ಆದಿಚುಂಚನಗಿರಿಯಲ್ಲಿ ಶ್ರೀಗಳಿಂದ ವಿವಿಧ ಪೂಜೆಗಳೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನ..!

| Published : Mar 27 2024, 01:01 AM IST

ಆದಿಚುಂಚನಗಿರಿಯಲ್ಲಿ ಶ್ರೀಗಳಿಂದ ವಿವಿಧ ಪೂಜೆಗಳೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನ..!
Share this Article
  • FB
  • TW
  • Linkdin
  • Email

ಸಾರಾಂಶ

ಇಷ್ಟು ದಿನಗಳ ಕಾಲ ನಡೆದ ಈ ಕಾರ್ಯ ಒಬ್ಬ ವ್ಯಕ್ತಿ ತನಗೋಸ್ಕರ ಮಾಡಿದ್ದಲ್ಲ ಅಥವಾ ಒಂದು ಮನೆ ಕುಟುಂಬದ ಸದಸ್ಯರಿಗಾಗಿ ಮಾಡಿದ ಕಾರ್ಯವಲ್ಲ. ತನಗಾಗಿ ಕುಟುಂಬಕ್ಕಾಗಿ ಮಾಡಿದ್ದು ಸ್ವಾರ್ಥವಾದುದ್ದಾದರೆ ಇಂತಹ ಸುಕ್ಷೇತ್ರದಲ್ಲಿ ಮಾಡುವ ಯಜ್ಞದ ಕಾರ್ಯಗಳು ಸಮಷ್ಟಿಯ ಪ್ರಜ್ಞೆಗೋಸ್ಕರ.

ಕನ್ನಡಪ್ರಭ ವಾರ್ತೆ ನಾಗಮಂಗಲ

ತಾಲೂಕಿನ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದಲ್ಲಿ ಜಾತ್ರಾ ಮಹೋತ್ಸವದ ಕೊನೆ ದಿನ ಮಂಗಳವಾರ ಧರ್ಮ ಧ್ವಜಾವರೋಹಣ, ಕ್ಷೇತ್ರದ ಬಿಂದು ಸರೋವರದಲ್ಲಿ ಗಂಗಾಪೂಜೆ, ಅವಭೃತ ಸ್ನಾನ, ಮಹಾಭಿಷೇಕ ಹಾಗೂ ಸಭಾ ಕಾರ್ಯಕ್ರಮದ ಮೂಲಕ ಕಳೆದ 9 ದಿನಗಳಿಂದ ನಡೆದ ಜಾತ್ರಾ ಮಹೋತ್ಸವ ಸಂಪನ್ನವಾಯಿತು.

ಶ್ರೀಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯದಲ್ಲಿ ನಡೆದ ಬಿಂದು ಸರೋವರದಲ್ಲಿ ಗಂಗಾಪೂಜೆ, ಅವಭೃತ ಸ್ನಾನ ಮತ್ತು ಮಹಾ ಭಿಷೇಕ ಕಾರ್ಯಕ್ರಮದಲ್ಲಿ ಕ್ಷೇತ್ರಾಧಿದೇವತೆಗಳಿಗೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು.

ಧಾರ್ಮಿಕ ವಿಧಿ ವಿಧಾನಗಳ ಬಳಿಕ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀಗಳು, 9 ದಿನಗಳ ಕಾಲ ಸಾಂಗವಾಗಿ ನಡೆದ ಜಾತ್ರೆ, ದೈವ ಕೈಂಕರ್ಯಾದಿ ಉಪಾಸನೆಗಳನ್ನು ನಿರ್ವಿಘ್ನವಾಗಿ ಸಾಕಾರಗೊಳಿಸಿದ ದೇವಾನುದೇವತೆಗಳಿಗೆ ಕೃತಜ್ಞತೆ ಹಾಗೂ ದೋಷ ಪರಿಹಾರಾರ್ಥವಾಗಿ ಭಗವಂತನನ್ನು ಆರಾಧಿಸಿ ಅವಭೃತ ಸ್ನಾನ ಮಾಡಿ ಭಕ್ತಿಯಿಂದ ನಿವೇದಿಸಿಕೊಳ್ಳಲಾಗಿದೆ ಎಂದರು.

ಇಷ್ಟು ದಿನಗಳ ಕಾಲ ನಡೆದ ಈ ಕಾರ್ಯ ಒಬ್ಬ ವ್ಯಕ್ತಿ ತನಗೋಸ್ಕರ ಮಾಡಿದ್ದಲ್ಲ ಅಥವಾ ಒಂದು ಮನೆ ಕುಟುಂಬದ ಸದಸ್ಯರಿಗಾಗಿ ಮಾಡಿದ ಕಾರ್ಯವಲ್ಲ. ತನಗಾಗಿ ಕುಟುಂಬಕ್ಕಾಗಿ ಮಾಡಿದ್ದು ಸ್ವಾರ್ಥವಾದುದ್ದಾದರೆ ಇಂತಹ ಸುಕ್ಷೇತ್ರದಲ್ಲಿ ಮಾಡುವ ಯಜ್ಞದ ಕಾರ್ಯಗಳು ಸಮಷ್ಟಿಯ ಪ್ರಜ್ಞೆಗೋಸ್ಕರ ಎಂದರು.

ಈ ಕಾರ್ಯಗಳು ಒಳಿತಿನ ಪುಣ್ಯದ ಫಲ ಕೊಡುತ್ತವೆ ಹೊರತು ಇನ್ನಾವುದರಲ್ಲೂ ಸಿಗಲು ಸಾಧ್ಯವಿಲ್ಲ. ಇಂತಹ ಕಾರ್ಯಕ್ಕಾಗಿ ಸಾವಿರಾರು ಮಂದಿ ಕೈ ಜೋಡಿಸಿದರೆ, ಪ್ರಾರ್ಥಿಸಿದ ಕೈಗಳು ಮನಸ್ಸುಗಳು ಲಕ್ಷಾಂತರ ಮಂದಿ. ಒಂದೆಡೆ ಯಜ್ಞಕಾರ್ಯದ ಸಮಾಪ್ತಿ ಮತ್ತೊಂದೆಡೆ ಈ ಕಾರ್ಯಕ್ಕಾಗಿ ಕೈ ಜೊಡಿಸಿದ ಮನಸ್ಸುಗಳು ಹಾಗೂ ವ್ಯಕ್ತಿಗಳಿಗೆ ಧನ್ಯವಾದ ಹೇಳಲು ಈ ಕಾರ್ಯಕ್ರಮ ಎಂದರು.

ಮುಕ್ತಿಯ ಪರಮ ಉದ್ದೇಶವು ನಿಸ್ವಾರ್ಥ ಸೇವಾ ಮನೋಭಾವ, ಮಲದೋಷ ಹಾಗೂ ಆವರಣ ದೋಷ ನಿವಾರಣೆ ಎಂಬ ಮೂರು ಹಂತಗಳಲ್ಲಿ ಸಾರ್ಥಕಗೊಳ್ಳುತ್ತದೆ. ಮಾನವ ಜೀವಿ ಈ ಪಾರಮಾರ್ಥ ಮಾರ್ಗದಲ್ಲಿ ಸಾಗಿ ಮುಕ್ತಿಯ ಪರಂಧಾಮವನ್ನು ತಲುಪಬೇಕು. ಅಜ್ಞಾನ ಹೋಗದ ಹೊರತು ಸುಜ್ಞಾನವಿಲ್ಲ ಎಂಬುದನ್ನು ಅರಿತು ಸತ್ಸಂಗದಲ್ಲಿ ಭಾಗಿಯಾಗಿ ಪೂರಕ ಸಾಧನವಾದ ಭಕ್ತಿ ಮಾರ್ಗದಲ್ಲಿ ಸಾಗಿ ಪುನೀತರಾಗಿ ಎಂದು ಆಶೀರ್ವಚನ ನೀಡಿದರು.

ಜಾತ್ರಾ ಮಹೋತ್ಸವದಲ್ಲಿ ಕ್ಷೇತ್ರದ ವಿವಿಧೆಡೆ ಅನ್ನದಾಸೋಹ ಸೇವೆ ನಡೆಸಿಕೊಟ್ಟ ಭದ್ರಾವತಿಯ ಶ್ರೀ ಕಾಲಭೈರವ ದಾಸೋಹ ಸಮಿತಿ, ಅರಿಶಿನಕುಂಟೆಯ ರಾಮಕೃಷ್ಣಪ್ಪ ದಂಪತಿ, ತುರುವೇಕೆರೆ ಒಕ್ಕಲಿಗರ ಸಂಘದ ದಾಸೋಹ ಸಮಿತಿ, ಬೆಂಗಳೂರಿನ ಹಿರಿಯ ವಿದ್ಯಾರ್ಥಿಗಳ ದಾಸೋಹ ಟ್ರಸ್ಟ್‌ನ ಪದಾಧಿಕಾರಿಗಳನ್ನು ಗೌರವಿಸಲಾಯಿತು.

ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ, ಚೈತನ್ಯನಾಥಸ್ವಾಮೀಜಿ, ಮಾಜಿ ಸಚಿವ ಸಿ.ಎಸ್. ಪುಟ್ಟರಾಜು, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ. ಎ.ಟಿ. ಶಿವರಾಮು, ಚಿಕ್ಕಮಗಳೂರು ಚಂದ್ರೇಗೌಡ ಸೇರಿದಂತೆ ಇತರರಿದ್ದರು.