ಸಾರಾಂಶ
- ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಪದ್ಮಶ್ರೀ ಡಾ.ಸಿ.ಎನ್. ಮಂಜುನಾಥ್ ----ಕನ್ನಡಪ್ರಭ ವಾರ್ತೆ ಮೈಸೂರು
ಜಯದೇವ ಹೃದ್ರೋಗ ಸಂಸ್ಥೆ ದೇಶಕ್ಕೆ ಮಾದರಿಯಾಗಿದೆ ಎಂದು ಕೇಂದ್ರ ಸರ್ಕಾರದ ಸಂಸದೀಯ ಸ್ಥಾಯಿ ಸಮಿತಿಯಂತಹ ತಂಡ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಪದ್ಮಶ್ರೀ ಡಾ.ಸಿ.ಎನ್. ಮಂಜುನಾಥ್ ತಿಳಿಸಿದರು.ಮೈಸೂರಿನ ಜಯದೇವ ಹೃದ್ರೋಗ ಸಂಸ್ಥೆಯ ವಾರ್ಷಿಕೋತ್ಸವವನ್ನು ಉದ್ಘಾಟಿಸಿ, ಕ್ರೀಡೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಜಯದೇವ ಸಂಸ್ಥೆ 16 ವರ್ಷದಲ್ಲಿ ಶೇ.500 ರಷ್ಟು ಪ್ರಗತಿ ಸಾಧಿಸಿದ್ದು, 75 ಲಕ್ಷ ಜನರಿಗೆ ಚಿಕಿತ್ಸೆ ನೀಡಲಾಗಿದೆ. 8 ಲಕ್ಷ ಜನರಿಗೆ ಆಪರೇಷನ್ ಮಾಡಿದ್ದೇವೆ ಎಂದರು.
2 ಸಾವಿರ ಹಾಸಿಗೆ ಸಾಮರ್ಥ್ಯವಿರುವ ಜಯದೇವ ಆಸ್ಪತ್ರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದು, 45 ರಿಂದ 50 ಸಂಘ ಸಂಸ್ಥೆಗಳು ನಿರಂತರವಾಗಿ ಆಸ್ಪತ್ರೆಗೆ ದಾನ ಮಾಡುತ್ತ ಬರುತ್ತಿರುವುದರಿಂದ ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿದೆ. ಆಸ್ಪತ್ರೆಗೆ ಬರುವ ರೋಗಿಯನ್ನು ಬದುಕಿಸುವುದರಿಂದ ಅವರ ಇಡಿ ಸಂಸಾರ ನೆಮ್ಮದಿಯಾಗಿರುತ್ತದೆ ಎಂದು ಅವರು ಹೇಳಿದರು.ಹೀಗಾಗಿ, ರೋಗಿಗಳೊಂದಿಗೆ ಪ್ರೀತಿಯಿಂದ ಮಾತನಾಡಿ, ಮಾನವೀಯತೆಯಿಂದ ಕೆಲಸ ಮಾಡಿ. ನಾವೆಲ್ಲಾ ಪ್ರತಿದಿನ ಯಂತ್ರಗಳ ರೀತಿ ಕೆಲಸ ಮಾಡುತ್ತಿದ್ದೇವೆ. ಒತ್ತಡಗಳಿಂದ ವೈದ್ಯರ ಆಯಸ್ಸು ಕಡಿಮೆಯಾಗುತ್ತಿದೆ. ಆದ್ದರಿಂದ ಕ್ರೀಡೆ ಮನುಷ್ಯನ ಆರೋಗ್ಯಕ್ಕೆ ಔಷಧವಾಗಿದ್ದು, ದೇಹಕ್ಕೆ, ಮನಸ್ಸಿಗೆ ಯೌವನವನ್ನು ತರುತ್ತದೆ. ಬಾಲ್ಯದ ನೆನಪುಗಲು ಬರುತ್ತವೆ, ನಾವೆಲ್ಲ ಒಂದಾಗಿ ಸೇರುತ್ತೇವೆ. ಪ್ರತಿಯೊಬ್ಬರು ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು. ನಮ್ಮ ವೃತ್ತಿ ಕೌಶಲ್ಯತೆ ಬೇರೆಯವರ ಜೀವನದಲ್ಲಿ ಎಷ್ಟು ನಗು ತಂದಿದೆ ಅನ್ನುವುದು ಮುಖ್ಯವಾಗಿದ್ದು, ನನ್ನ ಗಮನಕ್ಕೆ ಬಂದ ಒಂದೇ ಒಂದು ರೋಗಿಯನ್ನು ಹಣ ಇಲ್ಲವೆಂದು ಚಿಕಿತ್ಸೆ ನೀಡದೆ ಕಳಿಸಿಲ್ಲ ಎಂದು ಅವರು ತಿಳಿಸಿದರು.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಸದಾನಂದ್, ವೈದ್ಯರಾದ ಡಾ. ಶಂಕರ್ ಶಿರಾ, ಡಾ. ಶಿವಸ್ವಾಮಿ ಸೋಸಲೆ, ಡಾ. ಸಂತೋಷ್, ಡಾ. ರಾಜೀತ್, ಡಾ. ವೀಣಾ ನಂಜಪ್ಪ, ಡಾ. ಹೇಮಾ ರವೀಶ್, ಡಾ. ಜಯಪ್ರಕಾಶ್, ಡಾ. ಪಶುಪತಿ, ಡಾ. ಮಂಜುನಾಥ್, ಡಾ. ಭಾರತಿ, ಡಾ. ರಶ್ಮಿ, ಡಾ. ಶ್ರೀನಿಧಿ ಹೆಗ್ಗಡೆ, ಡಾ. ನಿಖಿಲ್, ಡಾ. ದೇವರಾಜ, ನರ್ಸಿಂಗ್ ಅಧೀಕ್ಷಕ ಹರೀಶ್ ಕುಮಾರ್, ಪಿ.ಆರ್.ಓ. ಚಂಪಕಮಾಲ, ಗಾಯಕ ಹರ್ಷ, ರೂಪಶ್ರಿ ಇದ್ದರು.