ರಾಜಕಾರಣಿಯನ್ನು ರಾಷ್ಟ್ರಕಾರಣಿಯಾಗಿಸುತ್ತಿದ್ದ ಜವರಪ್ಪಗೌಡ

| Published : Jun 21 2024, 01:00 AM IST

ರಾಜಕಾರಣಿಯನ್ನು ರಾಷ್ಟ್ರಕಾರಣಿಯಾಗಿಸುತ್ತಿದ್ದ ಜವರಪ್ಪಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ಸಂಘದ ವತಿಯಿಂದ ಪಾರ್ವತಮ್ಮ ಪಿ.ಎನ್.ಜವರಪ್ಪಗೌಡ ಪತ್ರಿಕಾ ಪ್ರಶಸ್ತಿಯನ್ನು ಪತ್ರಕರ್ತರಾದ ರಾಜು ಮಳವಳ್ಳಿ, ಗಣಂಗೂರು ನಂಜೇಗೌಡ ಅವರಿಗೆ ಕುವೆಂಪು ಅವರ ಪುತ್ರಿ ತಾರಿಣಿ ಕೆ.ಚಿದಾನಂದಗೌಡ ಪ್ರದಾನ ಮಾಡಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜಕೀಯ ಕ್ಷೇತ್ರದಲ್ಲಿ ಎರಡು ರೀತಿಯ ವ್ಯಕ್ತಿಗಳಿರುತ್ತಾರೆ. ಒಬ್ಬರು ''''''''ರಾಜಕಾರಣಿ'''''''', ಇನ್ನೊಬ್ಬರು ''''''''ರಾಷ್ಟ್ರಕಾರಣಿ'''''''' (ಸ್ಟೇಟ್ಸ್ ಮನ್) ರಾಜಕಾರಣಿ ಯಾವಾಗಲೂ ಮುಂದಿನ ಚುನಾವಣೆಯ ಬಗ್ಗೆ ಚಿಂತಿಸುತ್ತಾನೆ, ಆದರೆ ರಾಷ್ಟ್ರಕಾರಣಿ ಮುಂದಿನ ಜನಾಂಗದ ಬಗ್ಗೆ ಚಿಂತಿಸುತ್ತಾನೆ. ಜವರಪ್ಪಗೌಡರು ತಮ್ಮ ಸಂಪರ್ಕಕ್ಕೆ ಬಂದ ರಾಜಕಾರಣಿಯನ್ನು ರಾಷ್ಟ್ರಕಾರಣಿಯಾಗಿ ಪರಿವರ್ತಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ವಿಶ್ರಾಂತ ಕುಲಪತಿ ಡಾ.ಕೆ.ಚಿದಾನಂದಗೌಡ ಹೇಳಿದರು.

ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಗುರುವಾರ ಆಯೋಜಿಸಿದ್ದ ಪಾರ್ವತಮ್ಮ ಪಿ.ಎನ್.ಜವರಪ್ಪಗೌಡ ಪತ್ರಿಕಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಧಕರನ್ನು ಅಭಿನಂದಿಸಿ ಮಾತನಾಡಿ, ರಾಷ್ಟ್ರಕಾರಣಿಯಿಂದ ಜನಹಿತ ಕಾರ್ಯಗಳು ನಡೆದು ರಾಷ್ಟ್ರಕ್ಕೆ ಒಳಿತಾಗುತ್ತದೆ. ಅಂತಹ ಮಹತ್ವದ ಕೆಲಸವನ್ನು ಜವರಪ್ಪಗೌಡ ಮಾಡಿದ್ದಾರೆ ಎಂದು ಬಣ್ಣಿಸಿದರು.

ಜವರಪ್ಪಗೌಡರು ನಮ್ಮನ್ನು ಕುವೆಂಪು ಅವರ ಮನೆಯಿಂದ ಬಂದಿದ್ದಾರೆ ಎಂದು ಅತ್ಯಂತ ಆತ್ಮೀಯತೆ ಪ್ರೀತಿಯಿಂದ ಮಾತನಾಡುತ್ತಿದ್ದರು. ಅವರ ನೆನಪು ನಮ್ಮಲ್ಲಿ ಸದಾ ಹಸಿರಾಗಿರುತ್ತದೆ. ಜವರಪ್ಪ ಗೌಡರು ಅನೇಕ ಕ್ಷೇತ್ರಗಳಲ್ಲಿ ಕೆಲಸ ಮಾಡಿದಂತೆ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿದ ಗಣ್ಯರಾಗಿದ್ದಾರೆ. ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಿರುವುದು ಅವರ ಆತ್ಮಕ್ಕೆ ಶಾಂತಿ ದೊರೆತಂತಾಗುತ್ತದೆ ಎಂದರು.

ಬೆಂಗಳೂರಿನ ವಿಜಯ ಸಂಜೆ ಕಾಲೇಜಿನ ಸಹ ಪ್ರಾಧ್ಯಾಪಕ ಶಾಂತರಾಜು ಮಾತನಾಡಿ, ಶಿಕ್ಷಣ, ಆರೋಗ್ಯ, ಪತ್ರಿಕೆಯು ಈ ಹಿಂದೆ ಸೇವೆ ಆಗಿತ್ತು, ಆದರೆ ಇಂದು ಅದು ಉದ್ಯಮಗಳಾಗಿ ಬದಲಾಗಿ ಲಾಭ ನಷ್ಟದ ಲೆಕ್ಕಾಚಾರದಲ್ಲಿ ತೊಡಗಿರುವುದು ದುರಂತ ಎಂದು ವಿಷಾದಿಸಿದರು.

ಪತ್ರಿಕೆ ಈ ಸಮಾಜಕ್ಕೆ ಏನು ಕೊಡಬಹುದು ಎನ್ನುವುದನ್ನ ಸಾಕ್ಷೀಭೂತವಾಗಿ ತೋರಿಸಿಕೊಟ್ಟವರು ಜವರಪ್ಪಗೌಡರು. ಇಂದು ಸೇವೆ ಕಳಚಿಕೊಂಡು ಉದ್ಯಮವಾಗಿ ಬದಲಾಗಿ ಲಾಭ ನಷ್ಟದ ಲೆಕ್ಕಾಚಾರದಲ್ಲಿ ತೊಡಗಿವೆ ಎಂದು ವಿಷಾದಿಸಿದರು. ಪತ್ರಿಕೆಗಳನ್ನು ಮೂರ್ಖ ರಾಯಭಾರಿ ಎನ್ನಬಹುದು. ಯಾವಾಗ ದೃಶ್ಯಮಾಧ್ಯಮಗಳು ಬಂದವೋ ಜನರ ಗಮನ ಪತ್ರಿಕಾ ಮಾಧ್ಯಮದ ಕಡೆಯಿಂದ ಆ ಕಡೆ ವಾಲಿತು ಎಂದರು.

ಈ ವೇಳೆ ಪಾರ್ವತಮ್ಮ ಪಿ.ಎನ್.ಜವರಪ್ಪಗೌಡ ಪತ್ರಿಕಾ ಪ್ರಶಸ್ತಿಯನ್ನು ಪತ್ರಕರ್ತರಾದ ರಾಜು ಮಳವಳ್ಳಿ, ಗಣಂಗೂರು ನಂಜೇಗೌಡ ಅವರಿಗೆ ಕುವೆಂಪು ಅವರ ಪುತ್ರಿ ತಾರಿಣಿ ಕೆ.ಚಿದಾನಂದಗೌಡ ಅವರು ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ದತ್ತಿ ದಾನಿ ಪಿ.ಜೆ. ಚೈತನ್ಯ ಕುಮಾರ್, ಉಷಾ ಚೈತನ್ಯಕುಮಾರ್‌, ಸಾಹಿತಿ ಎಚ್.ಎಸ್. ಮುದ್ದೆಗೌಡ, ಸಂಘದ ಲೋಕೇಶ್ ಚಂದಗಾಲು, ನಾಗರತ್ನ ಭಾಗವಹಿಸಿದ್ದರು.