ಸಾರಾಂಶ
ಕನ್ನಡಪ್ರಭ ವಾರ್ತೆ ಕೊಪ್ಪಳರಾಷ್ಟ್ರಮಟ್ಟದ ರೊಬೋಟಿಕ್ಸ್ ಫಾರ್ ಗುಡ್ ಯೂಥ್ ಚಾಲೆಂಚ್ ಲೆಂಜ್ ಇಂಡಿಯಾ - ೨೦೨೪ರಲ್ಲಿ ಭಾಗವಹಿಸುವ ಮೂಲಕ ಕೊಪ್ಪಳ ತಾಲೂಕಿನ ಕಿಡದಾಳ ಗ್ರಾಮದ ಶ್ರೀ ಶಾರದಾ ಇಂಟರ್ ನ್ಯಾಷನಲ್ ಸ್ಕೂಲ್‌ನ ಜಸ್ಮಿತಾ ವರ್ಮಾ ಅಪ್ರತಿಮ ಸಾಧನೆ ಮಾಡಿದ್ದಾರೆ.
ದೆಹಲಿಯಲ್ಲಿ ಇಂಟರ್ ನ್ಯಾಷನಲ್ ಅರ್ಗನೈಜೇಷನ್ ಯುನೈಟೆಡ್ ನೇಷನ್ ಆ್ಯಂಡ್ ಎಐ ಸಂಯೋಜಕತ್ವದಲ್ಲಿ ನಡೆದ ರಾಷ್ಟ್ರಮಟ್ಟದ ‘ರೊಬೋಟಿಕ್ಸ್ ಫಾರ್ ಗುಡ್’ ಯೂಥ್ ಚಾಲೆಂಚ್ ಲೆಂಜ್ ಇಂಡಿಯಾ - ೨೦೨೪ ಪ್ರತಿನಿಧಿಸಿ ಸಾಧನೆ ಮಾಡಿದ್ದಾಳೆ.ದೇಶಾದ್ಯಂತ ಮುನ್ನೂರಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದವು. ಇದರಲ್ಲಿ ತೃತೀಯ ಸ್ಥಾನ ಪಡೆದಿದ್ದಾಳೆ. ಕಟ್ಟಡ ನಿರ್ಮಾಣದ ಮಾನವರ ರಕ್ಷಣೆಯ ವಿಷಯ ಕುರಿತು ರೊಬೋಟಿಕ್ಸ್ ಸಿದ್ಧ ಮಾಡಿ, ಸಾದರಪಡಿಸಿದ್ದಾಳೆ. ವಿದ್ಯಾರ್ಥಿಯ ಸಾಧನೆ ಮೆಚ್ಚುಗೆಗೆ ಪಾತ್ರವಾಗಿದೆ.ಪ್ರಸ್ತುತ ವ್ಯವಸ್ಥೆಯಲ್ಲಿ ಅಗತ್ಯವಿರುವ ಈ ಸಂಶೋಧನೆಗೆ ಇನ್ನಷ್ಟು ಪರಿಪೂರ್ಣತೆ ಸಿಕ್ಕರೆ ಖಂಡಿತವಾಗಿಯೂ ಇದು ಬಹುಅಗತ್ಯತೆಯನ್ನು ಪೂರೈಕೆ ಮಾಡಲಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.ಕರಾಟೆ ವೀರ ಈ ಅಖಿಲೇಶ:
ಹತ್ತನೇ ವಯಸ್ಸಿನಲ್ಲಿಯೇ ಕರಾಟೆಯಲ್ಲಿ ಕೊಪ್ಪಳದ ಬಾಲಕನೋರ್ವ ಅತ್ಯುತ್ತಮ ಸಾಧನೆ ಮಾಡಿದ್ದು, ಅಂತಾರಾಷ್ಟ್ರೀಯ ಕರಾಟೆ ಪ್ರದರ್ಶನದಲ್ಲಿ 3ನೇ ಸ್ಥಾನ ಪಡೆದು, ಮೆಚ್ಚುಗೆಗೆ ಪಾತ್ರವಾಗಿದ್ದಾನೆ.ಕೊಪ್ಪಳ ನಗರದ ಎಸ್‌ಎಫ್‌ಎಸ್ ಶಾಲೆಯಲ್ಲಿ 4ನೇ ತರಗತಿ ಓದುತ್ತಿರುವ ಅಖಿಲೇಶ ಯಾದವ್ ಹುಬ್ಬಳ್ಳಿಯಲ್ಲಿ ನಡೆದ ಅಂತಾರಾಷ್ಟ್ರೀಯ ಕರಾಟೆ ಪ್ರದರ್ಶನದಲ್ಲಿ ಪ್ರದರ್ಶನ ನೀಡಿ, ಮೂರನೇ ಸ್ಥಾನ ಪಡೆದಿದ್ದಾನೆ.ಅಖಿಲೇಶ ಕೇವಲ ಕರಾಟೆಯಲ್ಲಿ ಅಲ್ಲ, ಡ್ಯಾನ್ಸ್, ಸ್ಕೇಟಿಂಗ್, ಯೋಗ ಹಾಗೂ ಮ್ಯಾಜಿಕ್‌ನಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾನೆ. ಈ ಚಿಕ್ಕ ವಯಸ್ಸಿನಲ್ಲಿಯೇ ಬಹುಮುಖ ಪ್ರತಿಭೆಯಾಗಿದ್ದು, ಓದಿನಲ್ಲಿಯೂ ಮುಂದಿದ್ದಾನೆ.
ಕರಾಟೆ ಎಂದರೆ ಈತನಿಗೆ ಅಚ್ಚುಮೆಚ್ಚು. ಇದಕ್ಕಾಗಿ ಭಾರಿ ಕಸರತ್ತು ಮಾಡುತ್ತಾನೆ. ದಿನ ನಿತ್ಯವೂ ಕರಾಟೆಯ ತರಬೇತಿಯನ್ನು ಕರಾಟೆ ಗುರುಗಳಾದ ರಾಘವೇಂದ್ರ ಅವರ ಬಳಿ ಪಡೆಯುತ್ತಾನೆ. ಇನ್ನು ಕರಾಟೆಯಲ್ಲಿ ಸಾಧನೆ ಮಾಡುವುದಕ್ಕಾಗಿ ನಿರಂತರ ಶ್ರಮಿಸುತ್ತಿದ್ದಾನೆ.