ಸಾರಾಂಶ
ಕನ್ನಡಪ್ರಭ ವಾರ್ತೆ ಕುಂದಾಪುರಕೊನೆಗೂ ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಅದಕ್ಕೆ ಪೂರ್ವಭಾವಿಯಾಗಿ ಹೆಗ್ಡೆ ಇಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಳ್ಳಲಿದ್ದಾರೆ.ಇಂದು ಸಂಜೆ 4 ಗಂಟೆಗೆ ತಾನು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿ ಮುಂದಿನ ನನ್ನ ರಾಜಕೀಯ ನಡೆಯನ್ನು ನಿರ್ಧರಿಸುವುದೆಂದು ನಿರ್ಣಯಿಸಿದ್ದೇನೆ ಎಂದವರು ತಮ್ಮ ಆಪ್ತರಿಗೆ ಸಂದೇಶ ಕಳಹಿಸಿದ್ದಾರೆ.ಸೇವೆಯೇ ಪರಮೋಧರ್ಮ ಎಂದಿರುವ ಅವರು ಕರಾವಳಿಯ ಅಭಿವೃದ್ಧಿಯ ಗುರಿಸಾಧನೆಗಾಗಿ, ತಮ್ಮೆಲ್ಲರ ಸೇವೆಗಾಗಿ ರಾಜಕೀಯದಲ್ಲಿ ಮತ್ತೆ ಸಕ್ರಿಯನಾಗಲು ನಿರ್ಧರಿಸಿದ್ದೇನೆ ಎಂದವರು ಸಂದೇಶದಲ್ಲಿ ಹೇಳಿದ್ದಾರೆ. ಹೆಗ್ಡೆ ಅವರ ರಾಜಕೀಯ ಜೀವನಕೂರ್ಗಿ ಜಯಪ್ರಕಾಶ್ ಹೆಗ್ಡೆ, ಜನತಾ ಪಕ್ಷದಿಂದ ರಾಜಕೀಯಕ್ಕೆ ಪದಾರ್ಪಣೆ ಮಾಡಿ, ಬ್ರಹ್ಮಾವರ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಜೆ.ಎಚ್.ಪಟೇಲ್ ಸಂಪುಟದಲ್ಲಿ ಮಂತ್ರಿಯಾಗಿದ್ದರು. ನಂತರ ಜನತಾ ಪಕ್ಷದ ವಿದಳನದಿಂದ 2 ಬಾರಿ ಬ್ರಹ್ಮಾವರ ಕ್ಷೇತ್ರದಿಂದ ಪಕ್ಷೇತರರಾಗಿ ಗೆದ್ದರು. ಕ್ಷೇತ್ರ ಪುನರ್ವಿಂಗಡಣೆಯಿಂದ ಬ್ರಹ್ಮಾವರ ಕ್ಷೇತ್ರ ರದ್ದಾದಾಗ, ಕುಂದಾಪುರ ಕ್ಷೇತ್ರದಿಂದ ಸ್ಪರ್ಧಿಸಿ ಸೋತರು. 2012ರಲ್ಲಿ ಕಾಂಗ್ರೆಸ್ ಸೇರಿ ಉಡುಪಿ - ಚಿಕ್ಕಮಗಳೂರು ಲೋಕಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರು, ಆದರೆ 2014ರಲ್ಲಿ ಸೋತರು.ನಂತರ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಎದುರು ಬಂಡಾಯವಾಗಿ ಸ್ಪರ್ಧಿಸಿ ಸೋತರು. ಪಕ್ಷ ವಿರೋಧಿ ಚಟುವಟಿಕೆಗಾಗಿ ಕಾಂಗ್ರೆಸ್‌ನಿಂದ 6 ವರ್ಷಗಳ ಅವಧಿಗೆ ಅಮಾನತುಗೊಂಡರು. ನಂತರ ಬಿಜೆಪಿ ಸೇರಿ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಿಂ.ವ.ಗಳ ಆಯೋಗದ ಅಧ್ಯಕ್ಷರಾದರು. ಬಿಜೆಪಿ ಅಧಿಕಾರ ಕಳೆದುಕೊಂಡರೂ ಹೆಗ್ಡೆ ಮಾತ್ರ ಆಯೋಗದ ಅಧ್ಯಕ್ಷರಾಗಿಯೇ ಮುಂದುವರಿದರು. ಆಯೋಗದ ಅವಧಿ ಮುಗಿದರೂ, ಕಾಂಗ್ರೆಸ್ ಸರ್ಕಾರ 2 ಬಾರಿ ಅವರ ಅಧಿಕಾರಾವಧಿಯನ್ನು ವಿಸ್ತರಿಸಿತು, ಆಗಲೇ ಅವರು ಕಾಂಗ್ರೆಸ್‌ನತ್ತ, ಕಾಂಗ್ರೆಸ್ ಅವರತ್ತ ಒಲವು ತೋರಿಸಿದ್ದು ಸ್ಪಷ್ಟವಾಗಿತ್ತು. ಅದೀಗ ಹೆಗ್ಡೆ ಅವರು ಕಾಂಗ್ರೆಸ್ ಸೇರುವ ಮೂಲಕ ನಿಜವಾಗುತ್ತಿದೆ.