ಸಾರಾಂಶ
ಕನ್ನಡಪ್ರಭ ವಾರ್ತೆ ಚಿಂತಾಮಣಿ
ಸಿಇಟಿ ಪರೀಕ್ಷೆಯಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಗಾಯತ್ರಿ ದೀಕ್ಷೆ ಚಿಹ್ನೆಯಾದ ಜನಿವಾರವನ್ನು ತೆಗೆಸಿದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ತಾಲೂಕು ಘಟಕವು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್‌ಗೆ ಲಿಖಿತ ಮನವಿ ಸಲ್ಲಿಸಿತು.ಸಿಇಟಿ ಅಧಿಕಾರಿಗಳು-ಸಿಬ್ಬಂದಿ ಬ್ರಾಹ್ಮಣ ವಿದ್ಯಾರ್ಥಿಗಳು ಕೈಯ್ಯಲ್ಲಿ ಕಟ್ಟಿಕೊಂಡಿದ್ದ ಕಾಶಿದಾರ ಮತ್ತು ಗಾಯತ್ರಿ ದೀಕ್ಷೆ ಪಡೆದ ಯಜ್ಞೋಪವೀತವನ್ನು ದೌರ್ಜನ್ಯದಿಂದ ತೆಗೆಸಿದ್ದಾರೆ. ಇದೊಂದು ಅಮಾನವೀಯ ಮತ್ತು ದಾರುಣ ಘಟನೆಯಾಗಿದ್ದು ಈ ಘಟನೆಯು ಭಾರತ ಸಂವಿಧಾನದ ಧಾರ್ಮಿಕ ಸ್ವಾತಂತ್ರ‍್ಯದ ಹಕ್ಕನ್ನು ನೀಡಿರುವ ಕಲಂ ೨೬(ಬಿ) ರೀತ್ಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಅಧಿಕಾರಿಗಳ ಉದ್ಧಟತನಧಾರ್ಮಿಕ ಸ್ವಾತಂತ್ರ‍್ಯ ಹಕ್ಕಿನ ಅಡಿಯಲ್ಲಿ ಸಿಖ್ಖರು ಕ್ರಿಪಾಣ್, ಮುಸ್ಲಿಂಮರು ಹಿಜಾಬ್, ಟೊಪ್ಪಿಗೆ, ಹಿಂದೂ ಧರ್ಮಕ್ಕೆ ಸೇರಿದ ಜನಿವಾರವನ್ನು ಧರಿಸಲು ಅರ್ಹತೆ ಪಡೆದ ಎಲ್ಲ ಸಮುದಾಯದವರು ತಮ್ಮ ತಮ್ಮ ಧಾರ್ಮಿಕ ಚಿಹ್ನೆಗಳನ್ನು ಯಾವುದೇ ಅಡ್ಡಿ ಆತಂಕಗಳಿಲ್ಲದೆ ನಮ್ಮ ದೇಶದಲ್ಲಿ ಧರಿಸಬಹುದಾಗಿದೆ. ನಮ್ಮ ಧಾರ್ಮಿಕ ಸ್ವಾತಂತ್ರ‍್ಯ ಬಗ್ಗೆ ಪ್ರಾಥಮಿಕ ಜ್ಞಾನವಿಲ್ಲದ ಅಧಿಕಾರಿಗಳು ಉದ್ಧಟತನ ತೋರಿರುವುದು ಕ್ಷಮಾರ್ಹವಲ್ಲದ ನೀಚ ಕೆಲಸವಾಗಿದೆ.
ವರ್ಷಪೂರ್ತಿ ಕಷ್ಟಪಟ್ಟು ಅಧ್ಯಯನ ಮಾಡಿ ಒಳ್ಳೆ ಭವಿಷ್ಯಕ್ಕಾಗಿ ಸಿದ್ಧತೆ ಮಾಡಿಕೊಂಡು ಬಂದಿದ್ದ ವಿದ್ಯಾರ್ಥಿಗಳು ತಮ್ಮ ಜನಿವಾರಗಳನ್ನು ಬಲವಂತವಾಗಿ ಕಳೆದುಕೊಂಡು ಮಾನಸಿಕವಾಗಿ ಆಘಾತಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸಲಾಗದೆ ನಿರಾಶರಾಗಿದ್ದು ಈ ವರ್ಷದ ತಮ್ಮ ವಿದ್ಯಾರ್ಥಿ ಭವಿಷ್ಯದ ಬಗ್ಗೆ ಚಿಂತಾಕ್ರಾಂತರಾಗಿರುತ್ತಾರೆ. ಈ ದಾರುಣ ಪರಿಸ್ಥಿತಿಗೆ ಅಧಿಕಾರಿಗಳೇ ಕಾರಣರಾಗಿದ್ದು ಅವರನ್ನು ಸೇವೆಯಿಂದ ವಜಾ ಮಾಡುವಂತೆ ಒತ್ತಾಯಿಸಿದ್ದಾರೆ.ಪರೀಕ್ಷೆಗೆ ಅವಕಾಶ ಕಲ್ಪಸಲಿ
ಕರ್ನಾಟಕ ಸರ್ಕಾರವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಜನಿವಾರಗಳನ್ನು ತೆರವು ಮಾಡಿರುವುದರಿಂದ ಆಘಾತಕ್ಕೆ ಒಳಗಾದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಸಿಇಟಿ ಪರೀಕ್ಷೆ ಬರೆಯುವ ಅವಕಾಶವನ್ನು ಕಲ್ಪಿಸುವಂತೆ ಮನವಿಯಲ್ಲಿ ಒತ್ತಾಯಿಸಿದೆ.ಈ ಸಂದರ್ಭದಲ್ಲಿ ಚಿಂತಾಮಣಿ ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಎನ್. ಕೃಷ್ಣಾ, ಖಜಾಂಚಿ ಜಿ.ವಿ.ಮಲ್ಲಿಕಾರ್ಜುನ್, ಕಾರ್ಯಕಾರಿ ಸಮಿತಿ ಸದಸ್ಯರಾದ ಟಿ.ಎಲ್.ಆನಂದ್, ಲಕ್ಷ್ಮೀನಾರಾಯಣ್, ಎನ್.ಎಸ್.ಕೃಷ್ಣಮೂರ್ತಿ, ಧರ್ಮರಾಜ್, ಅನಂತಪದ್ಮನಾಭರಾವ್, ಟಿ ಎಸ್ ನಾಗರಾಜ್, ಚಿಂತಾಮಣಿ ಪುರೋಹಿತರ ಸಂಘದ ಅಧ್ಯಕ್ಷ ಉಮಾ ಶಂಕರ್ ಶರ್ಮ ಮತ್ತಿತರರು ಇದ್ದರು.