ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಇತಿಹಾಸ ಪ್ರಸಿದ್ಧ ಶಕ್ತಿದೇವತೆ ಶ್ರೀ ಸೋಮನಳಮ್ಮ ದೇವಿಯ 10 ದಿನಗಳ ಜಾತ್ರಾ ಮಹೋತ್ಸವದ ಅಂಗವಾಗಿ ದೇಗುಲದ ಹಕ್ಕುಹೊಂದಿರುವ ಎಲ್ಲಾ ಗ್ರಾಮಗಳ ಮುಖಂಡರ ಸಹಕಾರದಲ್ಲಿ ವಿದ್ಯುಕ್ತವಾಗಿ ಚಾಲನೆ ನೀಡಿದ್ದು, ಮಾ.3 ರಂದು ಅಮ್ಮನವರ ಬ್ರಹ್ಮರಥೋತ್ಸವಕ್ಕೆ ನಡೆಯಲಿದೆ.ಶನಿವಾರ ವಡ್ಡರಹಳ್ಳಿ ಗ್ರಾಮಸ್ಥರಿಂದ ಪಂಚಾಮೃತಾಭಿಷೇಕ ನಡೆಯಿತು. ಫೆ.25ರಿಂದ 29ರ ವರೆಗೆ ಹೊಣಕೆರೆ, ಗಂಗನಹಳ್ಳಿ, ಅಲ್ಪಹಳ್ಳಿ, ಸೋಮನಹಳ್ಳಿ ಗ್ರಾಮಸ್ಥರಿಂದ ವಿವಿಧ ಬಗೆಯ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತವೆ.
ಮಾ.1ರಂದು ಅಮ್ಮನವರ ಮೂಲ ಸನ್ನಿಧಿ ಕಟ್ಟೇಮನೆ ಎಂದೇ ಖ್ಯಾತಿಯಾಗಿರುವ ಚಿಣ್ಯ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವಿಯನ್ನು ಬಿಜಯಂಗೈಸಿದ ಬಳಿಕ ಹೊಣಕೆರೆ ಗ್ರಾಮಸ್ಥರಿಂದ ಬಿಸಿಲು ಕೊಂಡೋತ್ಸವ, ಓಕುಳಿ ಹಬ್ಬ ಸೇರಿದಂತೆ ಹಲವು ಬಗೆಯ ಕಾರ್ಯಕ್ರಮ ಜರುಗಲಿದೆ. ಅಂದು ಸಂಜೆ ಮಡೆ ಉತ್ಸವ ನಡೆಯಲಿದೆ.ಮಾ.2ರಂದು ಚೀಣ್ಯಾ ಗ್ರಾಮದ ಮೂಲ ದೇವಸ್ಥಾನದಲ್ಲಿ ಅಮ್ಮನವರ ಅಶ್ವಾರೋಹಣ ಉತ್ಸವ ಮೂರ್ತಿಗೆ ವಿಶೇಷ ಪೂಜಾ ಕಾರ್ಯಗಳು ನೆರವೇರಿದ ನಂತರ ಜಾನಪದ ಕಲಾ ತಂಡಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯುತ್ತದೆ. ಬಳಿಕ ದೇವಾಲಯದ ಹಕ್ಕು ಹೊಂದಿರುವ ಸುತ್ತಮುತ್ತಲ ಗ್ರಾಮಗಳಿಂದ ತಂಬಿಟ್ಟಿನ ಆರತಿ, ಮಡೆ ಅನ್ನದ ನೈವೇದ್ಯ ನಡೆಸಲಾಗುತ್ತದೆ. ಮೆರವಣಿಗೆಯು ದೇಗುಲ ಪ್ರವೇಶಿಸಿದ ಬಳಿಕ 12 ಹಳ್ಳಿ ಗ್ರಾಮಸ್ಥರಿಂದ ಬಿಸಿಲು ಕೊಂಡೋತ್ಸವ ನಡೆಯುತ್ತದೆ. ನಂತರ ಕ್ಷೇತ್ರದ ಓಕಳಿ ಮಂಟಪದಲ್ಲಿ ಉತ್ಸವಮೂರ್ತಿ ಮುಂದೆ ನಡೆಯುವ ಅರಿಶಿಣ, ಕುಂಕುಮ ಮತ್ತು ಸುಣ್ಣ ಬೆರೆಸಿದ ಬಣ್ಣದ ನೀರಿನ ಓಕುಳಿಯಾಟ ಮನಮೋಹಕವಾಗಿರುತ್ತದೆ.
ಮಾ.3 ರಂದು ಸೋಮನಹಳ್ಳಿ ಅಮ್ಮನವರ ಮೂರ್ತಿಯನ್ನು ಸರ್ವಾಲಂಕೃತ ರಥದ ಪೀಠದಲ್ಲಿರಿಸಿ ಪೂಜೆ ನೆರವೇರಿಸಿದ ಬಳಿಕ ಧಾರ್ಮಿಕ ದತ್ತಿ ಇಲಾಖೆಯ ಪರವಾಗಿ ತಹಸೀಲ್ದಾರ್ ನಯೀಂಉನ್ನೀಸಾ ಅವರು ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡುವರು. ರಥೋತ್ಸವದ ನಂತರ ನಡೆಯುವ ವಸಂತೋತ್ಸವದೊಂದಿಗೆ ಹತ್ತುದಿನಗಳ ಜಾತ್ರಾಮಹೋತ್ಸವಕ್ಕೆ ತೆರೆ ಬೀಳಲಿದೆ.ಕ್ಷೇತ್ರದ ಶ್ರೀ ಆಂಜನೇಯಸ್ವಾಮಿ, ಶ್ರೀ ಕೋಟೆಮಾರಮ್ಮ ಮತ್ತು ಚಿಕ್ಕಮ್ಮದೇವಿಯ ದೇವಾಲಯಗಳಲ್ಲಿಯೂ ಪ್ರತಿನಿತ್ಯ ಪೂಜಾ ಕೈಂಕರ್ಯಗಳು ನಡೆಯಲಿದೆ. ಕಟ್ಟೆಮನೆ ಚಿಣ್ಯ, ಹೊಣಕೆರೆ, ಗಂಗನಹಳ್ಳಿ, ವಡ್ಡರಹಳ್ಳಿ, ಅಲ್ಪಹಳ್ಳಿ, ಜೋಡಿಹೊಸೂರು, ಸೋಮನಹಳ್ಳಿ ಸೇರಿದಂತೆ ಸುತ್ತಮುತ್ತಲ 18 ಗ್ರಾಮಗಳಿಂದ ಜಾತ್ರಾಮಹೋತ್ಸವ ನಡೆಯುತ್ತದೆ.
ಜಿಲ್ಲೆ ಸೇರಿದಂತೆ ಬೆಂಗಳೂರು, ಮೈಸೂರು, ಹಾಸನ, ಭದ್ರಾವತಿ, ಕೋಲಾರ ಹಾಗೂ ತಮಿಳುನಾಡಿನ ಊಟಿ ಭಾಗಗಳಿಂದ ಸಾವಿರಾರು ಭಕ್ತಾದಿಗಳು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ತಮ್ಮ ಭಕ್ತಿಭಾವ ಸಮರ್ಪಿಸುವರು.