ಸಾರಾಂಶ
ತಾಲೂಕಿನ ಆನೆಗೊಂದಿ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀಜಯತೀರ್ಥ ಗುರುಸಾರ್ವಭೌಮರ ಮಧ್ಯಾರಾಧನೆ ನಿಮಿತ್ತ ಗುರುವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಕನ್ನಡಪ್ರಭ ವಾರ್ತೆ ಗಂಗಾವತಿ
ತಾಲೂಕಿನ ಆನೆಗೊಂದಿ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀಜಯತೀರ್ಥ ಗುರುಸಾರ್ವಭೌಮರ ಮಧ್ಯಾರಾಧನೆ ನಿಮಿತ್ತ ಗುರುವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.ಶ್ರೀಮಠದಲ್ಲಿ ಬೆಳಗ್ಗೆ ಶ್ರೀಜಯತೀರ್ಥರ ಮಧ್ಯಾರಾಧನೆ ಪ್ರಯುಕ್ತ ಶ್ರೀರಾಘವೇಂದ್ರ ಸ್ವಾಮಿಗಳ ವೃಂದಾವನಕ್ಕೆ ವಿಶೇಷವಾಗಿ ಪಂಚಾಮೃತಾಭಿಷೇಕ, ಅರ್ಚನೆ, ವಿವಿಧ ಹೂವುಗಳಿಂದ ಅಲಂಕಾರ, ರಜತ, ರೇಷ್ಮೆ ಅಲಂಕಾರ ನೆರವೇರಿಸಲಾಯಿತು. ಬಳಿಕ ಸರ್ವಸೇವಾ, ಕನಕಮಹಾಪೂಜೆ, ಹಸ್ತೋದಕ, ಮಹಾನೇವೈದ್ಯ, ಅಲಂಕಾರ ಬ್ರಾಹ್ಮಣ ಸಂತರ್ಪಣೆ ಹಾಗೂ ಆರಾಧನೆಯಲ್ಲಿ ಭಾಗವಹಿಸಿದ ನೂರಾರು ಭಕ್ತರಿಗೆ ಅನ್ನ ಪ್ರಸಾದ ವಿತರಣೆ ಜರುಗಿತು.
ಮಧ್ಯಾರಾಧನೆ ಪ್ರಯುಕ್ತ ಶ್ರೀಮಠದ ಮುಂಭಾಗದ ವೇದಿಕೆಯಲ್ಲಿ ವಿವಿಧ ಭಜನಾ ಮಂಡಳಿಗಳಿಂದ ಸುಪ್ರಭಾತ ಸೇವೆ ನಡೆಯಿತು. ಬಳಿಕ ಶ್ರೀಜಯತೀರ್ಥ ಗುರುಸಾರ್ವಭೌಮರು ರಚಿಸಿದ ಶ್ರೀಮನ್ಮನ್ಯಾಯಸುಧಾ ಗ್ರಂಥವನ್ನು ಗಜವಾಹನೋತ್ಸವ ಮೂಲಕ ಆನೆಗುಂದಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಜನಾ ಮಂಡಳಿ ಸದಸ್ಯರು ಕೋಲಾಟ, ನೃತ್ಯ ಗೀತೆಗಳನ್ನು ಪ್ರಸ್ತುತಪಡಿಸಿದರು. ಮಂತ್ರಾಲಯ ದಾಸ ಸಾಹಿತ್ಯ ಪ್ರಾಜೆಕ್ಟ್ ರಾಜ್ಯ ಸಂಚಾಲಕ ವಿದ್ವಾನ್ ಸುಳಾಧಿ ಹನುಮೇಶ್ ಆಚಾರ್ಯ ಶ್ರೀಜಯತೀರ್ಥರ ಕುರಿತು ಉಪನ್ಯಾಸ ನೀಡಿದರು. ಬಳಿಕ ಸಾಮೂಹಿಕ ಭಜನೆ ನಡೆಸಿಕೊಟ್ಟರು. ಸಂಜೆ ಗೆಜ್ಜಿಳ್ಳಿ ಭಜನಾ ಮಂಡಳಿಯಿಂದ ದಾಸವಾಣಿ ಕಾರ್ಯಕ್ರಮ ನಡೆಯಿತು.ಆನೆಗೊಂದಿ ಮಠದ ಶಾಖಾ ವ್ಯವಸ್ಥಾಪಕ ಸುಮಂತ್ ಕುಲಕರ್ಣಿ, ಸಂಜೀವ್ ಕುಲಕರ್ಣಿ, ಪವನಾಚಾರ್ಯ, ನರಸಿಂಹ ಆಚಾರ್ಯ, ವಿಜಯೀಂದ್ರ ಆಚಾರ್ಯ, ಶ್ರೀನಿವಾಸ್, ಸುಧೀಂದ್ರ ಆಚಾರ್ಯ, ವಿಜಯ್ ದೇಸಾಯಿ ಕುಷ್ಟಗಿ ಇತರರಿದ್ದರು.
ನವವೃಂದಾವನಗಡ್ಡೆಯಲ್ಲಿ ಉತ್ತರಾಧಿಮಠದಿಂದ ರಘುವರ್ಯತೀರ್ಥರ ಮಹಿಮೋತ್ಸವ:ಗಂಗಾವತಿ ತಾಲೂಕಿನ ಆನೆಗೊಂದಿಯ ನವವೃಂದಾವನಗಡ್ಡೆಯಲ್ಲಿ ಉತ್ತರಾದಿ ಮಠದಿಂದ ರಘುವರ್ಯ ತೀರ್ಥರ ಮಹಿಮೋತ್ಸವ ಜರುಗಿತು. ಜು.22ರಿಂದ ಪ್ರಾರಂಭಗೊಂಡ ಮಹಿಮೋತ್ಸವ ಜು.27ರವರೆಗೆ ನಡೆಯಲಿದೆ.ಗುರುವಾರ ಬೆಳಗ್ಗೆ ರಘುವರ್ಯ ತೀರ್ಥರ ವೃಂದಾವನ ಸೇರಿದಂತೆ 9 ವೃಂದಾವನಗಳಿಗೆ ವಿಶೇಷ ಪೂಜೆ ಜರುಗಿತು. ರಘುವರ್ಯರ ತೀರ್ಥರ ವೃಂದಾನಕ್ಕೆ ನಿರ್ಮಾಲ್ಯ, ಅಷ್ಟೋತ್ತರ ಪಾರಾಯಣ, ಗುರುಪರಂಪರೆ ಸ್ತೋತ್ರ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.ಈ ಸಂದರ್ಭದಲ್ಲಿ ಅನಿರುದ್ಧಾಚಾರ ಮೈಸೂರು (ಪಾಂಡುರಂಗಿ), ರಂಗೇಶಚಾರ ಮಧುರೈ, ಆನಂದತೀರ್ಥಚಾರ, ಗೋಪಿ ಕೃಷ್ಣಚಾರ, ಹುಲಿರಾಜ ಬಳ್ಳಾರಿ ಉಪನ್ಯಾಸ ನೀಡಿದರು. ಅನೇಕ ಭಕ್ತರು ಭಾಗವಹಿಸಿ ದರ್ಶನ ಪಡೆದರು.