ಸಾರಾಂಶ
ಹಾವೇರಿ: ನೆಲ, ಜಲ, ಭಾಷೆ ವಿಚಾರ ಬಂದಾಗ ಹೋರಾಟದ ಮುಂಚೂಣಿಯಲ್ಲಿರುವ ಜಯ ಕರ್ನಾಟಕ ಸಂಘಟನೆ ಜನರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಂಡಿರುವುದು ಇತರ ಸಂಘಟನೆಗಳಿಗೆ ಮಾದರಿಯಾಗಿದೆ ಎಂದು ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ ಹೇಳಿದರು.
ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಜಯ ಕರ್ನಾಟಕ ಸಂಘಟನೆ ಜಿಲ್ಲಾ ಘಟಕವು ಸರ್ಜಿ ರೇಣುಕಾ ದೇವಧರ ಆಸ್ಪತ್ರೆ ಸಹಯೋಗದೊಂದಿಗೆ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.ಜನರ ಆರೋಗ್ಯದ ಹಿತದೃಷ್ಟಿಯಿಂದ ಉಚಿತವಾಗಿ ಆರೋಗ್ಯ ತಪಾಸಣೆ ನಡೆಸುತ್ತಿರುವುದು ಹೆಮ್ಮೆಯ ಸಂಗತಿ. ಸಣ್ಣಪುಟ್ಟ ಸಮಸ್ಯೆಗಳಿಗೆ ಆಸ್ಪತ್ರೆಗೆ ಹೋಗಿ ಹಣ ಖರ್ಚು ಮಾಡುವುದಕ್ಕಿಂತ ಸಾರ್ವಜನಿಕರು, ಹಿರಿಯ ನಾಗರಿಕರು, ಮಹಿಳೆಯರು ಎಲ್ಲ ವರ್ಗದ ವಯೋಮಾನದವರು ತಪಾಸಣೆಗೆ ಒಳಪಟ್ಟು ಶಿಬಿರದ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಸರ್ಜಿ ದೇವಧರ ಆಸ್ಪತ್ರೆಯ ವೈದ್ಯ ಡಾ. ಮಧು ಕೆ.ಆರ್. ಮಾತನಾಡಿ, ಕನ್ನಡಿಗರು ಹೇಗೆ ವಿಶಾಲ ಹೃದಯದವರು ಇದ್ದಾರೋ ಹಾಗೆ ಜಯ ಕರ್ನಾಟಕ ಸಂಘಟನೆಯವರು ವಿಶಾಲ ಹೃದಯ ಹೊಂದಿದ್ದಾರೆ. ಜನರಿಗೆ ಆರೋಗ್ಯ ತಪಾಸಣೆ ಶಿಬಿರ ಮಾಡುವ ಮೂಲಕ ಅರ್ಥಪೂರ್ಣ ಆಚರಣೆ ಮಾಡುತ್ತಿದ್ದಾರೆ. ಶಿಬಿರದಲ್ಲಿ ಬಿಪಿ, ಶುಗರ್, ಇಸಿಜಿ, ಮೈಕೈ ನೋವು, ಮಂಡಿ ನೋವು ಹೀಗೆ ವಿವಿಧ ಸಾಮಾನ್ಯ ಕಾಯಿಲೆಗಳ ತಪಾಸಣೆ ಮಾಡಲಾಗುತ್ತಿದೆ. ಯಲುಬುಕೀಲು ತಜ್ಞರು, ಮಕ್ಕಳ ತಜ್ಞರು, ಹೆಣ್ಣು ಮಕ್ಕಳ ತಜ್ಞರು ಲಭ್ಯವಿದ್ದು, ಜನಸಾಮಾನ್ಯರು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಮುಖಂಡರಾದ ಜಗದೀಶ ಬಸೇಗಣ್ಣಿ ಮಾತನಾಡಿ, ಉಚಿತ ತಪಾಸಣೆ ಶಿಬಿರ ಒಳ್ಳೆಯ ಕಾರ್ಯಕ್ರಮವಾಗಿದೆ. ಈ ತರಹದ ತಪಾಸಣೆಗಳು ಸತತವಾಗಿ ಹಾವೇರಿಯಲ್ಲಿ ನಡೆಯಬೇಕು. ಎಲ್ಲರೂ ಜಿಲ್ಲಾಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಲು ಆಗುವುದಿಲ್ಲ. ಬಡವರಿಗಾಗಿ ಶಿಬಿರ ಆಯೋಜಿಸುವುದು ಅಗತ್ಯವಿದೆ. ಇದರ ಸದುಪಯೋವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.
ಶಿಬಿರದ ಉದ್ಘಾಟನೆ ನಂತರ ಸಂಜೆ ನಾಲ್ಕು ಗಂಟೆಯ ವರೆಗೂ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು. ಶಿಬಿರದಲ್ಲಿ ನಗರ ಸೇರಿದಂತೆ ಗ್ರಾಮೀಣ ಭಾಗದ ಜನರು ಭಾಗವಹಿಸಿದ್ದರು. ಮಹಿಳೆಯರು, ಪುರುಷರು, ವಯೋವೃದ್ಧರಾದಿಯಾಗಿ ಎಲ್ಲ ವರ್ಗದ ಜನರು ಸರದಿ ಸಾಲಿನಲ್ಲಿ ನಿಂತು ನೊಂದಣಿ ಮಾಡಿಸಿಕೊಳ್ಳುವ ಮೂಲಕ ಬಿ.ಪಿ, ಶುಗರ್, ಇಸಿಜಿ ಪರೀಕ್ಷಾ ತಪಾಸಣೆಗೆ ಒಳಗಾದರು. ವೈದ್ಯರು ಕೂಡ ತಪಾಸಣೆ ವರದಿ ನೋಡಿ ಸೂಕ್ತ ಮಾತ್ರೆ ತೆಗೆದುಕೊಳ್ಳುವಂತೆ ಸಲಹೆ ನೀಡಿದರು.ಜಯ ಕರ್ನಾಟಕ ಸಂಘಟನೆ ರಾಜ್ಯ ಸಂಘಟನಾ ಕಾರ್ಯದರ್ಶಿ ರಮೇಶ ಆನವಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೂಳೆ ತಜ್ಞ ಡಾ. ನವೀನ ರಾಯ್ಕರ್, ಮಕ್ಕಳ ತಜ್ಞ ವಿಕಾಸ ಕೆ.ಜಿ., ಡಾ. ರಾಘು, ಸ್ತ್ರೀ ರೋಗ ತಜ್ಞೆ ಡಾ. ಪವಿತ್ರಾ, ಸಂಘಟನೆ ಜಿಲ್ಲಾಧ್ಯಕ್ಷ ಸುಭಾಷ ಬೆಂಗಳೂರು, ಪ್ರಮುಖರಾದ ಸತೀಶ ಮಡಿವಾಳರ, ರಮೇಶ ಜಾಲಿಹಾಳ ಉಪಸ್ಥಿತರಿದ್ದರು.