ಜನಿವಾರ ಪ್ರಕರಣ: ಸಿಎಂ ಕ್ಷಮೆಯಾಚನೆಗೆ ಡಾ.ನಿಂಗರಾಜ್‌ಗೌಡ ಆಗ್ರಹ

| Published : Apr 23 2025, 12:39 AM IST

ಜನಿವಾರ ಪ್ರಕರಣ: ಸಿಎಂ ಕ್ಷಮೆಯಾಚನೆಗೆ ಡಾ.ನಿಂಗರಾಜ್‌ಗೌಡ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಗಳು ಹೇಗಿರುತ್ತವೋ ಅದೇ ರೀತಿಯಲ್ಲಿ ಅಧಿಕಾರಿಗಳ ವರ್ತನೆಯೂ ಇರುತ್ತದೆ. ಅಲ್ಪಸಂಖ್ಯಾತರನ್ನು ಓಲೈಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಿಂದೂ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನತೆಯ ಕ್ಷಮೆಯಾಚಿಸಬೇಕು. ಇದಕ್ಕೆಲ್ಲಾ ಸರ್ಕಾರವೇ ನೇರ ಹೊಣೆ ಎಂದು ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಆರೋಪಿಸಿದರು.

ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರಗಳು ಹೇಗಿರುತ್ತವೋ ಅದೇ ರೀತಿಯಲ್ಲಿ ಅಧಿಕಾರಿಗಳ ವರ್ತನೆಯೂ ಇರುತ್ತದೆ. ಅಲ್ಪಸಂಖ್ಯಾತರನ್ನು ಓಲೈಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಿಂದೂ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ. ಸರ್ಕಾರವನ್ನು ಮೆಚ್ಚಿಸಿಕೊಳ್ಳಲು ಶಿಕ್ಷಣ ಇಲಾಖೆ ಅಧಿಕಾರಿಗಳು ಕೆಸೆಟ್, ಸಿಇಟಿ, ಪರೀಕ್ಷಾ ಪ್ರಾಧಿಕಾರದಲ್ಲಿಲ್ಲದ ನಿಯಮಗಳನ್ನು ಅನುಸರಿಸುತ್ತಿದ್ದಾರೆ. ಇದು ಅತಿರೇಕದ ಪರಮಾವಧಿ ಎಂದು ಟೀಕಿಸಿದರು.

ಭಾರತೀಯ ಸಂಸ್ಕೃತಿಯನ್ನು ನಾಶ ಮಾಡುವ ಹುನ್ನಾರ ಇದರ ಹಿಂದೆ ಅಡಗಿದೆ. ವಿದ್ಯಾರ್ಥಿಗಳ ಭಾವನೆಗೆ ಧಕ್ಕೆ ಉಂಟುಮಾಡಿ ಅವರ ಮನಸ್ಸನ್ನು ಘಾಸಿಗೊಳಿಸುವುದೇ ಇದರ ಹಿಂದಿನ ಉದ್ದೇಶವಾಗಿದೆ. ಬ್ರಾಹ್ಮಣರು ಮಾತ್ರವಲ್ಲದೆ ವಿಶ್ವಕರ್ಂರು ಹಾಗೂ ಇತರೆ ಸಮುದಾಯದವರೂ ಜನಿವಾರ ಹಾಕುತ್ತಾರೆ. ಪರೀಕ್ಷೆ ಬರೆಯುವ ಮನಸ್ಸಿನಿಂದ ಬಂದ ವಿದ್ಯಾರ್ಥಿಗಳಿಗೆ ಸಲ್ಲದ ಕಾರಣವನ್ನು ಮುಂದಿಟ್ಟು ಜನಿವಾರ ತೆಗೆಸಿರುವುದು ಅಧಿಕಾರಿಗಳ ವಿಕೃತ ಧೋರಣೆಯಾಗಿದೆ ಎಂದು ದೂಷಿಸಿದರು.

ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳ ಮನಸ್ಸನ್ನು ಘಾಸಿಗೊಳಿಸಿ ಅವರ ಜೀವನ ಹಾಳಾಗುವುದಕ್ಕೆ ಕಾರಣರಾಗಿರುವ ಅಧಿಕಾರಿಗಳನ್ನು ಕೆಲಸದಿಂದ ವಜಾಗೊಳಿಸಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ರಾಜ್ಯದ ಜನರ ಕ್ಷಮೆಯಾಚಿಸುವಂತೆ ಒತ್ತಾಯಿಸಿದರು.