ಮೈಲಾರ ಸೇತುವೆ ಬುಡದಲ್ಲೇ ಜೆಸಿಬಿ ಅಬ್ಬರ

| Published : Mar 05 2025, 12:32 AM IST

ಸಾರಾಂಶ

ಕುಡಿಯುವ ನೀರು ಸಂಗ್ರಹದ ನೆಪದಲ್ಲಿ ಸೇತುವೆಯ ಬುಡದಲ್ಲೇ ಜೆಸಿಬಿಯಿಂದ ಗುಂಡಿ ತೋಡಿ ಸಹಜವಾಗಿ ಹರಿವ ನೀರಿಗೆ ಅವೈಜ್ಞಾನಿಕವಾಗಿ ತಡೆಗಟ್ಟಿದ ಅಧಿಕಾರಿಗಳು ಸೇತುವೆಗೆ ಹಾನಿ ಮಾಡಿದ ಆರೋಪ ಕೇಳಿ ಬರುತ್ತಿದೆ.

ಹಾವೇರಿ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ । ಹರಿಯುವ ನೀರನ್ನು ಅವೈಜ್ಞಾನಿಕವಾಗಿ ತಡೆಗಟ್ಟಿದ ಅಧಿಕಾರಿಗಳು!

ಚಂದ್ರು ಕೊಂಚಿಗೇರಿ

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ಕುಡಿಯುವ ನೀರು ಸಂಗ್ರಹದ ನೆಪದಲ್ಲಿ ಸೇತುವೆಯ ಬುಡದಲ್ಲೇ ಜೆಸಿಬಿಯಿಂದ ಗುಂಡಿ ತೋಡಿ ಸಹಜವಾಗಿ ಹರಿವ ನೀರಿಗೆ ಅವೈಜ್ಞಾನಿಕವಾಗಿ ತಡೆಗಟ್ಟಿದ ಅಧಿಕಾರಿಗಳು ಸೇತುವೆಗೆ ಹಾನಿ ಮಾಡಿದ ಆರೋಪ ಕೇಳಿ ಬರುತ್ತಿದೆ.

ಹೌದು, ವಿಜಯನಗರ ಹಾಗೂ ಹಾವೇರಿ ಜಿಲ್ಲೆಯ ಕೊಂಡಿಯಾದ ಮೈಲಾರ-ಕಂಚರಗಟ್ಟಿ ಮಧ್ಯೆ, ತುಂಗಭದ್ರಾ ನದಿಗೆ ಅಡ್ಡಲಾಗಿ ಕಳೆದ 70ರಿಂದ 80 ದಶಕದಲ್ಲಿ ಸೇತುವೆ ನಿರ್ಮಾಣ ಮಾಡಲಾಗಿದೆ. ನದಿ ತಳದಿಂದ ಮೇಲ್ಮಟ್ಟದವರೆಗೂ ಕರಿ ಕಲ್ಲಿನಿಂದ ಸೇತುವೆಯ ಕಂಬ ನಿರ್ಮಿಸಿದ್ದಾರೆ.

ಈ ಸೇತುವೆಯ ಪಕ್ಕದಲ್ಲೇ ಹಾವೇರಿ ನಗರಕ್ಕೆ ಕುಡಿಯುವ ನೀರು, ಪೂರೈಕೆ ಮಾಡಲು ಜಾಕ್‌ವಾಲ್‌ ನಿರ್ಮಿಸಿದ್ದಾರೆ. ಪ್ರತಿ ಬೇಸಿಗೆಯಲ್ಲಿ ಹಾವೇರಿ ಜಿಲ್ಲೆಯ ಪುರಸಭೆ ಅಧಿಕಾರಿಗಳು ಸಹಜವಾಗಿ ಹರಿಯುವ ನೀರಿಗೆ ಮರಳಿನ ಚೀಲ ಹಾಗೂ ಮಣ್ಣಿನಿಂದ ಅಡ್ಡಗಟ್ಟಿ ನೀರು ಪೂರೈಕೆ ಮಾಡಲಾಗುತ್ತಿದೆ.

ಅಧಿಕಾರಿಗಳ ನಿರ್ಲಕ್ಷ್ಯ:

ಈ ಬಾರಿ ಸೇತುವೆ ಬುಡದಲ್ಲೇ ಜೆಸಿಬಿಯಿಂದ ಮಣ್ಣು ಹಾಕಿ ನೀರು ತಡೆಗಟ್ಟುವ ಕೆಲಸ ಮಾಡುತ್ತಿದ್ದಾರೆ. ಪುರಸಭೆ ಎಂಜಿನಿಯರ್‌ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಸೇತುವೆ ಬುನಾದಿಗೆ ಪೆಟ್ಟು ಬಿದ್ದು ಸೇತುವೆ ಬೀಳುವ ಅಪಾಯವಿದೆ. ಜತೆಗೆ ಈಗಾಗಲೇ ಮಣ್ಣು ಕಿತ್ತು ಹಾಕುವ ಸಂದರ್ಭದಲ್ಲೇ ಸೇತುವೆ ಕಂಬಕ್ಕೆ ಹಾನಿಯಾಗಿ ಹತ್ತಾರು ಕಲ್ಲುಗಳು ಬಿದ್ದಿವೆ.

ನಿಯಮ ಉಲ್ಲಂಘಿಸಿದ ಅಧಿಕಾರಿ:

ಸೇತುವೆ ಬಳಿಯಿಂದ 100 ಮೀಟರ್‌ ವ್ಯಾಪ್ತಿಯ ಜಾಗದಲ್ಲಿ ಯಾವುದೇ ರೀತಿಯ ತಗ್ಗು ಗುಂಡಿ ತೋಡಲು ನಿಷೇಧವಿದೆ. ಇದರಿಂದ ಸೇತುವೆ ಹಾನಿ ಉಂಟಾಗುವ ಸಾಧ್ಯತೆ ಹೆಚ್ಚು ಎಂಬ ಕಾರಣಕ್ಕಾಗಿ ರಚಿಸಿದ್ದ ಕಾನೂನನ್ನೇ ಹಾವೇರಿ ಪುರಸಭೆಯ ಎಇಇ ಉಲ್ಲಂಘಿಸುವ ಜತೆಗೆ ಸೇತುವೆಗೂ ಹಾನಿ ಮಾಡಿದ್ದಾರೆ.

ನದಿಯಲ್ಲಿ ಹೂಳು:

ಸೇತುವೆ ಬುಡದಲ್ಲೇ ಜೆಸಿಬಿ ಬಳಕೆ ಮಾಡಿ ದೊಡ್ಡ ಪ್ರಮಾಣದ ಗುಡ್ಡಿ ತೊಡಿದ್ದಾರೆ. ನೀರನ್ನು ತಡೆಗಟ್ಟಲು ಅಕ್ಕಪಕ್ಕದ ಮಣ್ಣು ತಂದು ನದಿ ಹಾಕುತ್ತಿರುವುದರಿಂದ ನದಿಯಲ್ಲಿ ಹೂಳಿನ ಪ್ರಮಾಣ ಹೆಚ್ಚು ಮಾಡಲಾಗುತ್ತಿದೆ. ನೀರನ್ನು ನಿಲ್ಲಿಸಲು ಮರಳಿನ ಚೀಲಗಳನ್ನು ಬಳಕೆ ಮಾಡುವ ಬದಲು ಸೇತುವೆ ಬುಡದಲ್ಲೇ ಇದ್ದ ದೊಡ್ಡ ಪ್ರಮಾಣದ ಕಲ್ಲು ಮಣ್ಣಿನಿಂದ ಗುಡ್ಡೆ ಹಾಕುತ್ತಿದ್ದಾರೆ. ಎಂಜಿನಿಯರ್‌, ಅಧಿಕಾರಿಗಳೇ ಹೀಗೆ ತಪ್ಪು ಮಾಡಿದರೆ ಹೇಗೆ? ಎಂಬ ಪ್ರಶ್ನೆ ವ್ಯಕ್ತವಾಗಿದೆ.