ಎಲ್ಲ ಲಕ್ಷಾಂತರ ಸಂಖ್ಯೆಯ ಭಕ್ತಾದಿಗಳಿಗೂ ಸೌದೆ ಒಲೆಯಲ್ಲಿ ಆರೋಗ್ಯಕರ ಅಡುಗೆ

ಕನ್ನಡಪ್ರಭ ವಾರ್ತೆ ಸುತ್ತೂರುನಂಜನಗೂಡು ತಾಲೂಕಿನ ಸುತ್ತೂರಿನಲ್ಲಿ ನಡೆಯುತ್ತಿರುವ ಜಗದ್ಗುರು ಶ್ರೀ ಶಿವರಾತ್ರೀಶ್ವರ ಸ್ವಾಮೀಜಿಗಳ ಜಾತಾ ಮಹೋತ್ಸವದಲ್ಲಿ ಆರೋಗ್ಯಕರ ಮಹಾದಾಸೋಹ ಆರಂಭಗೊಂಡಿದ್ದು, ದೇಶ ವಿದೇಶಗಳಿಂದಲೂ ಭಕ್ತರನ್ನು ಸೆಳೆಯುತ್ತಿದೆ. ಬುಧವಾರದಿಂದ ಆರಂಭಗೊಂಡ ಜಾತ್ರೆಗೆ ಆಗಮಿಸುವ ಎಲ್ಲ ಲಕ್ಷಾಂತರ ಸಂಖ್ಯೆಯ ಭಕ್ತಾದಿಗಳಿಗೂ ಸೌದೆ ಒಲೆಯಲ್ಲಿ ಆರೋಗ್ಯಕರ ಅಡುಗೆ ಮಾಡಿ ಬಡಿಸುವ ಕಾಯಕವನ್ನು ತಲೆತಲಾಂತರದಿಂದಲೂ ನಡೆಸಿಕೊಂಡು ಬಂದಿದ್ದು, ಮಠದ ಭಕ್ತರು ಹಾಗೂ ಸುತ್ತ ಮುತ್ತಲ ಗ್ರಾಮಸ್ಥರೆಲ್ಲರೂ ಸೇರಿ ಅಡುಗೆ ತಯಾರಿಸುವ ಕಾಯಕವನ್ನು ನಡೆಸಿಕೊಂಡು ಬಂದಿದ್ದು, ಈ ಸೌದೆ ಒಲೆಯಲ್ಲಿ ಅಡುಗೆ ಮಾಡಿ ಬಡಿಸುವ ಆಹಾರ ಪದಾರ್ಥಗಳ ರುಚಿಗೆ ಭಕ್ತರೆಲ್ಲರೂ ಮಾರು ಹೋಗಿದ್ದು, ತಂಡೋಪತಂಡವಾಗಿ ಆಗಮಿಸಿ ಪ್ರಸಾದವನ್ನು ಸ್ವೀಕರಿಸಿ ಸಂತುಷ್ಟರಾಗಿದ್ದಾರೆ. ಇದೇ ವೇಳೆ ಈ ಜಾತ್ರಾ ಸಮಿತಿಯ ಸಂಚಾಲಕ ಸುಬ್ಬಪ್ಪ ಮಾತನಾಡಿ, ಜಾತ್ರೆಯಲ್ಲಿ ಸೌದೆ ಒಲೆಯಲ್ಲಿ ಅಡುಗೆ ಮಾಡಿ ಬಡಿಸುವ ವ್ಯವಸ್ಥೆಯನ್ನು ಮಾಡಲಾಗಿದ್ದು, ಇದು ಆರೋಗ್ಯಕರವಾದ ಅಡುಗೆ ಮಾಡುವ ವಿಧಾನವಾಗಿದ್ದು, ಸ್ವಾಮೀಜಿಗಳ ಆದೇಶದಂತೆ ಇಂದಿನಿಂದಲೇ ಅಡುಗೆ ವ್ಯವಸ್ಥೆ ಮಾಡಲಾಗಿದೆ, ಈ ಜಾತ್ರೆಯ ಆರಂಭಕ್ಕೆ ಮೊದಲೆ ಸುತ್ತಮುತ್ತಲ ಗ್ರಾಮಗಳಲ್ಲಿ ಮಠದ ಭಕ್ತರಿಂದ ಕಾಣಿಕೆ, ದವಸ ಧಾನ್ಯಗಳನ್ನು ಪಡೆಯಲಾಗಿದೆ, ಹಾಗೂ ಈಗ ಭತ್ತದ ಕಟಾವು ಆಗಿರುವುದರಿಂದ ಭಕ್ತಾದಿಗಳು ತಾವಾಗಿಯೇ ಆಗಮಿಸಿ ಈ ಜಾತ್ರೆಗೆ ಭತ್ತ, ತರಕಾರಿ ಸೇರಿದಂತೆ ವಿವಿಧ ದವಸ ಧಾನ್ಯಗಳನ್ನು ದೇಣಿಗೆಯಾಗಿ ನೀಡಿ ಜಾತ್ರೆಗೆ ತಮ್ಮ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದಾರೆ,ನಮ್ಮ ರಾಜ್ಯವಲ್ಲದೇ ದೇಶ ವಿದೇಶಗಳಲ್ಲೂ ಶ್ರೀ ಮಠದ ಸಂಸ್ಥೆಯ ಶಾಖೆಗಳು ಇರುವುದರಿಂದ ದೇಶ ವಿದೇಶಗಳಿಂದಲೂ ಈ ಜಾತ್ರೆಗೆ ಭಕ್ತಾದಿಗಳು ಆಗಮಿಸಿ ಪ್ರಸಾದವನ್ನು ಸ್ವೀಕರಿಸುತ್ತಿದ್ದಾರೆ, ಕಳೆದ ವರ್ಷ ನಡೆದ ಜಾತ್ರೆಯಲ್ಲಿ ಸುಮಾರು 20 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಆಗಮಿಸಿದ್ದರು. ಈ ಬಾರಿ ಹೆಚ್ಚು ಪ್ರಚಾರ ನಡೆಸಿರುವುದರಿಂದ 25 ಲಕ್ಷಕ್ಕೂ ಹೆಚ್ಚು ಸಂಖ್ಯೆ ಭಕ್ತಾದಿಗಳು ಆಗಮಿಸುವ ನಿರೀಕ್ಷೆಯಿದ್ದು, ಈ ಬಾರಿ ಎಲ್ಲ ಭಕ್ತರಿಗೂ ಕಜ್ಜಾಯ ಹಾಗೂ ಪಾಯಸ ನೀಡುತ್ತಿರುವುದು ವಿಶೇಷವಾಗಿದೆ ಎಂದು ತಿಳಿಸಿದರು. ಚುಂಚನಹಳ್ಳಿ ಮಠಾಧ್ಯಕ್ಷ ಶ್ರೀ ಚೆನ್ನಬಸವ ಸ್ವಾಮೀಜಿ ಮಾತನಾಡಿ, ಶ್ರೀ ಮಠದ ಜಾತ್ರೆಗೆ ನಾನು ಕಳೆದ 32 ವರ್ಷಗಳಿಂದ ಆಗಮಿಸುತ್ತಿದ್ದೇನೆ, ಅಂದಿನಿಂದಲೂ ಈ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರಿಗೆ ಸೌದೆ ಒಲೆಯಲ್ಲೇ ಅಡುಗೆ ಮಾಡಿ ಬಡಿಸುತ್ತಿದ್ದು, ಇದು ಆರೋಗ್ಯಕರವಾದ ಅಡುಗೆ ವಿಧಾನವಾಗಿದೆ, ಹಾಗೂ ಗ್ಯಾಸ್ ಒಲೆಯಲ್ಲಿ ಮಾಡುವ ಅಡುಗೆಗಿಂತಲೂ ಉತ್ತಮ ರುಚಿ ಹೊಂದಿದ್ದು, ಆರೋಗ್ಯಕ್ಕೆ ತುಂಬಾ ಅನುಕೂಲಕರವಾಗಿದೆ ಎಂದು ತಿಳಿಸಿದರು. -------------