ಜಾತಿಗಣತಿ ಆಯೋಗ ಅವಧಿ 15 ದಿನ ವಿಸ್ತರಣೆ?

| Published : Jan 30 2024, 02:02 AM IST

ಸಾರಾಂಶ

ಪರಿಷ್ಕೃತ ಸಾಮಾಜಿಕ, ಶೈಕ್ಷಣಿಕ ವರದಿ (ಜಾತಿ ಗಣತಿ) ಸಲ್ಲಿಸಲು ಆಯೋಗದ ಅಧಿಕಾರಾವಧಿಯನ್ನು ಇನ್ನೂ 15 ದಿನಗಳ ಕಾಲ ವಿಸ್ತರಿಸುವಂತೆ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್‌ ಹೆಗ್ಡೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ವಿಸ್ತರಣೆ ಕೋರಿ ಮನವಿ ಸಲ್ಲಿಸಿದ ಜಯಪ್ರಕಾಶ್‌ ಹೆಗ್ಡೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಪರಿಷ್ಕೃತ ಸಾಮಾಜಿಕ, ಶೈಕ್ಷಣಿಕ ವರದಿ (ಜಾತಿ ಗಣತಿ) ಸಲ್ಲಿಸಲು ಆಯೋಗದ ಅಧಿಕಾರಾವಧಿಯನ್ನು ಇನ್ನೂ 15 ದಿನಗಳ ಕಾಲ ವಿಸ್ತರಿಸುವಂತೆ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್‌ ಹೆಗ್ಡೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.ಪ್ರಸ್ತುತ ಆಯೋಗದ ಅಧಿಕಾರವಧಿ ಜ.31ಕ್ಕೆ ಕೊನೆಗೊಳ್ಳಲಿದೆ. ಇತ್ತೀಚೆಗೆ ಜಯಪ್ರಕಾಶ್‌ ಹೆಗ್ಡೆ ಅವರು ವರದಿ ಸಿದ್ಧಗೊಂಡಿದೆ, ಅದನ್ನು ಮುದ್ರಿಸಲಾಗುತ್ತಿದೆ, ವರದಿ ಸಲ್ಲಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಮಯ ಕೇಳಲಾಗುವುದು. ಸಮಯ ನೀಡಿದರೆ ಜ.30ರೊಳಗೆ ವರದಿ ಸಲ್ಲಿಸಲು ಉದ್ದೇಶಿಸಲಾಗಿದೆ ಎಂದಿದ್ದರು, ಆದರೆ ಈಗ ದಿಢೀರೆಂದು ಆಯೋಗದ ಅಧಿಕಾರವಧಿಯನ್ನು 15 ದಿನ ವಿಸ್ತರಿಸುವಂತೆ ಕೇಳಿರುವುದು ಕುತೂಹಲ ಮೂಡಿಸಿದೆ.ಆಯೋಗದ ಅಧಿಕಾರಾವಧಿ ಕಳೆದ ನವೆಂಬರ್‌ನಲ್ಲಿ ಕೊನೆಗೊಂಡಿತ್ತು. ಆದರೆ ಜಾತಿ ಗಣತಿ ವರದಿ ಸಲ್ಲಿಸಲು ಇನ್ನೂ ಹೆಚ್ಚಿನ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜ.31ರವರೆಗೆ ವಿಸ್ತರಿಸಿತ್ತು. ಆದರೆ ಈಗ ಪುನಃ ಫೆ.15ರವರೆಗೆ ವಿಸ್ತರಣೆಗೆ ಆಯೋಗ ಕೋರಿದೆ. ಆಯೋಗದ ಅಧಿಕಾರಾವಧಿಯನ್ನು ವಿಸ್ತರಿಸುವ ಸಂಬಂಧ ರಾಜ್ಯ ಸರ್ಕಾರ ಅಧಿಕೃತವಾಗಿ ಅಧಿಸೂಚನೆ ಹೊರಡಿಸುವುದು ಬಾಕಿ ಇದೆ.ಪ್ರಬಲ ಸಮುದಾಯಗಳ ವಿರೋಧವಿದ್ದರೂ ಸಹ ಜಾತಿ ಗಣತಿ ವರದಿ ಸ್ವೀಕರಿಸಿ, ಸಚಿವ ಸಂಪುಟದಲ್ಲಿ ಮಂಡಿಸಿ ಚರ್ಚಿಸಲಾಗುವುದು, ಏನಾದರೂ ವ್ಯತ್ಯಾಸಗಳಿದ್ದರೆ ತಜ್ಞರ ಅಭಿಪ್ರಾಯ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಹಲವಾರು ಬಾರಿ ಸ್ಪಷ್ಟಪಡಿಸಿದ್ದಾರೆ.