ಸಾರಾಂಶ
ಪುತ್ತಿಗೆ ಪರ್ಯಾಯ ಮಹೋತ್ಸವಕ್ಕೆ ಆಗಮಿಸಿದ್ದ ಜಪಾನ್ ನಿಯೋಗವು ಶುಕ್ರವಾರ, ಪುತ್ತಿಗೆ ಶ್ರೀಗಳು ಕಲಿತ ಕೆಮುಂಡೇಲು ಶಾಲೆಗೆ ಭೇಟಿ ನೀಡಿ, ಮಕ್ಕಳೊಂದಿಗೆ ಬೆರೆತು ಸಂಭ್ರಮದಿಂದ ಕಾಲಕಳೆದರು.
ಕನ್ನಡಪ್ರಭ ವಾರ್ತೆ ಕಾಪು
ಶ್ರೀ ಪುತ್ತಿಗೆ ಮಠದ ವಿಶ್ವ ಗೀತಾ ಪರ್ಯಾಯಕ್ಕೆ ವಿಶೇಷ ಅತಿಥಿಗಳಾಗಿ ಆಗಮಿಸಿದ, ಜಪಾನ್ ದೇಶದ ರೆವ್ ಕೋಶೋ ನಿವಾನೋ ಮತ್ತು ಅವರ ೭ ಸದಸ್ಯರ ನಿಯೋಗ ಶುಕ್ರವಾರ, ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ್ಮ ಪೂರ್ವಾಶ್ರಮದಲ್ಲಿ ಶಿಕ್ಷಣ ಪಡೆದ ಉಡುಪಿ ಜಿಲ್ಲೆಯ ಎಲ್ಲೂರು ಸಮೀಪದ ಕೆಮುಂಡೇಲು ಅನುದಾನಿತ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದರು.ಜಪಾನಿನ ರಿಷ್ಯೋ ಕೊಸೈ ಕಾಯ್ ಎಂಬ ಸಂಸ್ಥೆಯ ನಿಯೋಜಿತ ಮಹಾ ಅಧ್ಯಕ್ಷೆ ಆಗಿರುವ ರೆವ್ ಕೋಶೋ ನಿವಾನೋ ಅವರು ಶಾಲೆಯ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ, ಶಿಸ್ತು ಮತ್ತು ಸೇವೆ ಜೀವನದ ಅವಿಭಾಜ್ಯ ಅಂಗವಾಗಿರಬೇಕುಎಂಬ ಕಿವಿಮಾತುಗಳನ್ನು ಹೇಳಿದರು. ಶಾಲೆಯ ಮುಖ್ಯ ಶಿಕ್ಷಕ ಜಗನ್ನಾಥ ಶೆಟ್ಟಿ ಮತ್ತು ಅಧ್ಯಾಪಕ ಚಂದ್ರಹಾಸ ಪ್ರಭು ಅವರು ಶಾಲೆಯ ವೈಶಿಷ್ಟ್ಯತೆಯನ್ನು ವಿವರಿಸಿದರು. ಜಪಾನ್ ದೇಶದ ನಿಯೋಗದ ಭೇಟಿಯ ಉಸ್ತುವಾರಿ ವಹಿಸಿರುವ ಅಮೇರಿಕಾದ ವಿಜ್ಞಾನಿ ಡಾ.ಎ.ಕೇಶವರಾಜ್ ಅವರು ರೆವ್ ಕೋಶೋ ನಿವಾನೋ ಮತ್ತವರ ನಿಯೋಗವನ್ನು ಪರಿಚಯಿಸಿದರು. ಶಾಲೆಯ ಪುಟ್ಟ ವಿದ್ಯಾರ್ಥಿಗಳು ಭಗವದ್ಗೀತೆಯ ಶ್ಲೋಕಗಳನ್ನು ಸುಶ್ರಾವ್ಯವಾಗಿ ಹಾಡಿದಾಗ, ಜಪಾನಿನ ಗಣ್ಯರೆಲ್ಲ, ನೆಲದ ಮೇಲೆ ಕುಳಿತುಕೊಂಡು ಕೈಮುಗಿದು ತಲೆ ಬಾಗಿ ಪ್ರಾರ್ಥಿಸಿದರು. ನಂತರ ಅವರು ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಬಡಿಸಿ ಸಂಭ್ರಮಿಸಿದರು.