ಸಾರಾಂಶ
ಕನ್ನಡಪ್ರಭ ವಾರ್ತೆ ಪಾವಗಡ
ವಿದ್ಯಾರ್ಥಿಗಳ ಜನಿವಾರ ತೆಗೆಸಿ ಅವಮಾನ ಮಾಡಿದ್ದು ಸೂಕ್ತವಲ್ಲ. ಕೂಡಲೇ ಸಿಇಟಿ ಪರೀಕ್ಷಾ ಕೇಂದ್ರ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ನಗರ ಹಾಗೂ ತಾಲೂಕು ಬ್ರಾಹ್ಮಣ ಮಹಾಸಭಾದ ವತಿಯಿಂದ ಮಂಗಳವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನೆಡೆಸಿದರು.ಬೆಳಿಗ್ಗೆ ಬ್ರಾಹ್ಮಣ ಸಂಘಟನೆಯ ಅನೇಕ ಮಂದಿ ಮುಖಂಡರು ಪಟ್ಟಣದಲ್ಲಿ ಸೇರಿ ಇಲ್ಲಿನ ಮಧುಗಿರಿ ಊರುಬಾಗಿಲು ಮೂಲಕ ಬಳ್ಳಾರಿ ರಸ್ತೆಗೆ ಆಗಮಿಸಿ ಸರ್ಕಾರ ಹಾಗೂ ಪರೀಕ್ಷಾ ಕೇಂದ್ರದ ಸಿಬ್ಬಂದಿ ವಿರುದ್ಧ ಘೋಷಣೆ ಮೊಳಗಿಸಿದರು. ಬಳಿಕ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ನಡೆಸಿದರು.
ಇದೇ ವೇಳೆ ತಾಲೂಕು ಬ್ರಾಹ್ಮಣ ಸಭಾ ಅಧ್ಯಕ್ಷ ಹಾಗೂ ಇಲ್ಲಿನ ಶ್ರೀ ಶನೇಶ್ವರಸ್ವಾಮಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಸಿ.ಎನ್. ಆನಂದರಾವ್ ಮಾತನಾಡಿ, ಸಿಇಟಿ ಪರೀಕ್ಷೆ ಬರೆಯುತ್ತಿದ್ದ ವೇಳೆ ಬ್ರಾಹ್ಮಣ ಸಮಾಜದ ವಿದ್ಯಾರ್ಥಿಗಳನ್ನು ಜನಿವಾರ ತೆಗೆಯುವಂತೆ ಒತ್ತಡ ಹೇರಿದ್ದು ಹಾಗೂ ಪರೀಕ್ಷೆ ಬರೆಯಲು ತೊಂದರೆ ಮಾಡಿದ್ದು ಸರಿಯಲ್ಲ. ಇದೊಂದು ಅವಮಾನಕರ ಸಂಗತಿ. ಇದು ಬ್ರಾಹ್ಮಣ ಸಮುದಾಯಕ್ಕೆ ಮಾಡಿದ ದೊಡ್ಡ ಅಪಮಾನ. ಸಮಸ್ಯೆ ಗಂಭೀರವಾಗಿ ಪರಿಗಣಿಸಿ ಪರೀಕ್ಷಾ ಮಂಡಳಿಯ ಸಿಬ್ಬಂದಿಗೆ ಸೂಕ್ತ ಶಿಕ್ಷೆ ವಿಧಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದರು.ತಾಲೂಕು ಬ್ರಾಹ್ಮಣ ಸಮುದಾಯದ ಹಿರಿಯ ಮುಖಂಡ ಎಂ.ಎಸ್.ವಿಶ್ವನಾಥ್ ಮಾತನಾಡಿ ಪ್ರಸಕ್ತ ಸಾಲಿಗೆ ಸಿಇಟಿ ಪರೀಕ್ಷೆ ಬರೆಯುತ್ತಿದ್ದ ವೇಳೆ ಶಿವಮೊಗ್ಗದ ತೀರ್ಥಹಳ್ಳಿ ಹಾಗೂ ಬೀದರ್ ನಲ್ಲಿ ಬ್ರಾಹ್ಮಣ ಸಮಾಜದ ವಿದ್ಯಾರ್ಥಿಗಳ ಮೇಲೆ ಜನಿವಾರ ತೆಗೆಯಲು ಒತ್ತಡವೇರಿ ಮಾನಸಿಕ ಹಿಂಸೆ ಮಾಡಿದ್ದು ಸಮಂಜಸವಲ್ಲ.ಇದು ಬ್ರಾಹ್ಮಣ ಸಮಾಜದ ಭಾವನೆಗಳಿಗೆ ಧಕ್ಕೆ ಹಾಗೂ ಅವಮಾನ ಮಾಡಿ ಅಮಾನುಷವಾಗಿ ವರ್ತಿಸಿದ್ದಾರೆ. ಪರೀಕ್ಷಾ ಸಿಬ್ಬಂದಿ ವರ್ಗದವರ ಮೃಗೀಯ ಧೋರಣೆಯನ್ನು ಪಾವಗಡ ತಾಲೂಕು ಮತ್ತು ನಗರ ಬ್ರಾಹ್ಮಣ ಮಹಾ ಸಭಾವು ತೀವ್ರವಾಗಿ ಖಂಡಿಸುತ್ತಿರುವುದಾಗಿ ಆಕ್ರೋಶ ವ್ಯಕ್ತಪಡಿಸಿದರು. ಪರೀಕ್ಷೆ ಬರೆಯದೆ ತನ್ನ ಸಮಾಜಕ್ಕೆ ಆದ ಅವಮಾನವನ್ನು ಸಹಿಸದೆ ಪ್ರತಿಭಟನೆ ಮಾಡಿ ಮನೆಗೆ ವಾಪಸ್ಸಾದ ವಿದ್ಯಾರ್ಥಿಗಳನ್ನು ಬ್ರಾಹ್ಮಣ ಸಮಾಜವು ಹೃದಯ ಪೂರ್ವಕವಾಗಿ ಅಭಿನಂದಿಸುತ್ತಿರುವುದಾಗಿ ಹೇಳಿದರು.
ಎಸ್ಎಸ್ ಕೆ ಸಂಘದ ಕಾರ್ಯದರ್ಶಿ ಸುಬ್ಬನರಸಿಂಹ ಅವರು ಘಟನೆ ಕುರಿತು ತೀವೃ ಬೇಸರ ವ್ಯಕ್ತಪಡಿಸಿದ್ದು, ಗೌರವಾಧ್ಯಕ್ಷ ಅನಂತರಾಮ್ ಭಟ್ ಎಂ.ಎನ್.ರಘುನಾಥ್ ಪುರಸಭೆ ಸದಸ್ಯೆ ಜಾಹ್ನವಿ,ಚಂದ್ರಿಕ , ಶ್ರೀರಂಜಿನಿ, ರಾಧಮ್ಮ, ಎಂ.ರಾಮನಾಥ, ಬುಗುಡುರು ವೇಣುಗೋಪಾಲ್, ಆದಿನಾರಾಯಣರಾವ್, ರಾಮದಾಸ್, ಪಣಿರಾಜ್, ಎಸ್.ಎನ್.ನಾಗರಾಜ್ ಹಾಗೂ ಇತರೆ ಅನೇಕ ಮಂದಿ ಬ್ರಾಹ್ಮಣ ಮಹಾ ಸಭಾದ ಪದಾಧಿಕಾರಿಗಳು ಇದ್ದರು.