ಸಾಹಿತ್ಯದಲ್ಲಿಯೂ ಶಿಕ್ಷಕಿ ಜಯಶ್ರೀ ಅಕ್ಷರ ಭಂಡಾರ!

| Published : Sep 05 2025, 01:01 AM IST

ಸಾಹಿತ್ಯದಲ್ಲಿಯೂ ಶಿಕ್ಷಕಿ ಜಯಶ್ರೀ ಅಕ್ಷರ ಭಂಡಾರ!
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಬಾದಾಮಿಇವರು ಕೇವಲ ಶಿಕ್ಷಕಿಯಾಗಿಲ್ಲ. ಸಾಹಿತ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಸಕ್ರಿಯವಾಗಿರುವ ಸಾಹಿತಿಯೂ ಹೌದು. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಜಾಲಿಹಾಳ ಗ್ರಾಮದ ನೂತನ ಪ್ರೌಢಶಾಲೆಯಲ್ಲಿ ಮುಖ್ಯಾಧ್ಯಪಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಜಯಶ್ರೀ ಭಂಡಾರಿ ಶಿಕ್ಷಕ ವೃತ್ತಿಯ ಜತೆಗೆ ಸಾಹಿತ್ಯವನ್ನು ಪ್ರವೃತ್ತಿಯಾಗಿಸಿಕೊಂಡು, ಸಾಕಷ್ಟು ಅಕ್ಷರ ಕೃಷಿ ಮಾಡಿಕೊಂಡಿದ್ದಾರೆ.

ಶಂಕರ ಕುದರಿಮನಿ

ಜಯಶ್ರೀ ಅವರು ಕಥೆ, ಕವನ, ಚುಟುಕು ಹಾಗೂ ವಿಭಿನ್ನ ಮಾದರಿಯ ರುಬಾಯಿ (ಪರ್ಷಿಯನ್‌ ಭಾಷೆಯಲ್ಲಿ 4 ಸಾಲುಗಳನ್ನು ಹೊಂದಿದ ಪದ್ಯ- 1 ಮತ್ತು 4ನೇ ಸಾಲಿನಲ್ಲಿ ಪ್ರಾಸಬದ್ಧವಾಗಿರುತ್ತವೆ), ಗಜಲ್ ಲೇಖನಗಳನ್ನು (ಹಿಂದಿಯಿಂದ ಕನ್ನಡಕ್ಕೆ ಭಾಷಾಂತರ ಮಾಡುವ ಹವ್ಯಾಸ) ಬರೆಯುವುದನ್ನು ಹವ್ಯಾಸವಾಗಿಸಿಕೊಂಡಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಗದ್ಯ ಪದ್ಯ ಲೇಖನಗಳ ಮೂಲಕ ಕವಿಯಿತ್ರಿಯಾಗಿ ಗುರುತಿಸಿಕೊಂಡವರು.

ಜಯಶ್ರೀ ಅವರು ಸೇವಾ ವೃತ್ತಿಗೆ ಚ್ಯುತಿ ಬರದಂತೆ ನಿಭಾಯಿಸುವುದರ ಜತೆಗೆ ತಮಗೆ ಸಿಕ್ಕ ಸಮಯವನ್ನು ವ್ಯರ್ಥವಾಗಿ ಕಳೆಯದೇ ಕವನ, ಕಥೆ, ಗಜಲ್, ಹಾಯ್ಕು, ಗೀತೆ ಇತ್ಯಾದಿ ಅನೇಕ ಪ್ರಕಾರದ ಸಾಹಿತ್ಯ ರಚನಾತ್ಮಕ ಕ್ರಿಯೆಯಲ್ಲಿ ತೊಡಗಿದ್ದಾರೆ. ಇಷ್ಟೇ ಅಲ್ಲ, ಸಾಕಷ್ಟು ಕಡೆ ಅನೇಕ ಉಪನ್ಯಾಸ ನೀಡಿ ಉತ್ತಮ ವಾಗ್ಮಿ ಎನಿಸಿಕೊಂಡಿದ್ದಾರೆ. ಇವರ ಲೇಖನಗಳು ಅನೇಕ ದಿನ ಪತ್ರಿಕೆ ಮತ್ತು ವಾರ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಆಕಾಶವಾಣಿಯಲ್ಲಿ ನುಡಿಯಾಡಿ ಸಾಹಿತ್ಯ ನಡೆ ತೋರಿದ್ದಾರೆ. ಶರಣ ಸಾಹಿತ್ಯ ಪರಿಷತ್, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ತಮ್ಮ ಕಾವ್ಯ ವಾಚನ ಮಾಡಿದ್ದಾರೆ. ಬಾದಾಮಿ ತಾಲೂಕಿನ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸಾಹಿತ್ಯ ಕೃಷಿಯನ್ನು ಮಾಡಿದ್ದಾರೆ.

ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ತಾಲೂಕಾ ಮಕ್ಕಳ ಸಾಹಿತ್ಯ ಸಮಾಗಮದ ಅಧ್ಯಕ್ಷತೆ, ತಾಲೂಕು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷತೆ, ಅಖಿಲ ಭಾರತ ವೀರಶೈವ ಮಹಾಸಭೆಯ ಸದಸ್ಯೆ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಮಂಡಳಿಯ ಸದಸ್ಯೆ, ಅಕ್ಕನ ಬಳಗ ಮಹಿಳಾ ಘಟಕ ಸದಸ್ಯಳಾಗಿ, ಕನ್ನಡ ಸಾಹಿತ್ಯ ಪರಿಷತ್ ಸದಸ್ಯೆ, ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತಿನ ತಾಲೂಕಾ ಘಟಕದ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸಂದ ಗೌರವಗಳು:

ಪ್ರಶಸ್ತಿಗಳು 2004ರಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕಿ, ಶ್ರೀ ಶಿವಯೋಗಿ ಶಿವಪ್ಪಯ್ಯನಮಠ ಇವರ ವತಿಯಿಂದ ಉತ್ತಮ ಶಿಕ್ಷಕಿ, ಬಸವಜ್ಞಾನ ಗುರುಕುಲ ಹುನ್ನೂರು-ಮಧುರಖಂಡಿ ತಾ.ಜಮಖಂಡಿ ಇವರಿಂದ ಉತ್ತಮ ಶಿಕ್ಷಕಿ ಇನ್ನೂ ಹಲವಾರು ಪ್ರಶಸ್ತಿಗಳನ್ನು ಸಂದಿವೆ.--------------