ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಬುಧವಾರ ಮತ್ತು ಗುರುವಾರ ನಡೆಯುವ ಪುತ್ತಿಗೆ ಮಠದ ವಿಶ್ವ ಗೀತಾ ಪರ್ಯಾಯದಲ್ಲಿ ಪಾಲ್ಗೊಳ್ಳಲು ಶ್ರೀಪಾದರಿಂದ ವಿಶೇಷ ಆಹ್ವಾನಿತ ಅತಿಥಿಯಾಗಿ ಜಪಾನ್‌ನಿಂದ ರೇವ್ ಕೋಶೋ ನಿವಾನೋ ಮತ್ತು ಆರು ಮಂದಿಯ ನಿಯೋಗವು ಉಡುಪಿಗೆ ಆಗಮಿಸಿದೆ.ಈ ನಿಯೋಗವನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಪರ್ಯಾಯದ ಸ್ವಾಗತ ಸಮಿತಿಯ ಕೋಶಾಧಿಕಾರಿ ರಂಜನ್ ಕಲ್ಕೂರ ಮತ್ತು ಲಕ್ಷ್ಮೀ ರಂಜನ್, ಶ್ರೀ ಪುತ್ತಿಗೆ ಶ್ರೀಗಳ ಅಂತಾರಾಷ್ಟ್ರೀಯ ಕಾರ್ಯ ಚಟುವಟಿಕೆಗಳ ಸಂಯೋಜಕ ಡಾ. ಎ. ಕೇಶವರಾಜ್ ಮತ್ತು ಪರ್ಯಾಯ ಮಹೋತ್ಸವದ ಕಾರ್ಯಕರ್ತ ಎ. ಮುರಳೀಧರ್ ಅವರು ಅತಿಥಿಗಳಿಗೆ ಮಲ್ಲಿಗೆ ಹಾರಾರ್ಪಣೆಯ ಮೂಲಕ ಹೃತ್ಪೂರ್ವಕವಾಗಿ ಸ್ವಾಗತಿಸಿದರು.ಪರ್ಯಾಯ ಮಹೋತ್ಸವದ ಪೂರ್ವಭಾವಿಯಾಗಿ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಮಲ್ಪೆ ಶಾಖೆಗೆ ಮಂಗಳವಾರ ಭಾವಿ ಪರ್ಯಾಯ ಪೀಠಾಧೀಶ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಭೇಟಿ ನೀಡಿದರು.ಶ್ರೀಗಳನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರೂ, ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಯಶ್ಪಾಲ್ ಸುವರ್ಣ ಆದರಪೂರ್ವಕ ಸ್ವಾಗತಿಸಿ ಗೌರವಿಸಿ ಆಶೀರ್ವಾದ ಪಡೆದರು.ಈ ಸಂದರ್ಭ ಗಣ್ಯರಾದ ಆನಂದ ಸಿ. ಕುಂದರ್, ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ ಹಾಗೂ ಮೀನುಗಾರ ಮುಖಂಡರು, ಬ್ಯಾಂಕಿನ ನಿರ್ದೇಶಕರು, ಸಿಬ್ಬಂದಿ ಉಪಸ್ಥಿತರಿದ್ದರು.
ಪುತ್ತಿಗೆ ಮಠದ ಪರ್ಯಾಯೋತ್ಸವದಲ್ಲಿ ರಾಜ್ಯ ಸರ್ಕಾರದ ಪ್ರತಿನಿಧಿಗಳಾಗಿ ಗೃಹ ಸಚಿವ ಡಾ. ಪರಮೇಶ್ವರ್ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕಾರ್ ಭಾಗವಹಿಸಲಿದ್ದಾರೆ.ನಾಳೆ (ಗುರುವಾರ) ಮುಂಜಾನೆ 6 ಗಂಟೆಗೆ ಕೃಷ್ಣಮಠದ ರಾಜಾಂಗಣದಲ್ಲಿ ನಡೆಯುವ ಪುತ್ತಿಗೆ ಪರ್ಯಾಯ ಸುಪ್ರಭಾತ ದರ್ಬಾರ್ ನಲ್ಲಿ ಇಬ್ಬರು ಸಚಿವರು ಉಪಸ್ಥಿತರಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.