ಸಾರಾಂಶ
ವೆಂಕಟೇಶ್ ಕಲಿಪಿ
ಕನ್ನಡಪ್ರಭ ವಾರ್ತೆ ಬೆಂಗಳೂರುಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಜೆಐಸಿಸಿಆರ್) ಬರೋಬ್ಬರಿ 20 ವರ್ಷ ಕಡಿಮೆ ಸಂಬಳಕ್ಕೆ ದುಡಿದು ಜೀವನವನ್ನು ಸವೆಸಿದ 10 ಮಂದಿ ಸ್ಟಾಫ್ ನರ್ಸ್‌ಗಳಿಗೆ (ಸ್ಟೈಪೆಂಡರಿ) ಹೈಕೋರ್ಟ್ ಸೇವಾ ಕಾಯಮಾತಿಯ ವರ ನೀಡಿದೆ.
ಜೆಐಸಿಸಿಆರ್‌ನಲ್ಲಿ 2004-2007ರಿಂದ ಸ್ಟಾಫ್ ನರ್ಸ್‌ಗಳಾಗಿ (ಸ್ಟೈಪೆಂಡ್) ಸೇವೆ ಸಲ್ಲಿಸುತ್ತಿರುವ ಬಿ.ಜೆ.ರಾಣಿ ಹಾಗೂ ಆಯೂಬ್ ಖಾನ್ ಸೇರಿದಂತೆ ಒಟ್ಟು 10 ಮಂದಿಯ ಸೇವೆ ಕಾಯಂಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸಿ ಎನ್.ಎಸ್.ನ್ಯಾಯಮೂರ್ತಿ ಸಂಜಯಗೌಡ ಅವರು ಆದೇಶಿಸಿದ್ದಾರೆ.ತಮ್ಮ ಸೇವಾ ಕಾಯಂಮಾತಿಗೆ ನಿರಾಕರಿಸಿದ್ದ ಜೆಐಸಿಸಿಆರ್ ಹಾಗೂ ಸರ್ಕಾರದ ಕ್ರಮ ಪ್ರಶ್ನಿಸಿ ಬಿ.ಜೆ.ರಾಣಿ ಹಾಗೂ ಆಯೂಬ್ ಖಾನ್ ಸೇರಿದಂತೆ 10 ಮಂದಿ ಸಲ್ಲಿಸಿದ್ದ ಅರ್ಜಿಗಳನ್ನು ಪುರಸ್ಕರಿಸಿದ ನ್ಯಾಯಪೀಠ ಈ ಆದೇಶ ಮಾಡಿದೆ.
ಸ್ಟಾಫ್ ನರ್ಸ್ 5 ವರ್ಷ ಸೇವೆ ಪೂರೈಸಿದರೆ, ಅವರ ಸೇವೆ ಕಾಯಂಗೊಳಿಸಲಾಗುತ್ತಿದೆ. ಆದರೆ, ಎರಡು ದಶಕಗಳಿಂದ ಸೇವೆ ಸಲ್ಲಿಸಿರುವ ಅರ್ಜಿದಾರರ ಸೇವೆ ಮಾತ್ರ ಕಾಯಂಗೊಳಿಸಿಲ್ಲ. ಆರಂಭದಲ್ಲಿ ಅವರಿಗೆ ಮಾಸಿಕ ಮೂರು ಸಾವಿರ ಶಿಷ್ಯ ವೇತನ ನೀಡಲಾಗುತ್ತಿತ್ತು. ಹಾಗಾಗಿ, ಕೂಡಲೇ ಹತ್ತು ವರ್ಷ ಸೇವೆ ಪೂರೈಸಿದ ದಿನದಿಂದ ಅರ್ಜಿದಾರರ ಸೇವೆ ಕಾಯಂಗೊಳಿಸಬೇಕು. ವೇತನ ಹಾಗೂ ಹಿಂಬಾಕಿ ಸೇರಿದಂತೆ ಎಲ್ಲಾ ಸೌಲಭ್ಯ ಕಲ್ಪಿಸಬೇಕು. ಸರ್ಕಾರಕ್ಕೆ ಹಣಕಾಸು ತೊಂದರೆ ಇರುವುದರಿಂದ ಅರ್ಜಿದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ದಿನಾಂಕದಿಂದ ಅಂದರೆ 2023ರ ಜೂ.15/16ರಿಂದ ವೇತನ ಹಿಂಬಾಕಿ ಪಡೆಯಬಹುದು ಎಂದು ನ್ಯಾಯಪೀಠ ಆದೇಶಿಸಿದೆ.ಪ್ರಕರಣವೇನು?: 2004 ಮತ್ತು 2007ರ ನಡುವೆ ಜೆಐಸಿಸಿಆರ್‌ನಲ್ಲಿ ಸ್ಟಾಫ್ ನರ್ಸ್‌ಗಳಾಗಿ (ಸ್ಟೈಪೆಂಡರಿ) ನೇಮಕಗೊಂಡು ಕೆಲಸ ಮಾಡುತ್ತಾ ಬಂದಿರುವ ಅರ್ಜಿದಾರರನ್ನು ಸೇವೆಗೆ ಕಾಯಂಗೊಳಿಸಲು ಸರ್ಕಾರ ಮತ್ತು ಜೆಐಸಿಸಿಆರ್ ನಿರಾಕರಿಸಿತ್ತು. ಇದರಿಂದ 2023ರಲ್ಲಿ ಅವರು ಹೈಕೋರ್ಟ್ ಸಲ್ಲಿಸಿದ್ದರು. ತಾವು ಕಳೆದ ಎರಡು ದಶಕಗಳಿಂದಲೂ ಸೇವೆ ಸಲ್ಲಿಸುತ್ತಾ ಬಂದಿದ್ದೇವೆ. ಆರಂಭದಲ್ಲಿ ತಮಗೆ ಕೇವಲ ಮೂರು ಸಾವಿರ ಸ್ಟೈಪೆಂಡ್ ನೀಡಲಾಗುತ್ತಿತ್ತು. ಕಾಯಂ ಸ್ಟಾಫ್ ನರ್ಸ್ ಸಲ್ಲಿಸುವ ಸೇವೆಯನ್ನೇ ತಮ್ಮಿಂದ ಪಡೆದಕೊಳ್ಳಲಾಗುತ್ತಿದ್ದರೂ ಕಡಿಮೆ ಸಂಬಳ ನೀಡಲಾಗುತ್ತಿದೆ. ಅವರಿಗೆ ನೀಡುವ ಸೌಲಭ್ಯ ನಮಗೆ ನೀಡುತ್ತಿಲ್ಲ. ಇದು ‘ಸಮಾನ ಸಮಾನಕ್ಕೆ ಸಮಾನ ವೇತನ’ ಎಂಬ ಸಂವಿಧಾನ ತತ್ವಕ್ಕೆ ಉಲ್ಲಂಘನೆ ಎಂದು ಆಕ್ಷೇಪಿಸಿದ್ದರು.
ಕಾಯಂ ಸ್ಟಾಫ್ ನರ್ಸ್ (ಶಿಷ್ಯ ವೇತನ) ಹುದ್ದೆಗಳು ಮಂಜೂರಾಗಿದಕ್ಕೆ ಅರ್ಜಿದಾರರ ಸೇವೆ ಕಾಯಂಗೊಳಿಸಲು ಸಾಧ್ಯವಿಲ್ಲ ಎಂದು ಜೆಐಸಿಸಿಆರ್ ವಾದಿಸಿತ್ತು. ಈ ವಾದ ತಿರಸ್ಕರಿಸಿರುವ ಹೈಕೋರ್ಟ್, 2023ರ ಅಕ್ಟೋಬರ್‌ನಲ್ಲಿ ಸರ್ಕಾರ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಜೆಐಸಿಸಿಆರ್‌ನಲ್ಲಿ 898 ಸ್ಟಾಫ್ ನರ್ಸ್‌ಗಳನ್ನು ಭರ್ತಿ ಮಾಡಲು ಸರ್ಕಾರ ಅನುಮೋದಿಸಿದೆ. ಸಂಸ್ಥೆಯ ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ ಹುದ್ದೆಗಳ ಭರ್ತಿಗೆ ಸರ್ಕಾರದ ಅನುಮತಿ ಪಡೆಯುವ ಅಗತ್ಯವೇ ಇಲ್ಲ. ಮುಖ್ಯಮಂತ್ರಿ ಅಧ್ಯಕ್ಷರಾಗಿರುವ ಆಡಳಿತ ಮಂಡಳಿ ಅನುಮೋದನೆ ನೀಡಿದರೆ ಸಾಕು. ಅರ್ಜಿದಾರರ ನೇಮಕಾತಿ ಕಾಲಕಾಲಕ್ಕೆ ನೇಮಕಾತಿ ನವೀಕರಣವಾಗುತ್ತಾ ಬಂದಿರುವುದರಿಂದ ಅವರ ನೇಮಕಾತಿಗೆ ಸರ್ಕಾರ ಅನುಮತಿ ಇರುವುದು ಸ್ಪಷ್ಟವಾಗುತ್ತದೆ. ಇಂತಹ ಸಂದರ್ಭದಲ್ಲಿ ಸಂಸ್ಥೆ ಸ್ಟಾಫ್ ನರ್ಸ್ (ಶಿಷ್ಯ ವೇತನ) ಹುದ್ದೆಗಳು ಮಂಜೂರಾಗಿಲ್ಲ ಎಂದು ಹೇಳಲಾಗದು ಎಂದು ನುಡಿದಿದೆ.