಜನಗಣತಿ ಪಟ್ಟಿಯಲ್ಲಿ ವೀರಶೈವ ಜಂಗಮ ಹೆಸರನ್ನು ಸೇರಿಸುವುದು ಸೇರಿದಂತೆ ಸಮಸ್ತ ಜಂಗಮರ ಹಿತಾಸಕ್ತಿ ಕಾಪಾಡಲು ಪರಿಷತ್ ಶ್ರಮಿಸಲಿದೆ ಎಂದು ಹೇಳಿದರು.
ಅಖಿಲ ಭಾರತ ವೀರಶೈವ ಮಹಾಸಭಾ ತೀರ್ಮಾನದಂತೆ ಧರ್ಮದ ಕಾಲಂನ 11ರಲ್ಲಿ ಇತರರು ಎಂದಿದ್ದು ಅದರಲ್ಲಿ ವೀರಶೈವ ಲಿಂಗಾಯತ ಎಂದು ಬರೆಸಬೇಕು. ಈ ಬಗ್ಗೆ ಸೆ.19ರಂದು ಹುಬ್ಬಳ್ಳಿಯಲ್ಲಿ ಜರುಗುವ ಸಮಾವೇಶದಲ್ಲಿ ಸೂಕ್ತ ನಿರ್ಣಯಕ್ಕೆ ಬರುವ ಸಾಧ್ಯತೆಯಿದೆ ಎಂದರು.ಬಳ್ಳಾರಿಯಲ್ಲಿ ಸೆ.18ರಂದು ಜರುಗುವ ಜಂಗಮರ ಜಾಗೃತ ಸಮಾವೇಶದಲ್ಲಿ ಹರ-ಗುರುಗಳು, ಜಂಗಮ ಮುಖಂಡರು, ಶಾಸಕರು, ಮಾಜಿ ಶಾಸಕರು ಹಾಗೂ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸಮಾಜದ ಅಭಿವೃದ್ಧಿ ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಮಾವೇಶದಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.ಸಮುದಾಯದ ಮುಖಂಡರಾದ ವಿ.ಎಸ್. ಪ್ರಭಯ್ಯಸ್ವಾಮಿ, ಎಚ್.ಕೆ. ಗೌರಿಶಂಕರ ಸ್ವಾಮಿ, ಎರಿಸ್ವಾಮಿ ಎತ್ತಿನಬೂದಿಹಾಳು ಮಠ, ರೇಣುಕಾ ಪ್ರಸಾದ್, ವಾಮದೇವಯ್ಯ, ಕೆ.ಎಂ. ಕೊಟ್ರೇಶ್, ಎಂ.ಕುಮಾರಸ್ವಾಮಿ, ಎಚ್.ಎಂ. ಕಿರಣ್ ಕುಮಾರ್, ಶಶಿಧರ್, ಗುರುಬಸವರಾಜ್ ಸುದ್ದಿಗೋಷ್ಠಿಯಲ್ಲಿದ್ದರು.
----------ಬೇಡ ಜಂಗಮ ಎಂದು ಬರೆಸಬೇಡಿ
ವೀರಶೈವ ಲಿಂಗಾಯತ ಜಂಗಮರು ಬೇಡ ಜಂಗಮ ಎಂದು ಬರೆಸಬಾರದು. ಕಳೆದ 30 ವರ್ಷಗಳಿಂದ ಬೇಡ ಜಂಗಮ ಸರ್ಟಿಫಿಕೇಟ್ ಸರ್ಕಾರ ನೀಡುತ್ತಿಲ್ಲ. ಈಗಾಗಲೇ ಸರ್ಟಿಫಿಕೇಟ್ ಪಡೆದವರು ಉದ್ಯೋಗ ಸಂದರ್ಭದಲ್ಲಿನಾನಾ ಸಮಸ್ಯೆ ಎದುರಿಸುತ್ತಿದ್ದಾರೆ. ಕೋರ್ಟ್ ಆದೇಶದ ಇರುವುದರಿಂದ ಸರ್ಕಾರ ಮುಂದೆಯೂ ಸಹ ಬೇಡ ಜಂಗಮ ಸರ್ಟಿಫಿಕೇಟ್ ನೀಡುವ ಯಾವುದೇ ಸಾಧ್ಯತೆಗಳಿಲ್ಲ. ಆದ್ದರಿಂದ ವೀರಶೈವ ಲಿಂಗಾಯತರು ತಮಗಿರುವ ಕೋಟಾದಲ್ಲಿ ಸೌಲಭ್ಯ ಪಡೆಯುವಂತಾಗಬೇಕು. ನಾಗಮೋಹನದಾಸ್ ವರದಿಯಲ್ಲಿ ಹೇಳಿರುವಂತೆ ಬೇಡ ಜಂಗಮ ಸರ್ಟಿಫಿಕೇಟ್‌ನಲ್ಲಿ ಕೇವಲ 105 ಜನರು ಮಾತ್ರ ಕರ್ನಾಟಕದಲ್ಲಿ ಸರ್ಕಾರಿ ನೌಕರಿ ಪಡೆದಿರುವ ಅಧಿಕೃತ ಮಾಹಿತಿ ಇದೆ. 2025ರ ಜೂ. 30ರಂದು ಹೈಕೋರ್ಟ್‌ನ ದ್ವಿಸದಸ್ಯ ನ್ಯಾಯಪೀಠ ಕಲಬುರಗಿಯ ಇಬ್ಬರು ನ್ಯಾಮೂರ್ತಿಗಳು ನೀಡಿದ ಆದೇಶದಂತೆ ವೀರಶೈವ ಜಂಗಮರು ಬೇಡ ಜಂಗಮರಲ್ಲ ಎಂದು ತೀರ್ಪು ನೀಡಿರುವುದರಿಂದ ವೀರಶೈವ ಜಂಗಮರಾಗಿಯೇ ಮುಂದುವರಿಯಬೇಕು ಎಂದು ಕೆ.ಎಂ. ಮಹೇಶ್ವರ ಸ್ವಾಮಿ ತಿಳಿಸಿದರು.
---------ಕೆ.ಎಂ. ಮಹೇಶ್ವರಸ್ವಾಮಿ ಫೋಟೋ.