ಸಾರಾಂಶ
ಲಕ್ಷ್ಮೇಶ್ವರ: ಸಾಮಾಜಿಕ, ಸಾಂಸ್ಕೃತಿ ಮತ್ತು ಧಾರ್ಮಿಕ ಪ್ರಗತಿಗೆ ಜಾತ್ರೆಗಳು ಸಹಕಾರಿಯಾಗಬೇಕು. ಧರ್ಮ ಸಭೆಗಳು ಸಾಮರಸ್ಯ ಮೂಡಿಸುವ ಕೇಂದ್ರಗಳಾಗಬೇಕು ಎಂದು ನೊಣವಿನಕೇರಿ ಕಾಡಸಿದ್ದೇಶ್ವರ ಮಠದ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮಿಗಳು ಹೇಳಿದರು.
ಸೋಮವಾರ ಲಕ್ಷ್ಮೇಶ್ವರ ಸಮೀಪದ ಗುಲಗಂಜಿಕೊಪ್ಪದ ದುಂಡಿ ಬಸವೇಶ್ವರ ಜಾತ್ರಾಮಹೋತ್ಸವದಲ್ಲಿ ನಡೆದ ಧರ್ಮ ಸಭೆಯಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.ಜಾತ್ರೆಗಳು ಧಾರ್ಮಿಕ ಸಾಮರಸ್ಯ ಬಿತ್ತುವ ಸಾಧನಗಳಾಗಬೇಕು, ಧರ್ಮ ಜಾಗೃತಿಯಿಂದ ಮಾನವನ ಉದ್ಧಾರ ಸಾಧ್ಯ, ಧರ್ಮಗಳು ಮನುಷ್ಯರ ನಡುವೆ ಕಂದಕ ಹುಟ್ಟು ಹಾಕುವ ವ್ಯವಸ್ಥೆಗಳಾಗಬಾರದು. ಶ್ರಾವಣ ಮಾಸದಲ್ಲಿ ನಡೆಯುವ ಧಾರ್ಮಿಕ ಆಚರಣೆಗಳಿಗೆ ವಿಶೇಷ ಅರ್ಥವಿದೆ, ಸಾಮಾಜಿಕ, ಧಾರ್ಮಿಕ ಹಾಗೂ ಸಂಸ್ಕೃತಿಯ ಪ್ರಗತಿಗೆ ಜಾತ್ರೆಗಳ ಕೊಡುಗೆ ಅಪಾರ ಎಂದು ಹೇಳಿದರು.
ಶಾಸಕ ಡಾ. ಚಂದ್ರು ಲಮಾಣಿ ದುಂಡಿ ಬಸವೇಶ್ವರ ಹಾಗೂ ಮುಕ್ತಿಮಂದಿರ ಧರ್ಮಕ್ಷೇತ್ರಗಳು ನಮ್ಮ ಭಾಗದ ಜನರ ಧಾರ್ಮಿಕ ಭಾವೆನಗಳಿಗೆ ಇಂಬು ನೀಡುವ ಮೂಲಕ ಸಾಮಾಜಿಕ ಪ್ರಗತಿಗೆ ಕಾರಣೀಭೂತವಾಗಿವೆ. ಇಂತಹ ಕ್ಷೇತ್ರಗಳ ಅಭಿವೃದ್ಧಿಗೆ ಸಾಧ್ಯವಾದ ಮಟ್ಟಿಗೆ ಸಹಕಾರ ನೀಡುವ ಕಾರ್ಯ ಮಾಡುತ್ತೇನೆ ಎಂದು ಹೇಳಿದರು.ಮಾಜಿ ಸಂಸದ ಮಂಜುನಾಥ ಕುನ್ನೂರ ಮಾತನಾಡಿ, ಗದಗ, ಹಾವೇರಿ ಧಾರವಾಡ ಜಿಲ್ಲೆಗಳ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಮೂಲಕ ವರದಾ ಮತ್ತು ಬೇಡ್ತಿ ನದಿ ಜೋಡಣೆಯಿಂದ ಸಾವಿರಾರು ಎಕರೆ ಜಮೀನು ನೀರಾವರಿಗೆ ಒಳಪಡಲಿದೆ. ಇದರಿಂದ ಈ ಕ್ಷೇತ್ರಗಳ ಅಭಭಿವೃದ್ಧಿ ಸಾಧ್ಯವಾಗುತ್ತದೆ. ಈ ಭಾಗದ ಸಂಸದರು ನದಿ ಜೋಡಣೆಯ ಬಗ್ಗೆ ಪ್ರಧಾನಮಂತ್ರಿಗೆ ಮನವರಿಕೆ ಮಾಡಿಕೊಡುವ ಮೂಲಕ ಒಪ್ಪಿಗೆ ಪಡೆದು ಕಾರ್ಯಗತಗೊಳಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.
ಈ ವೇಳೆ ಮುಕ್ತಿ ಮಂದಿರ ಧರ್ಮ ಕ್ಷೇತ್ರದ ವಿಮಲ ರೇಣುಕ ವೀರ ಮುಕ್ತಿ ಮುನಿ ಶಿವಾಚಾರ್ಯ ಸ್ವಾಮೀಜಿ, ಮಳೆ ಮಲ್ಲಿಕಾರ್ಜುನ ಶ್ರೀಗಳು, ಗಂಜಿಗಟ್ಟಿಯ ವೈಜನಾಥ ಶ್ರೀಗಳು, ಹೂವಿನ ಶಿಗ್ಲಿಯ ವಿರಕ್ತ ಮಠದ ಚನ್ನವೀರ ಶ್ರೀಗಳು ಮಾತನಾಡಿದರು.ಸಭೆಯಲ್ಲಿ ಬಸವರಾಜ ಕೊಟಗಿ, ಗೋನಾಳ ಗ್ರಾಪಂ ಸದಸ್ಯ ಪದ್ಮರಾಜ ಪಾಟೀಲ, ಬಸಣ್ಣ ಬೆಂಡಿಗೇರಿ, ನಿಂಗನಗೌಡ್ರ ಹೊಸಗೌಡ್ರ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಅಪ್ಪಣ್ಣ ರಾಮಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ವೇಳೆ ಸುಧಾ ಮಾದರ, ದುಂಡಪ್ಪ ರಾಮಣ್ಣವರ, ಬಸಣ್ಣ ಬೆಂಡಿಗೇರಿ, ಸೋಮಣ್ಣ ಬೆಟಗೇರಿ, ನೀಲಪ್ಪಗೌಡ ದುರಗನಗೌಡರ, ದುಂಡಪ್ಪ ರಾಯಣ್ಣವರ, ಈರಣ್ಣ ಅಂಕಲಕೋಟಿ, ಎಂ.ಕೆ. ಕಳ್ಳಿಮಠ, ಈರಣ್ಣ ಬಿಂಕದಕಟ್ಟಿ, ವೆಂಕಟೇಶ ಮಾತಾಡೆ ಸೇರಿದಂತೆ ಅನೇಕರು ಇದ್ದರು.