ಸಾರಾಂಶ
ಶರಣರ ದಾಸೋಹ ತತ್ವವನ್ನು ಮೈಗೂಡಿಸಿಕೊಂಡು ಪ್ರತಿ ವರ್ಷ ಮಕರ ಸಂಕ್ರಾಂತಿ ದಿನದಂದು ನಡೆಯುವ ಇಂಡಿ ತಾಲೂಕಿನ ಮಿರಗಿ ಗ್ರಾಮದ ಆರಾಧ್ಯ ದೇವರಾದ ಶ್ರೀ ಸಂಗಮೇಶ್ವರ ದೇವರ ಜಾತ್ರಾ ಮಹೋತ್ಸವ ಸಂಭ್ರಮದಿಂದ ನಡೆಯಿತು.
ಕನ್ನಡಪ್ರಭ ವಾರ್ತೆ ಇಂಡಿ
ಶರಣರ ದಾಸೋಹ ತತ್ವವನ್ನು ಮೈಗೂಡಿಸಿಕೊಂಡು ಪ್ರತಿ ವರ್ಷ ಮಕರ ಸಂಕ್ರಾಂತಿ ದಿನದಂದು ನಡೆಯುವ ಇಂಡಿ ತಾಲೂಕಿನ ಮಿರಗಿ ಗ್ರಾಮದ ಆರಾಧ್ಯ ದೇವರಾದ ಶ್ರೀ ಸಂಗಮೇಶ್ವರ ದೇವರ ಜಾತ್ರಾ ಮಹೋತ್ಸವ ಸಂಭ್ರಮದಿಂದ ನಡೆಯಿತು.ಜಾತ್ರೆಗೆ ಬರುವ ಸುಮಾರು 5 ಸಾವಿರಕ್ಕಿಂತ ಹೆಚ್ಚು ಭಕ್ತರಿಗೆ ದಾಸೋಹ ಸೇವೆ ಮಾಡುವ ಕಾರ್ಯ ಶ್ರೀ ಸಂಗಮೇಶ್ವರ ಜಾತ್ರಾ ದಾಸೋಹ ಸಮೀತಿಯ ಗಂಗಾಧರ ಬಡಿಗೇರ ನೇತ್ರತ್ವದಲ್ಲಿ ನಿರಂತರವಾಗಿ ನಡೆದಿರುವ ಕಾರ್ಯ ಶ್ಲಾಘನೀಯವಾದದ್ದು.
2024 ಜ.15 ರಂದು ನಡೆದ ಜಾತ್ರಾ ಮಹೋತ್ಸವದಂದು ಹಮ್ಮಿಕೊಂಡ ದಾಸೋಹ ಸೇವೆ 10 ನೇ ವರ್ಷಕ್ಕೆ ಕಾಲಿಟ್ಟಿದ್ದು, ಈ ಬಾರಿ ದಾಸೋಹ ಸೇವೆಯಲ್ಲಿ ಚಿತ್ರಾನ್ನ, ಶಿರಾ, ಸಾಂಬಾರು ಪ್ರಸಾದ ಮಾಡುವ ಮೂಲಕ ಭಕ್ತಿ ಸೇವೆ ಪ್ರದರ್ಶಿಸಿದ್ದಾರೆ.ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ನಾದ ಕೆಡಿ, ನಾದ ಬಿಕೆ, ಸಾತಲಗಾಂವ, ಹಿರಿಯಾಳ ಗ್ರಾಮಗಳಿಂದ ಸುಮಾರು ಐದಾರು ಪಲ್ಲಕ್ಕಿಗಳು ಆಗಮಿಸುವುದರಿಂದ ಪಲ್ಲಕ್ಕಿ ಜೊತೆಯಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸುವರು. ಅಲ್ಲದೆ, ಭೀಮಾನದಿ ದಂಡೆಯ ಮೇಲಿರುವ ಕೂಡಲ ಶ್ರೀ ಸಂಗಮೇಶ್ವರ ದೇವರ ದರ್ಶನಕ್ಕೆ ಕಲಬುರಗಿ, ವಿಜಯಪುರ, ಬಾಗಲಕೋಟ, ಸೋಲಾಪುರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಾವಿರಾರು ಜನ ಭಕ್ತರು ಆಗಮಿಸುತ್ತಾರೆ.
ದರ್ಶನಕ್ಕೆ ಬರುವ ಭಕ್ತರಿಗೆ ಅನ್ನಪ್ರಸಾದ ಮಾಡಬೇಕು. ಜಾತ್ರೆಗೆ ಬಂದಿರುವ ಭಕ್ತರು ಉಪವಾಸ ಹೋಗಬಾರದು ಎಂಬ ಸದುದ್ದೇಶ ಸೇವಾ ಭಾವನೆ ಇಟ್ಟುಕೊಂಡು ಸುಮಾರು 12 ಜನ ಸಮಿತಿಯೊಂದಿಗೆ ಭಕ್ತಿ ಸೇವೆಗೆ ಮುಂದಾಗಿದ್ದು, ಇವರ ಭಕ್ತಿ ಸೇವೆಗೆ ಸಾರ್ವಜನಿಕರು ಪ್ರಶಂಸಿದ್ದಾರೆ. ಮೊದಲು ಬಾರಿಗೆ ಸಮಿತಿ ನೇತ್ರತ್ವ ವಹಿಸಿಕೊಂಡ ಗ್ರಾಮದ ಗಂಗಾಧರ ಬಡಿಗೇರ ಸ್ವಂತ ಹಣ ಹಾಗೂ ಗೆಲಕೆಯರ ಬಳಗದಿಂದ ಹಣ ಸಂಗ್ರಹಿಸಿ ದಾಸೋಹ ಸೇವೆ ಆರಂಭಿಸಿದ್ದು, 10 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ.