ಸಾರಾಂಶ
ಹೋರಾಟಗಾರರ ಮೇಲೆ ಪೊಲೀಸ್ ದೌರ್ಜನ್ಯ ಖಂಡಿಸಿ ಡಿ.12ರಿಂದ ರಾಜ್ಯಾದ್ಯಂತ ಹಳ್ಳಿಹಳ್ಳಿಯಲ್ಲಿ ಹೋರಾಟದ ಜತೆ, ಹತ್ತರಗಿ ಮತ್ತು ಹಿರೇಬಾಗೇವಾಡಿ ಟೋಲ್ ನಾಕಾ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಲಾಗುವುದು ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಘೋಷಿಸಿದ್ದಾರೆ.
ಬೆಳಗಾವಿ : 2ಎ ಮೀಸಲಾತಿಗೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದ ಲಿಂಗಾಯತ ಪಂಚಮಸಾಲಿ ಸಮಾಜದ ಹೋರಾಟಗಾರರ ಮೇಲೆ ಪೊಲೀಸ್ ದೌರ್ಜನ್ಯ ಖಂಡಿಸಿ ಡಿ.12ರಿಂದ ರಾಜ್ಯಾದ್ಯಂತ ಹಳ್ಳಿಹಳ್ಳಿಯಲ್ಲಿ ಹೋರಾಟದ ಜತೆ, ಹತ್ತರಗಿ ಮತ್ತು ಹಿರೇಬಾಗೇವಾಡಿ ಟೋಲ್ ನಾಕಾ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಲಾಗುವುದು ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಘೋಷಿಸಿದ್ದಾರೆ.
ನಗರದ ಗಾಂಧಿ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಸಮಾಜದ ಹೋರಾಟಗಾರರ ಮೇಲೆ ಎಡಿಜಿಪಿ ಹಿತೇಂದ್ರ ಹಲ್ಲೆ ಮಾಡಿದ್ದಾರೆ. ಅವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮಫ್ತಿಯಲ್ಲಿದ್ದ ಪೊಲೀಸರು ಹೋರಾಟಗಾರರ ಮೇಲೆ ಕಲ್ಲೆಸೆದರು. ಬಳಿಕ ಲಾಠಿ ಚಾರ್ಜ್ ಮಾಡಿ ಪೊಲೀಸರು ದೌರ್ಜನ್ಯ ಎಸಗಿದ್ದಾರೆ. ಇದನ್ನು ಖಂಡಿಸಿ ಪ್ರತಿ ಹಳ್ಳಿಹಳ್ಳಿಯಲ್ಲಿ ಹೋರಾಟ ಮಾಡುತ್ತೇವೆ ಎಂದು ಘೋಷಿಸಿದರು.
ನಮ್ಮ ಸಮಾಜದ ರೈತರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ನಮ್ಮ ಸಮಾಜದವರ ಹೆಸರು ಕೆಡಿಸುವ ಹುನ್ನಾರ ಮಾಡಿದರು. ಮೊದಲು ಪೊಲೀಸರ ಮೇಲೆ ಕಲ್ಲು ಎಸೆದಿದ್ದು ಮಫ್ತಿಯಲ್ಲಿದ್ದ ಪೊಲೀಸರು. ಸಮಾಜದ ರೈತರ ಮೇಲೆ ದಾಖಲಾದ ಪ್ರಕರಣ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
20 ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯ ಬೇಡಿಕೆಗೆ ಸ್ಪಂದಿಸದ ಕಾರಣ ಮಂಗಳವಾರ ಸುವರ್ಣ ಸೌಧಕ್ಕೆ ಮುತ್ತಿಗೆ ಹೋರಾಟಕ್ಕೆ ಕರೆ ಕೊಟ್ಟಿದ್ದೆವು. ಲಕ್ಷಾಂತರ ಜನ ಕೊಂಡಸಕೊಪ್ಪದ ಬಳಿ ಪ್ರತಿಭಟನಾ ಸಮಾವೇಶ ನಡೆಸಿದಾಗ ಮೂವರು ಸಚಿವರು ಆಗಮಿಸಿ ಉತ್ತಮ ಅಭಿಪ್ರಾಯ ಹೇಳಿದ್ದರೆ ಮುಗಿದು ಹೋಗುತ್ತಿತ್ತು. ಆದರೆ ನಿಮ್ಮ ಅಭಿಪ್ರಾಯ ಆಲಿಸಲು ಬಂದಿದ್ದೇವೆ ಎಂದರು. ಇದಕ್ಕೆ ನಮ್ಮ ಸಮಾಜದವರು ಮುಖ್ಯಮಂತ್ರಿ ಬರಬೇಕೆಂದು ಪಟ್ಟು ಹಿಡಿದರು ಎಂದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಲಿಂಗಾಯತ ವಿರೋಧಿಯಾಗಿದೆ. ಲಾಠಿ ಚಾಜ್೯ ಮಾಡಿದ ಮೇಲೆ ಮಾತುಕತೆಗೆ ಕರೆಯುತ್ತೇವೆ ಎಂದು ಹೇಳಿಕೆ ನೀಡಿದರು. ಮೊದಲೇ ಹೇಳಿದ್ದರೆ ಹೋಗುತ್ತಿದ್ದೆವು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯಚನ್ನರಾಜ ಹಟ್ಟಿಹೊಳಿ, ಪಂಚಮಸಾಲಿಮುಖಂಡರಾದ ನಿಂಗಪ್ಪ ಪಿರೋಜಿ, ಆರ್.ಪಿ. ಪಾಟೀಲ, ರಾಜು ಮಗದುಮ್ಮ ಮತ್ತಿತರರು ಉಪಸ್ಥಿತರಿದ್ದರು.