ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ

| Published : Aug 02 2024, 12:45 AM IST

ಸಾರಾಂಶ

ಹಾಸನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಡಾ. ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ವ್ಯಸನ ಮುಕ್ತ ಜಾಗೃತಿ ಜಾಥಕ್ಕೆ ಅಪರ ಜಿಲ್ಲಾಧಿಕಾರಿ ಕೆ,ಟಿ. ಶಾಂತಲಾ ಅವರು ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ನಂತರ ಮೆರವಣಿಗೆಗೆ ಹಸಿರು ಬಾವುಟ ಪ್ರದರ್ಶಿಸುವುದರ ಮೂಲಕ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಸಾರ್ವಜನಿಕ ಮತ್ತು ಸಂಪರ್ಕ ಇಲಾಖೆ, ಜಿಲ್ಲಾ ಆರೋಗ್ಯ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಗುರುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಡಾ. ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ವ್ಯಸನ ಮುಕ್ತ ಜಾಗೃತಿ ಜಾಥಕ್ಕೆ ಅಪರ ಜಿಲ್ಲಾಧಿಕಾರಿ ಕೆ,ಟಿ. ಶಾಂತಲಾ ಅವರು ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ನಂತರ ಮೆರವಣಿಗೆಗೆ ಹಸಿರು ಬಾವುಟ ಪ್ರದರ್ಶಿಸುವುದರ ಮೂಲಕ ಚಾಲನೆ ನೀಡಿದರು.

ನಂತರ ಉದ್ದೇಶಿಸಿ ಶಾಂತಲಾ ಅವರು ಮಾತನಾಡಿ, ಶ್ರೀ ಮಹಾಂತ ಶಿವಯೋಗಿರವರ ಜಯಂತಿಯನ್ನು ನಾವು ಆಚರಿಸುತ್ತಿದ್ದು, ಇವರು ಜಮಖಂಡಿ ತಾಲೂಕು ಇಪ್ಪರ್ಗಿ ಗ್ರಾಮದಲ್ಲಿ ಜನಿಸಿದವರು. ಅವರ ಮಹಂತ ಜೋಳಿಗೆ ಕಾರ್ಯಕ್ರಮಕ್ಕೆ ತುಂಬ ಪ್ರಸಿದ್ಧಿ ಆದವರು. ಈ ಜೋಳಿಗೆಯಲ್ಲಿ ಎಲ್ಲಾರೂ ತಮ್ಮ ದುಶ್ಚಟಗಳನ್ನು ತೊಡೆದು ಹಾಕಿ ಸ್ವಚ್ಛವಾದ ಜೀವನ ನಡೆಸಲಿ ಎಂಬುದು ಸಮಾಜಕ್ಕೆ ಒಂದು ಸಂದೇಶ ಕೊಟ್ಟಿದ್ದರು. ಅವರ ಆದರ್ಶದಂತೆ ನಾವುಗಳೆಲ್ಲರೂ ಅವರು ಕೊಟ್ಟಿರುವ ಸಮಾಜಮುಖಿ ಕೆಲಸಗಳನ್ನು ನಡೆಸಿಕೊಂಡು ಹೋಗಬೇಕು ಎಂದರು. ಅವರು ತಿಳಿಸಿರುವ ಎಲ್ಲಾ ಪಾಠಗಳನ್ನು ಕಲಿತು ಸ್ವಚ್ಛವಾದ ಜೀವನವನ್ನು ನಡೆಸಿಕೊಂಡು ಹೋಗೋಣ ಎಂದು ಕರೆ ನೀಡಿದರು.

ಇದೇ ವೇಳೆ ಬೆಳ್ಳಿ ರಥದಲ್ಲಿ ಡಾ. ಮಹಾಂತ ಶಿವಯೋಗಿಗಳ ಭಾವಚಿತ್ರವನ್ನಿಟ್ಟು ವಿವಿಧ ಶಾಲಾ- ಕಾಲೇಜಿನ ನೂರಾರು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು, ವಿವಿಧ ಕಲಾತಂಡಗಳು ಮೆರುಗು ನೀಡಿತು. ಇದೇ ವೇಳೆ ಮದ್ಯಪಾನದಿಂದ ಆಗುವ ಅಪಾಯದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಮೆರವಣಿಗೆಯಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ, ಜಿಲ್ಲಾ ವಾರ್ತಾಧಿಕಾರಿ ಮೀನಾಕ್ಷಿ, ಪದವಿಪೂರ್ವ ಕಾಲೇಜು ಉಪನಿರ್ದೇಶಕ ಸಿ.ಎಂ. ಮಹಾಲಿಂಗಯ್ಯ, ಟಿ.ಪಿ. ನಾಗರಾಜು, ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಂ. ಶಿವಣ್ಣ, ಅಖಿಲ ಭಾರತ ವೀರಶೈವ ಲಿಂಗಾಯತ ಸಂಘದ ಜಿಲ್ಲಾಧ್ಯಕ್ಷ ನವೀಲೆ ಪರಮೇಶ್, ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್‌, ಕೆ.ಎಸ್.ಆರ್‌.ಟಿ.ಸಿ. ಮಾಜಿ ಉಪಾಧ್ಯಕ್ಷ ಈಶ್ವರ್, ಬಸವ ಕೇಂದ್ರದ ಅಧ್ಯಕ್ಷ ಯು.ಎಸ್. ಬಸವರಾಜು, ಕುಮರಸ್ವಾಮಿ, ಹೇಮೇಶ್, ರುದ್ರಕುಮಾರ್‌, ಮಯೂರಿ ಲೋಕೇಶ್, ಟಿ.ಪಿ. ನಾಗರಾಜು, ಅವಿನಾಶ್, ಅಜಿತ್, ಅಡಗೂರು ಬಸವರಾಜು, ದರ್ಶನ್, ಹೇಮಂತ್, ಧರ್ಮ ಇತರರು ಉಪಸ್ಥಿತರಿದ್ದರು.