ಸಾರಾಂಶ
ಜನಿವಾರ ಪ್ರಕರಣದ ಪ್ರಮುಖ ಆರೋಪಿಗಳಿಗೆ ಸೂಕ್ತ ಶಿಕ್ಷೆ ನೀಡಬೇಕು ಮತ್ತು ವಿದ್ಯಾರ್ಥಿ ಸುಚಿವೃತ ಕುಲಕರ್ಣಿಗೆ ಪರೀಕ್ಷೆ ಬರೆಯಲು ವಿಶೇಷ ಅವಕಾಶ ನೀಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು. ಇತ್ತೀಚೆಗೆ ಬ್ರಾಹ್ಮಣರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಈ ಘಟನೆಗಳು ಜೀವಂತ ಸಾಕ್ಷಿಯಾಗಿದೆ.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಶಿವಮೊಗ್ಗ ಜಿಲ್ಲೆಯ ತೀರ್ಥಳ್ಳಿಯಲ್ಲಿ ನಡೆದ ಸಿಇಟಿ ಪರೀಕ್ಷೆ ಬರೆಯಲು ಆಗಮಿಸಿದ್ದ ಬ್ರಾಹ್ಮಣ ವಿದ್ಯಾರ್ಥಿಯ ಜನಿವಾರವನ್ನು ತೆಗೆದು ಕಸದ ಬುಟ್ಟಿಗೆ ಎಸೆದ ಪ್ರಕರಣ ಮತ್ತು ಬೀದರ್‌ನಲ್ಲಿ ವಿದ್ಯಾರ್ಥಿ ಸುಚಿವೃತ ಕುಲಕರ್ಣಿ ಎಂಬಾತ ಜನಿವಾರ ಹಾಕಿದ್ದಕ್ಕೆ ಪ್ರವೇಶ ನಿರಾಕರಣೆ ಮಾಡಿದ ಪ್ರಕರಣ ಖಂಡನೀಯ ಎಂದು ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ನಾಗಭೂಷಣ್ ತಿಳಿಸಿದರು. ಬ್ರಾಹ್ಮಣ ಮಹಾಸಭಾ ವತಿಯಿಂದ ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಘಟನೆಗಳು ಹೇಯ ಕೃತ್ಯ ಆಗಿದ್ದು ಸರ್ಕಾರ ಈ ಪ್ರಕರಣದಲ್ಲಿ ತಲೆ ತಗ್ಗಿಸುವಂತಾಗಿದೆ ಎಂದರು.ಆರೋಪಿಗಳಿಗೆ ಶಿಕ್ಷೆ ವಿಧಿಸಲಿ
ಪ್ರಕರಣದ ಪ್ರಮುಖ ಆರೋಪಿಗಳಿಗೆ ಸೂಕ್ತ ಶಿಕ್ಷೆ ನೀಡಬೇಕು ಮತ್ತು ವಿದ್ಯಾರ್ಥಿ ಸುಚಿವೃತ ಕುಲಕರ್ಣಿಗೆ ಪರೀಕ್ಷೆ ಬರೆಯಲು ವಿಶೇಷ ಅವಕಾಶ ನೀಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು. ಇತ್ತೀಚೆಗೆ ಬ್ರಾಹ್ಮಣರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಈ ಘಟನೆಗಳು ಜೀವಂತ ಸಾಕ್ಷಿಯಾಗಿದೆ. ಇದರಿಂದ ಬ್ರಾಹ್ಮಣ ಸಮುದಾಯಕ್ಕೆ ತೀವ್ರ ನೋವುಂಟಾಗಿದೆ. ತಕ್ಷಣ ಆ ಅಧಿಕಾರಿಗಳನ್ನು ಅಮಾನತು ಮಾಡಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.ಮಹಾಸಭಾ ಚಿಕ್ಕಬಳ್ಳಾಪುರ ಜಿಲ್ಲಾ ಪ್ರತಿನಿಧಿ ಪ್ರಕಾಶ್ ಮಾತನಾಡಿ, ವಿಪ್ರ ಜನಾಂಗಕ್ಕೆ ಜನಿವಾರ ಅತ್ಯಂತ ಪವಿತ್ರವಾದದ್ದು. ಒಮ್ಮೆ ಧರಿಸಿದರೆ ಅವನ ಅಂತ್ಯಕಾಲದಲ್ಲಿಯೇ ಅದನ್ನು ತೆಗೆಯುವುದು. ಅನ್ಯಾಯಕ್ಕೆ ಒಳಗಾದ ವಿದ್ಯಾರ್ಥಿಗೆ ಪುನಹ ಪರೀಕ್ಷಾ ಬರೆಯಲು ಅವಕಾಶ ಕಲ್ಪಿಸಿ ಕೊಡಬೇಕು ಎಂದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಶಿಡ್ಲಘಟ್ಟ ಕೃಷ್ಣ ಉಪಾಧ್ಯಕ್ಷ ಕೆ. ಪಿ.ನವ ಮೋಹನ್, ಶೃಂಗೇರಿ ಶಾರದಾ ರಮೇಶ್, ಅನುಪಮ, ಖಜಾಂಚಿ ರಾಘವೇಂದ್ರ ಮತ್ತಿತರರು ಇದ್ದರು.