ಸಾರಾಂಶ
ಬೆಳಗ್ಗೆ ಬಾರ್ಕೂರು ಸಮೀಪದ ಕಚ್ಚೂರು ಶ್ರೀ ಮಾಲ್ತೀದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ ಹೆಗ್ಡೆ, ಅಲ್ಲಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದರು. ನಂತರ ಕೆಮ್ಮಣ್ಣು ಗ್ರಾಮದ ಹಂಪನಕಟ್ಟೆ, ನೇಜಾರು ಮತ್ತಿತರ ಭಾಗದಲ್ಲಿ ಮತ ಪ್ರಚಾರ ನಡೆಸಿ ಸ್ಥಳೀಯ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಅವರು ಮಂಗಳವಾರ ಉಡುಪಿ ವಿಧಾನಸಭಾ ಕ್ಷೇತ್ರದಾದ್ಯಂತ ಭರ್ಜರಿ ಮತಯಾತನೆ ನಡೆಸಿದರು.ಬೆಳಗ್ಗೆ ಬಾರ್ಕೂರು ಸಮೀಪದ ಕಚ್ಚೂರು ಶ್ರೀ ಮಾಲ್ತೀದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ ಹೆಗ್ಡೆ, ಅಲ್ಲಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭ ದೇವಸ್ಥಾನದ ಧರ್ಮದರ್ಶಿ ಗೋಕುಲ್ ದಾಸ್, ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ, ಪ್ರವೀಣ್ ಬಾರ್ಕೂರು, ಶಿವರಾಜ್ ಮಲ್ಲಾರ್ ಮೊದಲಾದವರು ಉಪಸ್ಥಿತರಿದ್ದರು.
ನಂತರ ಕೆಮ್ಮಣ್ಣು ಗ್ರಾಮದ ಹಂಪನಕಟ್ಟೆ, ನೇಜಾರು ಮತ್ತಿತರ ಭಾಗದಲ್ಲಿ ಮತ ಪ್ರಚಾರ ನಡೆಸಿ ಸ್ಥಳೀಯ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದರು.ಮಧ್ಯಾಹ್ನ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ ವಿಶ್ವವಿದ್ಯಾನಿಲಯ)ದ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಅಲ್ಲಿನ ಉಪಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ ವಿಚಾರ ವಿನಿಮಯ ನಡೆಸಿದರು. ನಂತರ ಕಸ್ತೂರ್ಬಾ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಉದ್ಯೋಗಿ ಸಿಬ್ಬಂದಿಯನ್ನು ಕಂಡು ಅಭಿವೃದ್ಧಿಯ ಬಗೆಗಿನ ತಮ್ಮ ಆಶಯಗಳನ್ನು ಹಂಚಿಕೊಂಡು ಮತಯಾಚಿಸಿದರು.
ನಂತರ ಮಣಿಪಾಲದ ಬೆಸ್ಟ್ ಸೆಲ್ಲರ್ ಗಾರ್ಮೆಂಟ್ಸ್ ಉದ್ಯಮಕ್ಕೆ ತೆರಳಿ ಮತಯಾಚನೆ ಮಾಡಿದರು. ಅವರೊಂದಿಗೆ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಪಕ್ಷದ ನಾಯಕರಾದ ಪ್ರಸಾದ್ ರಾಜ್, ಜ್ಯೋತಿ ಹೆಬ್ಬಾರ್, ಮಹಾಬಲ ಕುಂದರ್, ಭಾಸ್ಕರ ರಾವ್ ಕಿದಿಯೂರು, ಗಣೇಶ್ ರಾಜ್ ಸರಳೇಬೆಟ್ಟು ಮತ್ತಿತರು ಭಾಗವಹಿಸಿದ್ದರು.