ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಪಟ್ಟಣದ ಶ್ರೀ ಮರಡಿ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಪಟ್ಟಣದ ದೊಡ್ಡ ಕೆರೆ ಪಕ್ಕದ ಬಯಲು ಕುಸ್ತಿ ಕಣದಲ್ಲಿ ಗುರುವಾರ ನಡೆದ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಜಟ್ಟಿಗಳು ಮದಗಜಗಳಂತೆ ಸೆಣಸಿ 25 ಸಾವಿರಕ್ಕೂ ಅಧಿಕ ಕುಸ್ತಿ ಪ್ರೇಮಿಗಳನ್ನು ರಂಜಿಸಿದರು.ಬಯಲು ಕುಸ್ತಿ ಕಣದಲ್ಲಿ ಪ್ರಮುಖ 6 ಜೋಡಿ ಸೇರಿ 25ಕ್ಕೂ ಅಧಿಕ ಜೋಡಿಗಳ ಜಂಗೀ ನಿಖಾಲಿ ಕುಸ್ತಿಗಳು ನಡೆದವು. ಅತ್ತ ಕಣದಲ್ಲಿ ಜಟ್ಟಿಗಳು ಪರಸ್ಪರ ಸೆಣಸುತ್ತಿದ್ದರೆ ನೆರೆದ ಪ್ರೇಕ್ಷಕರು ಹೇ ಪೈಲ್ವಾನ್ ನೀ ಗೆಲ್ಲಬೇಕ.. ಬೇಡೋ, ತಗೋ ಅವನ್ನ ಎತ್ತಿ ಒಗಿ, ಪಂಚರ.. ಕುಸ್ತಿ ಸಮಾ ಮಾಡಬೇಡಿ ಎಂದು ಕಿರುಚುತ್ತ ಸಿಳ್ಳೆ, ಚಪ್ಪಾಳೆ ತಟ್ಟಇ ಹುರಿದುಂಬಿಸಿದರು. ಪೈಲ್ವಾನರ ಕಟ್ಟುಕಟ್ಟಾದ ದೇಹ ಕಂಡು ಪುಳಕಿತರಾದರು. ಬ್ಯಾಂಡ್ ಬಜಾವೋ ಎಂದು ನಿರೂಪಕರು ಹೇಳುತ್ತಿದ್ದಂತೆ ಬ್ಯಾಂಡ್ ಸಪ್ಪಳ ಮೊಳಗುತ್ತಿದ್ದಂತೆಯೇ ಕುಸ್ತಿ ರಂಗು ಪಡೆದವು.ನೆತ್ತಿ ಸುಡುವ ಬಿರುಬಿಸಿಲಿನಲ್ಲಿ ಆರಂಭವಾದ ಪೈಲ್ವಾನರ ಕಾದಾಟ ಸಂಜೆ ಆಗುತ್ತಿದ್ದಂತೆಯೇ ರಂಗೇರಿತು. ಜಯಶಾಲಿಯಾದ ಪೈಲ್ವಾನರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. 25 ಸಾವಿರಕ್ಕೂ ಅಧಿಕ ಕುಸ್ತಿ ಪ್ರೇಮಿಗಳು ಸಾಕ್ಷಿಯಾದರು.
ಮಹಾರಾಷ್ಟ್ರ ಕೇಸರಿ ಸಿಕಂದರನ ಚಿತ್ ಮಾಡಿದ ಪಂಜಾಬ್ ಕೇಸರಿ ಹಿತೇಶ್:ಮಹಾರಾಷ್ಟ್ರ ಕೇಸರಿ ಪೈಲ್ವಾನ್ ಸಿಕಂದರ್ ಶೇಖ್ ಕ್ಷಣಾರ್ಧದಲ್ಲಿ ಪೇಚ್ ಡಾವ್ ಮೂಲಕ ಹಿಂದಿನಿಂದ ಎತ್ತಿ ಹಾಕಿ ಪಂಜಾಬ್ ಭಾರತ ಕೇಸರಿ ಹಿತೇಶ್ ಕಾಲಾರನ್ನು ಚಿತ್ ಮಾಡಿ ಗೆಲುವಿನ ನಗೆ ಬೀರಿ, ಪ್ರೇಕ್ಷಕರನ್ನು ರಂಜಿಸಿದರು.ಮಹಾರಾಷ್ಟ್ರ ಚಾಂಪಿಯನ್ ಜಯ ಜಾಧವ ಹಾಗೂ ಬೆಳಗಾವಿ ಪೈಲ್ವಾನ್ ಸಂಜು ಇಂಗಳಗಿ ಮಧ್ಯೆ ಜಯಕ್ಕಾಗಿ ತೀವ್ರ ಸೆಣಸಾಟ ನಡೆದರೂ ಕೊನೆಗೆ ಪಂದ್ಯ ಸಮಬಲಗೊಂಡಿತು. ಎಲ್ಲರೂ ಹೆಚ್ಚಿನ ನಿರೀಕ್ಷೆ ಹೊಂದಿದ್ದ ಕಂಗ್ರಾಳಿಯ ಪೈಲ್ವಾನ್ ಪಾರ್ಥ್ ಪಾಟೀಲ ನ್ಯಾಷನಲ್ ಚಾಂಪಿಯನ್ ರಾಮ ಪವಾರ್‌ಗೆ ಸೋಲಿನ ರುಚಿ ತೋರಿಸಿದರು.
ಬೈಲಹೊಂಗಲದ ಪೈಲ್ವಾನ್ ಆರ್ಹಾನ್ ಅವರು ಪೈ.ಓಂಕಾರ ಗೊಡಕಿಯನ್ನು ಚಿತ್ ಮಾಡಿದರು. ಬೈಲಹೊಂಗಲದ ದೃವ ಕೊಲ್ಲಾಪುರದ ಧನಂಜಯನಿಗೆ ಮಣ್ಣುಮುಕ್ಕಿಸಿದರು. ಬೈಲಹೊಂಗಲದ ಪೈಲ್ವಾನ್ ಸಿದ್ದು ಧಾರವಾಡದ ಬಸವರಾಜನನ್ನು ಸೋಲಿಸಿ ಸಂಭ್ರಮಿಸಿದರು.ಚಿಕ್ಕಬಾಗೇವಾಡಿಯ ಶಂಕರ ಜೋತೆ ಅಶೋಕ ಇಂಡಿ ಸೆಣಸಾಟ ರೋಮಾಂಚನಕಾರಿಯಾಗಿತ್ತು. ಆದರೆ ಫಲಿತಾಂಶ ಬಾರದೆ ಸಮಬಲವಾಯಿತು. ಶಾಸಕ ಮಹಾಂತೇಶ ಕೌಜಲಗಿ ಸಭೀಕರೊಂದಿಗೆ ಕುಸ್ತಿ ವಿಕ್ಷೀಸಿದರು.
ಮಹಾಂತಯ್ಯ ಶಾಸ್ತ್ರೀ ಆರಾದ್ರಿಮಠ, ಸಣ್ಣಬಸಪ್ಪ ಕುಡಸೋಮಣ್ಣವರ, ಬಾಬು ಕುಡಸೋಮಣ್ಣವರ, ರಾಮಲಿಂಗ ಕುಡಸೋಮಣ್ಣವರ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದರು. ಶಂಕರೆಪ್ಪ ತುರಮರಿ, ಚನ್ನಪ್ಪ ಬೆಟಗೇರಿ, ಮಲ್ಲಿಕಾರ್ಜುನ ಮೊರಬದ, ಶಿವಬಸ್ಸು ಕುಡಸೋಮಣ್ಣವರ, ಶಂಕರೆಪ್ಪ ಕಡಕೋಳ, ಅಶೋಕ ಮತ್ತಿಕೊಪ್ಪ, ಉಳವಪ್ಪ ಉಪ್ಪಿನ, ವೀರಣ್ಣ ಸಾಲಿಮಠ, ಸುನಿಲ ವಳಸಂಗ, ಶಿವು ಬೆಳಗಾಂವಿ, ದುಂಡಪ್ಪ ತುರಮರಿ, ಅಬ್ದುಲ್ ರೆಹಮಾನ್ ನಂದಗಡ, ಕಾರ್ಯದರ್ಶಿ ಮಲ್ಲಿಕಾರ್ಜುನ ಗೌರಿ ಇತರರು ಇದ್ದರು. ನಿವೃತ್ತ ಶಿಕ್ಷಕ ದುಂಡಪ್ಪ ಅಕ್ಕಿ ನಿರೂಪಿಸಿದರು.ವರ್ತಿಸಿದ್ಧ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿ , ಜಾತ್ರಾ ಕಮಿಟಿ ಸಹಕಾರದಲ್ಲಿ ಅಧ್ಯಕ್ಷ ಬಿ.ಎಂ. ಕುಡಸೋಮಣ್ಣವರ, ಉಪಾಧ್ಯಕ್ಷ ಜಿ.ಎಸ್. ಬೋಳನ್ನವರ ಮಾರ್ಗದರ್ಶನದಲ್ಲಿ ಕುಸ್ತಿ ಪಂದ್ಯಗಳು ನಡೆದವು.