ಜಯಮೃತ್ಯುಂಜಯ ಸ್ವಾಮೀಜಿ, ಕಾಶೆಪ್ಪನವರ್ ಸಭೆಗಳು ರದ್ದು

| Published : Apr 18 2025, 12:41 AM IST

ಜಯಮೃತ್ಯುಂಜಯ ಸ್ವಾಮೀಜಿ, ಕಾಶೆಪ್ಪನವರ್ ಸಭೆಗಳು ರದ್ದು
Share this Article
  • FB
  • TW
  • Linkdin
  • Email

ಸಾರಾಂಶ

ಪಂಚಮಸಾಲಿ ಸಮಾಜದ ಹಿರಿಯ ಮುಖಂಡ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ಪಕ್ಷದಿಂದ ಉಚ್ಚಾಟಿಸಿದ ನಂತರ ಉಂಟಾದ ಗೊಂದಲದ ಬಗ್ಗೆ ಕುರಿತಂತೆ ಕೂಡಲ ಸಂಗಮದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಡಾ.ವಿಜಯಾನಂದ ಕಾಶೆಪ್ಪನವರ್ ಕರೆದಿದ್ದ ಎರಡೂ ಸಭೆ ರದ್ದಾಗಿವೆ ಎಂದು ಲಿಂಗಾಯತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಎಚ್.ಎಸ್. ಶಿವಶಂಕರ ಹೇಳಿದ್ದಾರೆ.

- ಎ.ಬಿ.ಪಾಟೀಲ ನೇತೃತ್ವದಲ್ಲಿ ಎಲ್ಲರನ್ನೂ ಒಗ್ಗೂಡಿಸಿ ಸಭೆಗೆ ನಿರ್ಧಾರ: ಎಚ್.ಎಸ್.ಶಿವಶಂಕರ

- ಸಭೆ ನಡೆಸುವ ದಿನಾಂಕ ಪ್ರಕಟಿಸುವವರೆಗೂ ತಾಳ್ಮೆಯಿಂದ ಸಹಕರಿಸಬೇಕು ಸಮಾಜಕ್ಕೆ ಮನವಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಪಂಚಮಸಾಲಿ ಸಮಾಜದ ಹಿರಿಯ ಮುಖಂಡ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ಪಕ್ಷದಿಂದ ಉಚ್ಚಾಟಿಸಿದ ನಂತರ ಉಂಟಾದ ಗೊಂದಲದ ಬಗ್ಗೆ ಕುರಿತಂತೆ ಕೂಡಲ ಸಂಗಮದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಡಾ.ವಿಜಯಾನಂದ ಕಾಶೆಪ್ಪನವರ್ ಕರೆದಿದ್ದ ಎರಡೂ ಸಭೆ ರದ್ದಾಗಿವೆ ಎಂದು ಲಿಂಗಾಯತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಎಚ್.ಎಸ್. ಶಿವಶಂಕರ ಹೇಳಿದರು.

ನಗರದ ತಮ್ಮ ನಿವಾಸದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ ನಾಯಕರಿಗೆ ಅನ್ಯಾಯ ಆದಾಗ ಸಮಾಜ ಬಾಂಧವರ ಹೋರಾಟ ಸಾಮಾನ್ಯ. ಅದರ ಬಗ್ಗೆ ನಾವು ಹೆಚ್ಚು ಹೇಳುವುದಿಲ್ಲ. ಆದರೆ, ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಸಮಾಜದ ಒಬ್ಬ ನಾಯಕನಿಗೆ ಅನ್ಯಾಯ ಆಗುತ್ತದೆಂದು ಬೆಂಬಲಕ್ಕೆ ನಿಂತಿದ್ದು ಸ್ವಾಗತಾರ್ಹ ನಿಲುವು ಎಂದರು.

ರಾಜಕೀಯ ನಾಯಕರಿಗೆ ಎಲ್ಲ ಮಠ, ಪೀಠಗಳೂ ಬೆಂಬಲಕ್ಕೆ ನಿಲ್ಲುವುದು ಸಾಮಾನ್ಯ. ಸ್ವಾಮೀಜಿಗಳು ಪೀಠ ಕಟ್ಟುವುದು, ಸಮಾಜ ಕಟ್ಟುವುದು, ಸಮಾಜ ಬಾಂಧವರಿಗೆ ನೋವಾದಾಗ ಬೆಂಬಲಕ್ಕೆ ನಿಲ್ಲುವುದೆಲ್ಲಾ ಸಹಜ. ಅದನ್ನೇ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಸಹ ಮಾಡಿದ್ದಾರೆ. ನಂತರದ ಹೇಳಿಕೆಗಳು, ಅದಕ್ಕೆ ಪ್ರತಿ ಹೇಳಿಕೆಗಳು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಸಂದೇಶಗಳಿಂದ ಸಾಕಷ್ಟು ಗೊಂದಲ ಉಂಟಾಗಿ, ಮತ್ತಷ್ಟು ಅಸಮಾಧಾನಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಹೇಳಿದರು.

ಸಮಾಜದಲ್ಲಿ ಅಂತಹದ್ದೆಲ್ಲಾ ಮುಂದುವರಿಯಬಾರದು ಎಂಬ ಸದುದ್ದೇಶದಿಂದ ಸಮಾಜದ ಮುಖಂಡ, ಮಾಜಿ ಶಾಸಕ ಎ.ಬಿ.ಪಾಟೀಲರ ನೇತೃತ್ವದಲ್ಲಿ ಎಲ್ಲರನ್ನೂ ಒಗ್ಗೂಡಿಸಿ, ಒಂದೇ ವೇದಿಕೆಯಲ್ಲಿ ಸಭೆ ನಡೆಸಲು ನಿರ್ಧರಿಸಲಾಗಿದೆ. ಹಾಗಾಗಿ, ಏ.19ಕ್ಕೆ ವಿಜಯಾನಂದ ಕಾಶೆಪ್ಪನವರ್‌ ಕರೆದಿದ್ದ ಸಭೆ, ಏ.20ಕ್ಕೆ ಶ್ರೀಗಳು ಕರೆದಿದ್ದ ಸಭೆಗಳನ್ನು ರದ್ದುಪಡಿಸಲಾಗಿದೆ. ಸಮಾಜ ಬಾಂಧ‍ವರು ಗಮನ ಹರಿಸಬೇಕು ಎಂದರು.

ಒಂದು ಕಡೆ ಮುರುಗೇಶ ನಿರಾಣಿ, ಮತ್ತೊಂದು ಕಡೆ ಬಸವನಗೌಡ ಪಾಟೀಲ್ ಯತ್ನಾಳ್, ಇನ್ನೊಂದು ಕಡೆ ವಿಜಯಾನಂದ ಕಾಶೆಪ್ಪನವರ್ ಇದ್ದಾರೆ. ಎಲ್ಲರನ್ನೂ ಒಗ್ಗೂಡಿಸಿ, ಒಂದೇ ವೇದಿಕೆಯಲ್ಲಿ ಸೇರಿಸಿ, ಸಭೆ ನಡೆಸುವ ನಿಟ್ಟಿನಲ್ಲಿ ಮಾಜಿ ಶಾಸಕ ಎ.ಬಿ.ಪಾಟೀಲ ಹಾಗೂ ನಾನೂ ಒಳಗೊಂಡಂತೆ ಅನೇಕರು ಕೆಲಸ ಮಾಡುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಸಭೆಯ ದಿನಾಂಕ ನಿರ್ಧರಿಸಲಾಗುವುದು. ಅಲ್ಲಿವರೆಗೂ ಸಮಾಜ ಬಾಂಧವರು ತಾಳ್ಮೆಯಿಂದ ಸಹಕರಿಸಬೇಕು ಎಂದು ಶಿವಶಂಕರ್ ಮನವಿ ಮಾಡಿದರು.

ಸಮಾಜದ ರಾಜ್ಯ ಯುವ ಘಟಕ ಅಧ್ಯಕ್ಷ, ಮಾಜಿ ಮೇಯರ್ ಬಿ.ಜಿ.ಅಜಯಕುಮಾರ, ಬಿ.ಜಿ. ಭರತ್, ಮುರುಗೇಶ, ಮಯೂರ, ಆನಂದ ಜಿರಲಿ ಇತರರು ಇದ್ದರು.

- - -

(ಬಾಕ್ಸ್‌-1) * ವ್ಯಕ್ತಿ, ಪಕ್ಷ ಪರ ನಿಲ್ಲದಂತೆ ಮನವಿಗೆ ಶ್ರೀಗಳ ಸಹಮತದಾವಣಗೆರೆ: ಯತ್ನಾಳ್ ಉಚ್ಚಾಟನೆ ಕಾರಣಕ್ಕೆ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಧ್ವನಿ ಎತ್ತಿದ ನಡೆಯನ್ನು ಕೆಲವರು ಒಪ್ಪಿದ್ದಾರೆ, ಕೆಲವರು ಸ್ವಾಮೀಜಿ ಒಬ್ಬ ವ್ಯಕ್ತಿ, ಪಕ್ಷದ ಪರ ನಿಂತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ವಾಮೀಜಿಗಳಿಗೂ ಒಬ್ಬರ ಪರವಾಗಿ, ಒಂದು ಪಕ್ಷದ ಪರವಾಗಿ ನಿಲ್ಲದಂತೆ ಮನವಿ ಮಾಡಲಾಗಿದೆ. ಅದಕ್ಕೆ ಶ್ರೀಗಳೂ ಸಹಮತ ವ್ಯಕ್ತಪಡಿಸಿದ್ದಾರೆ. ಸ್ವಾಮೀಜಿ ಕಟ್ಟಡಗಳನ್ನು ಕಟ್ಟಿಲ್ಲ. ಹಣ ಮಾಡುವತ್ತ ಹೆಜ್ಜೆ ಹಾಕಿಲ್ಲ. ಬದಲಿಗೆ ನಾವು ಪಂಚಮಸಾಲಿಗಳು ಎಂದು ಎದೆತಟ್ಟಿಕೊಂಡು ಹೇಳಿಕೊಳ್ಳುವಂತಹ ಸನ್ನಿವೇಶ ತಂದಿದ್ದಾರೆ ಎಂದು ಶ್ರೀಗಳನ್ನು ಶಿವಶಂಕರ್‌ ಸಮರ್ಥಿಸಿಕೊಂಡರು.

- - -

(ಕೋಟ್‌) * ಡಾ.ಶಿವಶಂಕರಪ್ಪ ಹೇಳಿಕೆಗೆ ಬೆಂಬಲ ಜಾತಿ ಗಣತಿ ವಿಚಾರದಲ್ಲಿ ಅ.ಭಾ.ವೀ.ಮ. ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆ, ನಿಲುವಿಗೆ ನನ್ನ ಬೆಂಬಲವಿದೆ. ಈ ಹಿನ್ನೆಲೆ ಎಲ್ಲ ಪಕ್ಷದಲ್ಲಿರುವ ಸಮಾಜದ ಶಾಸಕರು ಒಗ್ಗಟ್ಟು ಪ್ರದರ್ಶಿಸಬೇಕು. ಜಾತಿ ಸಮೀಕ್ಷೆ ತಿರಸ್ಕರಿಸುವ ಎಲ್ಲ ಹೋರಾಟಗಳಲ್ಲಿ ಶಾಸಕರು ಸ್ವಪ್ರೇರಣೆಯಿಂದ ಭಾಗವಹಿಸಬೇಕು. ಈ ಸಮೀಕ್ಷೆ ಕೈಬಿಟ್ಟು ಮರುಸಮೀಕ್ಷೆಗೆ ಸರ್ಕಾರ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಬೇಕು.

- ಎಚ್.ಎಸ್.ಶಿವಶಂಕರ, ಪಂಚಮಸಾಲಿ ಮುಖಂಡ, ಮಾಜಿ ಶಾಸಕ

- - -

-17ಕೆಡಿವಿಜಿ3, 4.ಜೆಪಿಜಿ:

ದಾವಣಗೆರೆಯಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಎಚ್.ಎಸ್. ಶಿವಶಂಕರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.